ಶಿವಮೊಗ್ಗ : ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ ನನಗೆ ಯಾವುದೇ ವಿದೇಶಗಳಿಗೆ ಕೆಲಸಕ್ಕಾಗಿ ತೆರಳದೆ ನನ್ನ ಹೆಮ್ಮೆಯ ಭಾರತ ದೇಶದಲ್ಲಿಯೇ ಸೇವೆ ಸಲ್ಲಿಸುವಂತೆ ಪ್ರೇರಣೆ ನೀಡಿತು ಎನ್ಇಎಸ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದರು.

ಶನಿವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಮೊದಲ ಉಪನ್ಯಾಸ ಸರಣಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಾ ಬೆಳೆದ ಪರಿಸರ ಮತ್ತು ಆತ್ಮವಿಶ್ವಾಸ ರೈತಾಪಿ ವರ್ಗದಿಂದ ಇಸ್ರೋ ಅಧ್ಯಕ್ಷ ಹುದ್ದೆಯವರೆಗೆ ಏರುವಂತೆ ಮಾಡಿತು. ಹಾಗಾಗಿಯೇ ನಮ್ಮ ನಡುವಿನ ಪರಿಸರದಿಂದ ನಾವು ನಿಜವಾದ ಪ್ರೇರಣೆ ಪಡೆಯಬೇಕಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಶಿಕ್ಷಣ ಸಿಗಬೇಕಾಗಿದೆ ಎಂಬ ಗಾಂಧೀಜಿಯವರ ಪ್ರೇರಣೆಯಿಂದ ಸ್ಥಾಪಿಸಲ್ಪಟ್ಟ ರಾಷ್ಟ್ರೀಯ ಶಿಕ್ಷಣ ಸಮಿತಿ ಇಂದು ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ. ಇಂತಹ ಸಂಸ್ಥೆ ಕಟ್ಟಿ ಬೆಳೆಸಿದ ಎಲ್ಲಾ ಪ್ರಾತ ಸ್ಮರಣೀಯರು ಎಂದೆಂದಿಗೂ ಚಿರಂತನ.

ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ಬಾಹ್ಯಾಕಾಶ ತಂತ್ರಜ್ಞಾನದೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧ ಹೊಂದಿದ್ದಾರೆ. ಅದರೇ ಅನೇಕ ಜನರಲ್ಲಿ ಇಸ್ರೋ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಟಿಪ್ಪು ಸುಲ್ತಾನ್ ತನ್ನ ಬ್ರಿಟಿಷ್ ಶತ್ರುಗಳನ್ನು ಸೋಲಿಸಲು ಬಾಹ್ಯಾಕಾಶ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ರಾಜ. ಪೇಲೋಡ್ , ರಾಕೆಟ್, ಗನ್ ಪೌಡರ್ ನಂತಹ ಸಂಶೋಧನೆಗಳನ್ನು ಅಂದೇ ಅಳವಡಿಸಿಕೊಂಡದ್ದು ಅಚ್ಚರಿಯ ವಿಚಾರ. ಇದೇ ಮಾದರಿಯಲ್ಲಿ ನಾವಿನ್ಯತೆ ಮತ್ತು ಹೊಸತನದ ಅವಶ್ಯಕತೆಗಳ ಕುರಿತು ಅರಿತ ಡಾ.ವಿಕ್ರಮ್ ಸಾರಾಭಾಯ್ ಇಸ್ರೋ ಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ಅನೇಕ ಕ್ರಾಂತಿಕಾರಿ ನಾವೀನ್ಯಯುತ ಬದಲಾವಣೆಗಳಿಗೆ ನಾಂದಿ ಹಾಡಿದರು. ಇಂದು ಭಾರತ ದೇಶದ ವಿಜ್ಞಾನಿಗಳು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ತಂತ್ರಜ್ಞಾನಗಳೊಂದಿಗೆ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಆವಿಷ್ಕಾರ ನಡೆಸುತ್ತಿದ್ದಾರೆ.

ಇಸ್ರೋದ ಭೂಸರ್ವೇಕ್ಷಣಾ ಉಪಗ್ರಹಗಳ ಮೂಲಕ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಹೆಚ್ಚು ನಿಗಾವಹಿಸಲು ಸಾಧ್ಯವಾಗಲಿದ್ದು ಕೃಷಿ, ಅರಣ್ಯ, ಸೇರಿದಂತೆ ಎಂಥಹದೇ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿಯೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸಲಿದೆ. ಇದರೊಂದಿಗೆ ಸಾಗರ, ಪರ್ವತ, ಗಣಿ, ಖನಿಜ ಸಂಪತ್ತು ಸೇರಿದಂತೆ ಭೂಮಿಯ ಬಾಹ್ಯರೇಖೆಯ ಸಂಪೂರ್ಣ ಮಾಹಿತಿ ಒದಗಿಸಲಿದೆ.

ಇಸ್ರೋ ನಡೆಸಿದ ಚಂದ್ರಯಾನ – 2 ನಮ್ಮ ಯುವ ಸಮೂಹಕ್ಕೆ ಮುಂದಿನ ಹಲವು ಕೌತುಕ ಸಂಶೋಧನೆಗಳಿಗೆ ಪ್ರೇರಣಾ ಶಕ್ತಿಯಾಗಿದೆ. ಯುವ ಸಮೂಹ ಯಾವುದೇ ಸೋಲು ಹಾಗೂ ಸವಾಲುಗಳಿಗೆ ಅಂಜದೇ ಹೊಸತನದ ಚಿಂತನೆಯೆಡೆಗೆ ಸಾಗಬೇಕಿದೆ. ಎಷ್ಟೇ ಹೊಸ ತಂತ್ರಜ್ಞಾನಗಳು ಬಳಕೆಗೆ ಲಭ್ಯವಾದರೂ ಮನುಷ್ಯಾಧಾರಿತ ಸಂಶೋಧನೆಗಳು ಮತ್ತಷ್ಟು ಮುನ್ನಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಖಜಾಂಚಿಗಳಾದ ಸಿ.ಆರ್.ನಾಗರಾಜ, ನಿರ್ದೇಶಕರಾದ ಡಾ.ಪಿ.ನಾರಾಯಣ್, ಜಿ.ಎಸ್.ನಾರಾಯಣರಾವ್, ಎನ್.ಟಿ.ನಾರಾಯಣರಾವ್, ಹೆಚ್.ಸಿ.ಶಿವಕುಮಾರ್, ಕುಲಸಚಿವರಾದ ಪ್ರೊ.ಹೂವಯ್ಯಗೌಡ, ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…