ಮಾನಸಿಕ ಆರೋಗ್ಯ ಮತ್ತು ಅಪೌಷ್ಠಿಕತೆ ಬಗ್ಗೆ ಜನರು ಹೆಚ್ಚು ನಿರ್ಲಕ್ಷ್ಯವನ್ನು ತೋರಿಸುತ್ತಾರೆ. ಹೆಣ್ಣು ಮಕ್ಕಳಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಇರುವುದಿಲ್ಲ. ಅಧಿಕಾರಿಗಳು ಈ ಕುರಿತು ಗ್ರಾಮ ಆರೋಗ್ಯ ತರಬೇತಿಯಿಂದ ಪ್ರತಿ ಗ್ರಾಮದ ಸಾರ್ವಜನಿಕರಿಗೂ ತಲುಪಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಹೇಮಂತ್, ಎನ್ ಅಧಿಕಾರಿಗಳಿಗೆ ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್, ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಮತ್ತು ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಸಹಯೋಗದೊಂದಿಗೆ ಸೋಮವಾರ ಜಿ. ಪಂ, ಅಬ್ದುಲ್ ನಾಜಿರ್ ಸಬಾಂಗಣದಲ್ಲಿ ಏರ್ಪಡಿಸಲಾಗಿದ್ದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಹಲವು ಆರೋಗ್ಯ ಸಮೀಕ್ಷೆಯನ್ನು ಮಾಡಿದಾಗ ಆರೋಗ್ಯ ಮಟ್ಟದಲ್ಲಿ ಹಿಂದುಳಿದ ಹಲವು ತಾಲ್ಲೂಕುಗಳನ್ನು ನೋಡಬಹುದು. ಅವುಗಳನ್ನು ಸರಿಪಡಿಸಲು ಈ ಗ್ರಾಮ ಆರೋಗ್ಯದ ತರಬೇತಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಿದಾಗ ಗ್ರಾಮೀಣ ಅಧಿಕಾರಿಗಳಿಗೆ ಸೂಚನೆ ನೀಡಲು ಅನುಕೂಲವಾಗುತ್ತದೆ. ಸಕ್ಕರೆ ಖಾಯಿಲೆ, ಬಿ.ಪಿ, ಮಾನಸಿಕ ಮತ್ತು ಸಾಮಾಜಿಕ ಅನಾರೋಗ್ಯದ ತಡಗಟ್ಟುವಿಕೆಗೆ ಕ್ರಮ ವಹಿಸಲು ಮಾಹಿತಿಯನ್ನು ಇಲ್ಲಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಪೋಷಣ ಅಭಿಯಾನದಲ್ಲಿ ಅಪೌಷ್ಠಿಕತೆ ಮತ್ತು ಮುಟ್ಟಿನ ನೈರ್ಮಲ್ಯದ ಬಗ್ಗೆ ಶಾಲೆಗಳಲ್ಲಿ ಅರ್ಧ ಗಂಟೆ ತರಗತಿ ನಡೆಸಬೇಕು. ಮಾನಸಿಕ ಆರೋಗ್ಯದ ಬಗ್ಗೆ ಜನರಿಗೆ ಹೆಚ್ಚು ತಿಳಿದಿರುವುದಿಲ್ಲ. ಅಧಿಕಾರಿಗಳಲ್ಲಿಯೇ ಒತ್ತಡ, ಆತಂಕ ಹೆಚ್ಚು ಇರುತ್ತದೆ ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಮೂಲಕ ಅಧಿಕಾರಿಗಳು ಆಡಳಿತ ನಡೆಸಲು ಸುಲಭವಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ|| ನಟರಾಜ್ ಮಾತನಾಡಿ ಇತ್ತಿಚೀನ ದಿನಗಳಲ್ಲಿ ಗರ್ಭಿಣಿಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಇದರಿಂದ ಪ್ರಸವ ಸಮಯದಲ್ಲಿ ತುಂಬಾ ತೊಂದರೆ ಉಂಟಾಗುತ್ತಿದ್ದು, ಈ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು. ನಮ್ಮ ಸುತ್ತಮುತ್ತ ಅನೇಕ ಮಾನಸಿಕ ಅನಾರೋಗ್ಯ ಪೀಡಿತರು ಇರುತ್ತಾರೆ. ಅವರಿಗೆ ಸೂಕ್ತ ಮಾಹಿತಿ ನೀಡುವುದು ಮುಖ್ಯ ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶ್ರೀಮತಿ ಸುಜಾತ ಎ.ಆರ್. ಮಾತನಾಡಿ ಬಿ.ಪಿ, ಶುಗರ್ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕೆಳವರ್ಗದ ಜನರು ಗಮನವಹಿಸುವುದಿಲ್ಲ. ಹಾಗಾಗಿ ಅವರುಗಳು ಹೆಚ್ಚು ಸೇರುವ ಸ್ಥಳಗಳಲ್ಲಿ ಅಂದರೆ ನರೇಗಾ ಇತ್ಯಾದಿಗಳಲ್ಲಿ ಅವರ ಆರೋಗ್ಯ ಪರೀಕ್ಷಿಸಿ, ಮಾಹಿತಿ ನೀಡಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.