ಶಿವಮೊಗ್ಗ: ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಹಾನಿಗೊಳಗಾದವರಿಗೆ ಸರ್ಕಾರದ ಮಾರ್ಗಸೂಚಿಯ ಅನ್ವಯ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಮಳೆಯಿಂದಾಗಿ ಸಾರ್ವಜನಿಕರ ಆಸ್ತಿ, ಪಾಸ್ತಿಗಳಿಗೆ ನಷ್ಟವುಂಟಾಗಿದೆ. ಸುಮಾರು 129 ಮನೆಗಳು ಭಾಗಶಃ ಕುಸಿದಿವೆ. 24 ಮನೆಗಳಿಗೆ ಹಾನಿಯಾಗಿದೆ. 3 ಜಾನುವಾರು ನೀರಿನಲ್ಲಿ ಕೊಚ್ಚಿ ಹೋಗಿವೆ. ವ್ಯಕ್ತಿಯೊಬ್ಬರು ಬಾವಿಗೆ ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹೀಗೆ ಜಿಲ್ಲೆಯಲ್ಲಿ ಆಸ್ತಿ ಪಾಸ್ತಿಗಳಿಗೆ ನಷ್ಟವಾಗಿದೆ. ಇವೆಲ್ಲವನ್ನು ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸರ್ಕಾರದ ಮಾರ್ಗಸೂಚಿಯ ಪ್ರಕಾರ ಆದಷ್ಟು ಬೇಗನೇ ಪರಿಹಾರ ನೀಡಲಾಗುವುದು ಎಂದರು.ಆಗುಂಬೆ ಘಾಟ್ ನಲ್ಲಿ ಭೂಕುಸಿತದಿಂದ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಈಗಾಗಲೇ ತಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ. ಮಣ್ಣು ತೆರುವಗೊಳಿಸುವ ಕಾರ್ಯ ಮುಂದುವರೆದಿದ್ದು, ಇಂದು ಸಂಜೆ ಅಥವಾ ನಾಳೆಯೊಳಗೆ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಆದರೆ, ಈ ತಿಂಗಳ 30 ರವರೆಗೆ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದರು.ಅಂಬಾರಗುಡ್ಡ ಕುಸಿತಕ್ಕೆ ಸಂಬಂಧಿಸಿದಂತೆ ಈಗಾಗಲೇ ಅಲ್ಲಿನ ತಹಶೀಲ್ದಾರ್ ಗೆ ಸೂಚನೆ ನೀಡಿ ಅಗತ್ಯಕ್ರಮಕ್ಕೆ ತಿಳಿಸಲಾಗಿದೆ ಎಂದರು.