ಶಿವಮೊಗ್ಗ: ಮನುಕುಲದ ಸೇವೆಯಿಂದ ರೋಟರಿ ಸಂಸ್ಥೆಯು ವಿಶ್ವದ ಎಲ್ಲ ರಾಷ್ಟ್ರಗಳಲ್ಲಿಯೂ ಪ್ರಸಿದ್ಧವಾಗಿದ್ದು, ಎಲ್ಲ ವರ್ಗದ ಜನರನ್ನು ತಲುಪಿರುವ ಬೃಹತ್ ಸೇವಾಸಂಸ್ಥೆಯಾಗಿದೆ ಎಂದು ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಕನ್ವೆನ್‌ಷನ್ ಸಭಾಂಗಣದಲ್ಲಿ ರೋಟರಿ ಜಿಲ್ಲೆ 3182ರ 6ನೇ ಜಿಲ್ಲಾ ಸಮಾವೇಶ ರಾಮಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರೋಟರಿ ಸಂಸ್ಥೆಯು ಸೇವಾ ಕಾರ್ಯಗಳನ್ನು ನಿರಂತರವಾಗಿ ಮಾಡುವುದರ ಜತೆಯಲ್ಲಿ ಸ್ನೇಹ, ಭಾಂದವ್ಯ, ಪ್ರೀತಿಯನ್ನು ಬೆಳೆಸುವ ಸಂಪರ್ಕದ ಸೇತುವೆಯಾಗಿ ಕೆಲಸ ಮಾಡುತ್ತಿದೆ. ರೋಟರಿ ಸಂಸ್ಥೆ ಪಟ್ಟಣ ಪ್ರದೇಶಗಳಿಗೆ ಸೀಮಿತವಾಗದೇ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸುತ್ತಿದೆ. ಎಲ್ಲ ಜನಸಾಮಾನ್ಯರು ರೋಟರಿ ಸಂಸ್ಥೆ ಸೇರಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಗೌರಿಗದ್ದೆಯ ಅವಧೂತ ಶ್ರೀ ವಿನಯ್ ಗುರೂಜಿ ಮಾತನಾಡಿ, ಭಾರತದ ಮೂಲ ತಿರುಳು ಸಂಸ್ಕಾರ. ಮನುಷ್ಯನ ಜೀವನದಲ್ಲಿ ಸಂಸ್ಕಾರ ಮುಖ್ಯ. ಹಣ ಗಳಿಕೆಯೇ ಮುಖ್ಯವಲ್ಲ. ಸಮಾಜಸೇವೆಯೆ ನಿಜವಾದ ದೇವರ ಪೂಜೆ. ದೇಶಪ್ರೇಮ ಮುಖ್ಯ. ಸೇವಾ ಮನೋಭಾವನೆಗಳನ್ನು ಬೆಳೆಸುವ ಜತೆಯಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಸಾಧಕರ ಓಡನಾಟ ದೊರೆಯುತ್ತದೆ. ಸೇವಾ ಕಾರ್ಯಗಳಿಗೆ ರೋಟರಿ ಸಂಸ್ಥೆ ಪ್ರೇರಣೆ ನೀಡುತ್ತದೆ ಎಂದರು.

ಅಂತರಾಷ್ಟ್ರೀಯ ರೋಟರಿ ಅಧ್ಯಕ್ಷರ ಪ್ರತಿನಿಧಿ ರವಿ ಧೋತ್ರೆ ಮಾತನಾಡಿ, ಸೇವೆಗಳು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ತಲುಪಬೇಕು. ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಹೆಚ್ಚಿಸಬೇಕು. ರೋಟರಿ ಸಂಸ್ಥೆಯು ವಿಶ್ವದ ಎಲ್ಲ ಭಾಗಗಳಲ್ಲಿಯು ರೋಟರಿ ಫೌಂಡೇಷನ್ ಮುಖಾಂತರ ಅವೀಸ್ಮರಣೀಯ ಕಾರ್ಯಗಳನ್ನು ನಡೆಸುತ್ತಿದೆ. ಸಮಾಜಮುಖಿ ಕಾರ್ಯಗಳಿಂದ ಕೋಟ್ಯಾಂತರ ಜನರನ್ನು ತಲುಪಿದೆ ಎಂದು ಹೇಳಿದರು.

ರೋಟರಿ ಜಿಲ್ಲಾ ಗವರ್ನರ್ ಎಂ.ಜಿ.ರಾಮಚAದ್ರಮೂರ್ತಿ ಮಾತನಾಡಿ, ರಾಮಸಂಭ್ರಮ ಸಮ್ಮೇಳನ ಇದು ನಮ್ಮ ನಿಮ್ಮೆಲ್ಲರ ರೋಟರಿ ಸಂಭ್ರಮ. ಸ್ನೇಹಹಸ್ತ ಚಾಚುವ ಸಮಾವೇಶವಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಗುರುರಾಜ್ ಗಿರಿಮಾಜಿ, ಶ್ರೀನಾಥ್ ಗಿರಿಮಾಜಿ, ಡಾ. ಜಯಗೌರಿ, ಗೀತಾ, ಸಾರ್ವಜನಿಕ ಸಂಪರ್ಕಾಧಿಕಾರಿ ಜಿ.ವಿಜಯ್‌ಕುಮಾರ್, ರೋಟರಿ ಎಲ್ಲ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…