ಶಿವಮೊಗ್ಗ: ಸಕ್ಕರೆ ಕಾಯಿಲೆ ಬಂದರೆ ಜೀವನ ಮುಗಿಯಿತು ಎಂಬ ಭಾವನೆ ಬೇಡ. ಸಕ್ಕರೆ ಕಾಯಿಲೆ ಇದ್ದರೂ ಸಹ ಉತ್ತಮಶೈಲಿ ಹಾಗೂ ಆಹಾರಪದ್ಧತಿ ಅಳವಡಿಸಿಕೊಳ್ಳುವ ಮೂಲಕ ರೋಗದ ದುಷ್ಟರಿಣಾಮವನ್ನು ತಡೆಗಟ್ಟಬಹುದು. ಮುನ್ನೆಚ್ಚರಿಕೇ ರೋಗದಿಂದ ಪಾರಾಗಲು ಸೂಕ್ತ ಮದ್ದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಚಿಂತನೆ ನಡೆಸಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಹೇಳಿದರು.
ಸಕ್ಕರೆ ಕಾಯಿಲೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ವಿನ್‌ಲೈಫ್ ಟ್ರಸ್ಟ್ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಮಧುಮೇಹ ಜನಜಾಗೃತಿ ಸಮಾವೇಶ, ಮಧುಮೇಹ ನಿವಾರಣೆ ಮತ್ತು ನಿಯಂತ್ರಣಕ್ಕೆ ಆಲೋಪತಿ, ಆಯುರ್ವೇದ, ಯೋಗ ಸೇರಿದಂತೆ ಎಲ್ಲ ವೈದ್ಯಕೀಯ ಪದ್ಧತಿಗಳ ಸಮಾಗಮ ಹಾಗೂ ಮುಕ್ತ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ಎಲ್ಲರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಅನೇಕ ಕಾಯಿಲೆಗಳು ಸಹ ಮನುಷ್ಯರನ್ನು ಕಾಡುತ್ತಿವೆ. ದಿನನಿತ್ಯ ವಾಕಿಂಗ್, ಯೋಗ, ವ್ಯಾಯಾಮ ಮಾಡುವುದರಿಂದ ಒತ್ತಡದಿಂದ ಮುಕ್ತರಾಗಿ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಧೈರ್ಯವಾಗಿ ಎದುರಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸಮಸ್ಯೆಗಳಿಗೆ ಹತಾಶರಾಗಿ ಮಾನಸಿಕಸ್ಥೈರ್ಯ ಕಳೆದುಕೊಂಡಲ್ಲಿ ಆರೋಗ್ಯದಲ್ಲೂ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಜನರಿಗೆ ಉತ್ತಮ ಆರೋಗ್ಯ ಮಾಹಿತಿ ನೀಡುವ ಸುದುದ್ದೇಶದಿಂದ ಮೆಟ್ರೋ ಆಸ್ಪತ್ರೆಯ ಡಾ. ಬಿ.ಸಿ. ಪೃಥ್ವಿ ಮತ್ತು ಸಿಬ್ಬಂದಿ ಜನಪರ ಕಾಳಜಿಯೊಂದಿಗೆ ನಗರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ಸೇರಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ಹೇಳಿದರು.
ಟಿಎಂಎಇ ಕಾಲೇಜು ಆಡಳಿತಾಧಿಕಾರಿ ಜಿ.ಹಿರೇಮಠ್ ಮಾತನಾಡಿ, ಸಕ್ಕರೆ ಕಾಯಿಲೆ ಇದೆ ಎಂದಾಕ್ಷಣ ಹೆಚ್ಚಿನ ಜನರು ಆತಂಕಕ್ಕೊಳಗಾಗುತ್ತಾರೆ. ಪ್ರಸ್ತುತ ಮಧುಮೇಹ ಎಂಬುದು ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಹೀಗಾಗಿ ಆತಂಕಗೊಳ್ಳದೆ ಉತ್ತಮ ಆಹಾರ ಕ್ರಮ, ಜೀವನಶೈಲಿಯಿಂದ ಈ ರೋಗದ ದುಷ್ಪರಿಣಾಮದಿಂದ ಪಾರಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೆಟ್ರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಬಿ.ಸಿ. ಪೃಥ್ವಿ, ಮೆಟ್ರೋ ಆಸ್ಪತ್ರೆಯ ಅಧ್ಯಕ್ಷ ಡಾ. ಪಿ.ಲಕ್ಷ್ಮೀನಾರಾಯಣ ಆಚಾರ್, ಮೆಟ್ರೋ ಅಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಟಿ.ಎಸ್. ತೇಜಸ್ವಿ, ಪ್ರಮುಖರಾದ ರೆಹಮಾನ್ ,ಪಂಕಜ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಆಸ್ಪತ್ರೆಗಳ ಸಿಬ್ಬಂದಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.