ಶಿವಮೊಗ್ಗ : ನಾವು ಕಲಿಯುತ್ತಿರುವ ವಿಷಯಗಳು ವಿಶ್ವದಾದ್ಯಂತ ಯಾವುದೇ ಶೈಕ್ಷಣಿಕ ವ್ಯವಸ್ಥೆಗೆ ಹೊಂದಾಣಿಕೆಯಾಗುವಂತಿರಬೇಕು ಎಂದು ಮಣಿಪಾಲದ ಮಾಹೆ ವಿದ್ಯಾಸಂಸ್ಥೆಯ ಅಂತರಾಷ್ಟ್ರೀಯ ಒಡಂಬಡಿಕೆ ವಿಭಾಗದ ನಿರ್ದೇಶಕರಾದ ಡಾ.ಕರುಣಾಕರ್.ಎ.ಕೆ ಅಭಿಪ್ರಾಯಪಟ್ಟರು.
ಶನಿವಾರ ನಗರದ ಜೆ.ಎನ್.ಎನ್.ಎನ್ ಎಂಜಿನಿಯರಿಂಗ್ ಕಾಲೇಜು ಹಾಗೂ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ ಮಂಗಳೂರಿನ ಉಪವಿಭಾಗದ ವತಿಯಿಂದ ಎರಡು ದಿನಗಳ ಕಾಲ ಏರ್ಪಡಿಸಿದ್ದ ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ನೂತನ ಎನ್ಇಪಿ ಅನ್ವಯ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗ ಸಂಸ್ಥೆಗಳ ನಡುವಿನ ಸಹಭಾಗಿತ್ವ ವೃದ್ಧಿಯ ಅವಶ್ಯಕತೆ ಕುರಿತ ಗೋಷ್ಟಿಯಲ್ಲಿ ಮಾತನಾಡಿದರು.
ಉದ್ಯೋಗ ಸಂಸ್ಥೆಗಳ ಅವಶ್ಯಕತೆಗಳ ಅಧಾರದಲ್ಲಿ ಎಂಜಿನಿಯರಿಂಗ್ ಪಠ್ಯಕ್ರಮ ರಚನೆಯಾಗಬೇಕಿದೆ. ಇಂದು ಉದ್ಯೋಗ ಸಂಸ್ಥೆಯ ಅವಶ್ಯಕತೆಗಳ ಅರಿವು ಪಡೆಯಲು ಉಪನ್ಯಾಸಕರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ವಿದ್ಯಾಸಂಸ್ಥೆಗಳು ತಮ್ಮ ಉಪನ್ಯಾಸಕ ವೃಂದವನ್ನು ಕಂಪನಿಗಳಿಗೆ ಇಂಟರ್ನ್ ಆಗಿ ಕಳುಹಿಸುವ ಪ್ರೇರಣಾ ವೇದಿಕೆಯನ್ನು ಕಲ್ಪಿಸಿಕೊಡಬೇಕಿದೆ.
ಉದ್ಯೋಗ ಕೇಂದ್ರಿತ ಕಲಿಕೆಗಿಂತ ಆಸಕ್ತಿ ಕೇಂದ್ರಿತ ಕಲಿಕೆಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಉನ್ನತ ಉದ್ಯೋಗವಕಾಶ ಪಡೆಯುವ ಸಾಮರ್ಥ್ಯ ಹೆಚ್ಚಿಸಲು 40% ಅಂಕಗಳಿಕೆಗೆ ಪಾಸಾಗುವ ವ್ಯವಸ್ಥೆ ತೆಗೆದು, 80% ಗೆ ಪಾಸ್ ಪರ್ಸೆಂಟೇಜ್ ಹೆಚ್ಚಿಸಬೇಕಿದೆ. ಇಂತಹ ಅನೇಕ ಕ್ರಾಂತಿಕಾರಿ ಬದಲಾವಣೆಗಳಿಗೆ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗ ಸಂಸ್ಥೆಗಳ ನಡುವೆ ಬಲವಾದ ಸಹಭಾಗಿತ್ವ ವೃದ್ಧಿಯಾಗಬೇಕಿದೆ ಎಂದು ಹೇಳಿದರು.
ಮಂಗಳೂರಿನ ನೊವಿಗೊ ಕಂಪನಿ ಸಿಇಓ ಪ್ರವೀಣ್ ಕುಮಾರ್ ಕಲಬಾವಿ ಮಾತನಾಡಿ ಹದಿನೈದು ಲಕ್ಷಕ್ಕು ಹೆಚ್ಚು ಜನ, ಎಂಜಿನಿಯರಿಂಗ್ ಪದವಿ ಪಡೆದು ಹೊರಹೊಮ್ಮುತ್ತಿದ್ದಾರೆ. ಈ ನಡುವೆ ಕೆಲವೇ ಲಕ್ಷ ಜನ ಉನ್ನತ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕಲಿಕಾ ಗುಣಮಟ್ಟದ ಸುಧಾರಣೆಯಲ್ಲಿ ಉದ್ಯೋಗ ಮತ್ತು ವಿದ್ಯಾಸಂಸ್ಥೆಗಳ ನಡುವೆ ಜ್ಞಾನ ವಿನಿಮಯ ಮುಕ್ತವಾಗಬೇಕಿದೆ.
ಗೋಷ್ಟಿಯಲ್ಲಿ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ನಿವೃತ್ತ ಮುಖ್ಯಸ್ಥರಾದ ಪ್ರೊ.ಎನ್.ದಿವಾಕರ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಐಐಎಸ್ಸಿ ಹಿರಿಯ ಪ್ರಾಧ್ಯಾಪಕರಾದ ಡಾ.ಎ.ಜಿ.ರಾಮಕೃಷ್ಣನ್, ಮಣಿಪಾಲ ಡಾಟ್ ನೆಟ್ ಕಂಪನಿಯ ನಿರ್ದೇಶಕರಾದ ಡಾ.ಯು.ಸಿ.ನಿರಂಜನ್ ಮಾತನಾಡಿದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್, ಸಂಘಟನಾ ಮುಖ್ಯಸ್ಥರಾದ ಡಾ.ಪಿ.ಮಂಜುನಾಥ, ಡಾ.ಎಸ್.ವಿ.ಸತ್ಯನಾರಾಯಣ, ಡಾ.ಪೂರ್ಣಲತಾ.ಜೆ ಉಪಸ್ಥಿತರಿದ್ದರು.