ಶಿವಮೊಗ್ಗ: ಡಿಸೆಂಬರ್ ನೊಳಗೆ ಶಿವಮೊಗ್ಗ ಮತ್ತು ಭದ್ರಾವತಿಯ ರೈಲ್ವೇ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಭದ್ರಾವತಿಯ ಕಡದಕಟ್ಟೆ, ಶಿವಮೊಗ್ಗದ ವಿದ್ಯಾನಗರ, ಉಷಾ ನರ್ಸಿಂಗ್ ಹೋಮ್, ಕಾಶಿಪುರ ಬಳಿ ನಿರ್ಮಿಸಲಾಗುತ್ತಿರುವ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿದರು.ನಂತರ ಸಂಬಂಧಿಸಿದ ರೈಲ್ವೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಈ ಯೋಜನೆಗಳ ಕ್ಷೀಪ್ರ ಅನುಷ್ಠಾನಕ್ಕಾಗಿ ಅಗತ್ಯವಿರುವ ಕ್ರಮ ಕುರಿತಂತೆ ಚರ್ಚಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರೈಲ್ವೆ ರಸ್ತೆ ಮೇಲ್ಸೇತುವೆಗಳು:ಭದ್ರಾವತಿಯ ಕಡದಕಟ್ಟೆ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 34 ಹಾಗೂ ಶಿವಮೊಗ್ಗ ಸವಳಂಗ ರಸ್ತೆಯ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 49 ಹಾಗೂ ಕಾಶೀಪುರದ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಸಂಖ್ಯೆ 54 ಬಳಿಯಲ್ಲಿ ರೈಲ್ವೆ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಮೇಲ್ಸೇತುವೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಶಿವಮೊಗ್ಗ ವಿದ್ಯಾನಗರದ ಬಳಿ ಎಲ್.ಸಿ. 46ಕ್ಕೆ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಸ್ಥಳ ಪರಿಶೀಲನೆಯನ್ನು ನಡೆಸಿದರು.

ರೈಲ್ವೆ ಇಲಾಖೆಯ 3 ರಸ್ತೆ ಮೇಲ್ಸೇತುವೆಗಳ ಅಂದಾಜು ವೆಚ್ಚ 116 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಕಾಮಗಾರಿ ವೆಚ್ಚದ ಶೇಕಡ 50 ರಷ್ಟನ್ನು ಹಾಗೂ ಭೂಸ್ವಾಧೀನದ ಸಂಪೂರ್ಣವೆಚ್ಚವನ್ನು ರಾಜ್ಯ ಸರ್ಕಾರದ ಭರಿಸುತ್ತದೆ. ಕಾಮಗಾರಿ ವೆಚ್ಚದ ಶೇಕಡ 50 ರಷ್ಟನ್ನು ರೈಲ್ವೆ ಇಲಾಖೆ ಭರಿಸುತ್ತಿದೆ. ಈ ಯೋಜನೆಗೆ ರಾಜ್ಯ ಸರ್ಕಾರದ ಪಾಲು 70 ಕೋಟಿ ರೂ. ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರದಿಂದ ಈಗಾಗಲೇ 8.61 ಕೋಟಿ ರೂ.ಗಳನ್ನು ಹಾಗೂ ಭೂಸ್ವಾಧೀನಕ್ಕಾಗಿ 20.60 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.ಎಸ್.ಆರ್.ಸಿ. ಕಂಪನಿಯವರು ಈ 3 ಯೋಜನೆಗಳ ಗುತ್ತಿಗೆ ಪಡೆದಿದ್ದಾರೆ. ಈಗಾಗಲೇ ಕಾಮಗಾರಿಯು ಶೇಕಡ 30-40% ರಷ್ಟು ಆಗಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಮುಂದಿನ ಡಿಸೆಂಬರ್/ ಜನವರಿ ತಿಂಗಳುಗಳಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಸಂಸದ ರಾಘವೇಂದ್ರ ಮಾಹಿತಿ ನೀಡಿದರು.

ಶಿವಮೊಗ್ಗ ನಗರದ ವಿದ್ಯಾನಗರದ ಬಳಿ ಎಲ್.ಸಿ. ಗೇಟ್ ನಂ: 46 ರಲ್ಲಿ ವೃತ್ತಕಾರದ ರೈಲ್ವೆ ಮೇಲ್ಸೇತುವೆ ಅಂದಾಜು ವೆಚ್ಚ 43.90 ಕೋಟಿ ರೂ. ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಕಾಮಗಾರಿ ಅನುಷ್ಟಾನಗೊಳ್ಳುತ್ತಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗ ಯೋಜನೆಯನ್ನು 2 ಹಂತಗಳಲ್ಲಿ ಅನುಷ್ಠನಗೊಳಿಸಲು ನಿರ್ಧರಿಸಲಾಗಿದೆ. ಮೊದಲನೆ ಹಂತದಲ್ಲಿ ಶಿವಮೊಗ್ಗ-ಶಿಕಾರಿಪುರ ನಡುವಿನ ಕಾಮಗಾರಿಗೆ ಸಂಬಂಧಿಸಿದೆ. ಎರಡನೆ ಹಂತವು ಶಿಕಾರಿಪುರ-ರಾಣೆಬೆನ್ನೂರು ನಡುವಿನ ಕಾಮಗಾರಿಗೆ ಸಂಬಂಧಿಸಿದೆ.ಶಿವಮೊಗ್ಗ –ಶಿಕಾರಿಪುರ ನಡುವಿನ 54 ಕಿ.ಮೀ.ಗಳ ರೈಲು ಮಾರ್ಗದ ನಿರ್ಮಾಣಕ್ಕಾಗಿ ಒಟ್ಟಾರೆ 388 ಎಕರೆ ಖಾಸಗಿ ಜಮೀನು, 118 ಎಕರೆ ಅರಣ್ಯ ಭೂಮಿ ಹಾಗೂ 45 ಎಕರೆ ಸರ್ಕಾರಿ ಜಮೀನು ಸ್ವಾಧೀನಕ್ಕಾಗಿ ಕೆಐಎಡಿಬಿ ಸಂಸ್ಥೆ ಈಗಾಗಲೇ ಎಲ್ಲ ಖಾಸಗಿ ಜಮೀನಿನ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ. ಇದರಲ್ಲಿ ಸುಮಾರು 220-225  ಎಕರೆ ಭೂಮಿಯ ಮಾಲೀಕರಿಗೆ ಭೂಪರಿಹಾರವನ್ನು ವಿತರಣೆ ಮಾಡಿದ್ದು, ಉಳಿದವರಿಗೆ ಅವಾರ್ಡ್ ನೋಟೀಸ್ ಜಾರಿಯಾಗಿದೆ. ರೈಲ್ವೆ ಇಲಾಖೆಗೆ ಜಮೀನು ಹಸ್ತಾಂತರಿಸಲಾಗಿದೆ.  ರೈಲ್ವೆ ಇಲಾಖೆಯಿಮದ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಕೋಟೆಗಂಗೂರಿನಲ್ಲಿ ಒಟ್ಟು 111.75 ಕೋಟಿ ರೂ.ವೆಚ್ಚದಲ್ಲಿ ಕೋಚಿಂಗ್ ಯಾರ್ಡ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಲ್ಲಿ ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಸ್ಟೇಷನ್ ಸಹ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಜ್ಯೋತಿ ಪ್ರಕಾಶ್, ಚನ್ನಬಸಪ್ಪ, ಜಗದೀಶ್, ಬಳ್ಳೆಕೆರೆ ಸಂತೋಷ್, ಧೀರರಾಜ್ ಹೊನ್ನವಿಲೆ, ಅ.ಮ. ಪ್ರಕಾಶ್, ಪ್ರಭು, ಜ್ಞಾನೇಶ್ವರ್, ಮೋಹನ್ ರೆಡ್ಡಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿ ಪೀರ್ ಪಾಷ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…