ಶಿವಮೊಗ್ಗ: ಶ್ರೀರಾಮ ಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಮಾಜದ ಹಿರಿಯರಿಂದ ಸ್ಥಾಪಿಸಲ್ಪಟ್ಟು ಎಲ್ಲರ ಪರಿಶ್ರಮದಿಂದ ರಾಜ್ಯದಲ್ಲೇ ಉತ್ತಮ ಸಾಧನೆ ಮಾಡಿದೆ. ಷೇರುದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ ಮತ್ತು ಠೇವಣಿ ಸಂಗ್ರಹವನ್ನು ವೃದ್ಧಿಸಿಕೊಳ್ಳಿ, ಸಂಸ್ಥೆಗೆ ಬೇಕಾದ ಎಲ್ಲಾ ನೆರವನ್ನೂ ನೀಡುವುದಾಗಿ ಮಾಜಿ ಸಚಿವ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್ ಎದುರು ಸೊಸೈಟಿಯ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದರು.
ಈ ಸೊಸೈಟಿ ಹಲವು ವರ್ಷಗಳಿಂದ ಸದಸ್ಯರಿಗೆ ಡಿವಿಡೆಂಡ್ ಕೊಡುತ್ತಾ ಬಂದಿದೆ. ಕಳೆದ ವರ್ಷ 12% ಡಿವಿಡೆಂಡ್ ನೀಡಿದೆ. ಈ ಬಾರಿ ಸ್ವಂತ ಕಟ್ಟಡಕ್ಕೆ ಕೈ ಹಾಕಿದ್ದರಿಂದ 10% ಡಿವಿಡೆಂಡ್ ಇಳಿಸಿದೆ. ಸಮಾಜ ಒಗ್ಗಟ್ಟಿನಿಂದಿದ್ದಾಗ ಸಂಸ್ಥೆಗಳು ಯಶಸ್ವಿಯಾಗಿ ಬೆಳೆಯುತ್ತದೆ. ಭಾಹುಸಾರ ಸಮಾಜ ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಅಭಿವೃದ್ಧಿ ಸಾಧ್ಯವಾಗಿದೆ. ಸೊಸೈಟಿಯ ಲಾಭದಲ್ಲಿ ಹೆಚ್ಚಳ ಮತ್ತು ಷೇರುದಾರರ ಸಂಖ್ಯೆ ಹಾಗೂ ಬಂಡವಾಳ ಮತ್ತು ಠೇವಣಿ ಇದನ್ನು ಗಮನಿಸಿ ಸರ್ಕಾರ ಹೆಚ್ಚಿನ ನೆರವು ನೀಡುತ್ತದೆ. ಆದ್ದರಿಂದ ಈ ವಿಚಾರವನ್ನು ಗಮನದಲ್ಲಿಟ್ಟು ಆಡಳಿತ ಮಂಡಳಿ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷ ಎನ್.ಎಸ್. ಗಿರೀಶ್ ನಾಜರೆ, ಉಪಾಧ್ಯಕ್ಷ ಎಂ.ಕೆ. ಮೋಹನ್, ಮಾಜಿ ಅಧ್ಯಕ್ಷ ಓಂಪ್ರಕಾಶ್ ತೇಲ್ಕರ್, ಪ್ರಮುಖರಾದ ಡಿ.ಎಂ. ಲಕ್ಷ್ಮೀಕಾಂತ್, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಮಾಜಿ ಸದಸ್ಯ ರಾಮು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.