ಉಣ್ಣಿಗಳು ಈಗ ವಯಸ್ಕ ಅವಸ್ಥೆಯಲಿದ್ದು ದನ ಮತ್ತು ಎಮ್ಮೆಗಳ ಮೂಲಕ ಮನೆಗಳಿಗೆ ತಲುಪುವುದನ್ನು ತಪ್ಪಿಸಲು ಜಾನುವಾರುಗಳ ಮೈಮೇಲೆ ನಿವಾರಕಗಳ ಲೇಪನ ಮತ್ತು ಲಸಿಕೆ ನೀಡುವ ಮೂಲಕ ಉಣ್ಣಿ ನಿಯಂತ್ರಣ ಮಾಡಲು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಕಚೆರಿಯಲ್ಲಿ ಕೆಎಫ್‍ಡಿ ಮತ್ತು ಡೆಂಗಿ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಎಫ್‍ಡಿ ನಿಯಂತ್ರಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಮೇಯಲು ಹೋದ ಹಸು-ಎಮ್ಮೆಗಳ ಮೈಮೇಲೆ ಉಣ್ಣಿಗಳು ಅಂಟಿಕೊಂಡು ಮನೆ-ಕೊಟ್ಟಿಗೆ ತಲುಪುವುದನ್ನು ತಪ್ಪಿಸಲು ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಜಾನುವಾರುಗಳಿಗೆ ನಿವಾರಕಗಳ ಲೇಪನ ಹಾಗೂ ಅಗತ್ಯ ಲಸಿಕೆಯನ್ನು ನೀಡಬೇಕು ಎಂದು ತಿಳಿಸಿದರು.
ಜಿ.ಪಂ ಸಿಇಓ ಎನ್.ಹೇಮಂತ್ ಮಾತನಾಡಿ, ಕೆಎಫ್‍ಡಿ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮವಾಗಿ ಜಾನುವಾರುಗಳಲ್ಲಿ ಉಣ್ಣಿಗಳನ್ನು ನಿಯಂತ್ರಿಸಲು ಕೆಎಂಎಫ್ ಸಂಪರ್ಕಿಸಿ ಎಂಪಿಸಿಎಸ್ ಸೊಸೈಟಿ ಹಾಗೂ ಪಶುಪಾಲನಾ ಇಲಾಖೆಯಡಿ ನೋಂದಣಿಯಾದ ಜಾನುವಾರುಗಳ ಸಂಖ್ಯೆಯ ವರದಿಯನ್ನು ಪಡೆಯುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಜಾನುವಾರುಗಳು ಹೊರಗಡೆ ಮೇಯುವುದನ್ನು ತಪ್ಪಿಸಬೇಕು ಎಂದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 360 ಡೆಂಗಿ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು 02 ಸಾವು ದೃಢಪಟ್ಟಿದೆ. ಡೆಂಗಿ ನಿಯಂತ್ರಿಸಲು ಪ್ರತಿ ವಾರ ಆಶಾ, ಅಂಗನವಾಡಿ ಮತ್ತು ಆರೋಗ್ಯ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಫಾಗಿಂಗ್ ಮಾಡಲಾಗುತ್ತಿದೆ. ಈಗ ಶುಕ್ರವಾರಗಳಂದು ನೀರು ಸಂಗ್ರಹಿಸುವ ಪರಿಕರ ಸ್ವಚ್ಚಗೊಳಿಸುವ ಶುಷ್ಕ ದಿನ ಆಚರಿಸಲಾಗುತ್ತಿದೆ. ಜಿಲ್ಲೆಯ 17 ಕಡೆ ಫಿವರ್ ಕ್ಲಿನಿಕ್ ತೆರೆಯಲಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ 5 ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ 10 ಹಾಸಿಗೆಗಳನ್ನು ಡೆಂಗಿ ಚಿಕಿತ್ಸೆಗಾಗಿ ಮೀಸಲಿರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳು, ಮಳೆ ಕಡಿಮೆ ಆದ ಮೇಲೆ ಡೆಂಗಿ ಹೆಚ್ಚುವ ಸಂಭವ ಇದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಡೆಂಗಿ ಲಕ್ಷಣಗಳಿರುವವರನ್ನು ಫಿವರ್ ಕ್ಲಿನಿಕ್‍ಗೆ ಕರೆ ತರಬೇತಕು. ಹಾಟ್‍ಸ್ಟಾಪ್ ಪ್ರದೇಶಗಳಲ್ಲಿ ಸೊಳ್ಳೆ ನಿವಾರಕಗಳನ್ನು ನೀಡಲು ಕ್ರಮ ವಹಿಸಬೇಕು. ಪ್ರತಿ ವಾರ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರ ಮೂಲಕ ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ನಡೆಸಬೇಕು. ನಗರ ಭಾಗದಲ್ಲಿ ಆಶಾ, ಅಂಗನವಾಡಿ ಕೊರತೆ ಇರುವ ಕಾರಣ ನರ್ಸಿಂಗ್ ವಿದ್ಯಾರ್ಥಿಗಳನ್ನು ನಿಯೋಜಿಸಬೇಕು ಎಂದರು.
ಮೆಡಿಕಲ್ ಕಾಲೇಜುಗಳ ಫ್ಯಾಮಿಲಿ ಅಡಾಪ್ಷನ್ ಪ್ರೊಗ್ರಾಮ್ ನ್ನು ಡೆಂಗಿ ಸಮಸ್ಯಾತ್ಮಕ ಗ್ರಾಮ/ವಾರ್ಡ್‍ಗಳಿಗೆ ವಿಸ್ತರಿಸುವಂತೆ ತಿಳಿಸಿದ ಅವರು ಡೆಂಗಿ ನಿಯಂತ್ರಣದಲ್ಲಿ ಸಹಕರಿಸಿದ ನರ್ಸಿಂಗ್, ಮೆಡಿಕಲ್ ವಿದ್ಯಾರ್ಥಿಗಳು ಮತ್ತು ಇತರೆ ಸ್ವಯಂ ಸೇವಕರಿಗೆ ದೃಢೀಕರಣ ಪತ್ರ ನೀಡುವಂತೆ ತಿಳಿಸಿದರು.
ಸಿಮ್ಸ್ ಕಾಲೇಜಿನ ಡಾ.ಪ್ರವೀಣ್ ಮಾತನಾಡಿ, ಪ್ರಸ್ತುತ ಕಾಲೇಜಿನ ವಿದ್ಯಾರ್ಥಿಗಳು ಫ್ಯಾಮಿಲಿ ಅಡಾಪ್ಷನ್ ಪ್ರೊಗ್ರಾಮ್ ನಲ್ಲಿ ಗ್ರಾಮಗಳಲ್ಲಿ 3 ರಿಂದ 4 ಕುಟುಂಬಗಳನ್ನು ಅಡಾಪ್ಟ್ ಮಾಡಿಕೊಂಡಿದ್ದು, 2 ರಿಂದ 3 ಪ್ರದೇಶಗಳಲ್ಲಿ ಸ್ಕ್ರೀನಿಂಗ್ ಶಿಬಿರಗಳನ್ನು ಮಾಡುತ್ತಿದ್ದಾರೆ. ಇಲ್ಲಿ ಡೆಂಗಿ ಕುರಿತು ಅರಿವು ಮೂಡಿಸಲಾಗುವುದು ಎಂದರು.
ಸುಬ್ಬಯ್ಯ ಮೆಡಿಕಲ್ ಕಾಲಜಿನ ಡಾ.ಬಾಲು ಮಾನತಾಡಿ ಮುಂದಿನ ವಾರದಿಂದ ಹಾರ್ನಹಳ್ಳಿಯಲ್ಲಿ ಫ್ಯಾಮಿಲಿ ಅಡಾಪ್ಶನ್ ಕಾರ್ಯಕ್ರಮದಡಿ ಡೆಂಗಿ ಅರಿವು ಮೂಡಿಸಲಾಗುವುದು ಎಂದರು.
ಜಿಲ್ಲಾಧಿಕಾರಿಗಳು, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಡೆಂಗಿ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಟಿಹೆಚ್‍ಓ ಮತ್ತು ವೈದ್ಯಾಧಿಕಾರಿಗಳು ತಾಲ್ಲೂಕುಗಳಲ್ಲಿ ಮೇಲ್ವಿಚಾರಣೆ ಕೈಗೊಳ್ಳಬೇಕು. ಪ್ರತಿವಾರ ಲಾರ್ವಾ ಸರ್ವೆ, ಫಾಗಿಂಗ್, ಜ್ವರ ಸಮೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಪಾಲಿಕೆ ಸಿಎಓ ಮೋಹನ್ ಕುಮಾರ್, ಡಿಎಸ್‍ಓ ಡಾ.ಮಲ್ಲಪ್ಪ, ಡಾ.ಕಿರಣ್, ಡಾ.ಹರ್ಷವರ್ದನ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಐಎಂಎ ಅಧ್ಯಕ್ಷ ಡಾ.ರಮೇಶ್, ಟಿಹೆಚ್‍ಓ ಗಳು, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.