ಶಿವ ಶರಣದ ಬಟ್ಟೆ ಮಡಿ ಮಾಡಲು ಹಾಗೂ ವಚನಗಳ ಮೂಲಕ ಸಮ ಸಮಾಜ ನಿರ್ಮಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಶ್ರೀ ಮಡಿವಾಳ ಮಾಚಿದೇವರು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಮಡಿವಾಳ ಸಮಾಜ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವ ಸಾಹಿತ್ಯ ಅಂತಿದ್ದರೆ ಅದು ವಚನ ಸಾಹಿತ್ಯ. ಇಂತಹ ವಚನ ಸಾಹಿತ್ಯದ ಮೂಲಕ ಸಮ ಸಮಾಜದ ತತ್ವಗಳನ್ನು ಪ್ರತಿಪಾದಿಸಿದವರು ಮಾಚಿದೇವರು.
ತನ್ನ ಇಡೀ ಜೀವನವನ್ನು ಶಿವಶರಣರ ಬಟ್ಟೆಗಳನ್ನು ಮಡಿ ಮಾಡುತ್ತಾ, ತಮ್ಮ ಕ್ರಾಂತಿಕಾರಕ ಮನೋಭಾವ ಮತ್ತು ವಚನಗಳ ಮೂಲಕ ಸಮಾಜ ಸುಧಾರಣೆಗೆ ಮುಡಿಪಾಗಿಟ್ಟ ಮಾಚಿದೇವರು ಕ್ರಿ.ಶ.1111 ರಲ್ಲಿ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ದೇವರ ಹಿಪ್ಪರಗಿಯಲ್ಲಿ ಪರ್ವತಯ್ಯ ಮತ್ತು ಸುಜ್ಞಾನವ್ವ ದಂಪತಿಗೆ ಜನಿಸಿದರು. ಪವಾಡ ಪುರುಷ ಎಂದೇ ಪ್ರಸಿದ್ದರಾದ ಇವರು ಬಸವಣ್ಣನವರ ಅನುಭವ ಮಂಟಪದಲ್ಲಿ ಅಗ್ರಸ್ಥಾನ ಪಡೆದ ಮಹಾನ್ ವ್ಯಕ್ತಿಯಾಗಿದ್ದರು. ಇಂತಹ ಮಹಾನ್ ವ್ಯಕ್ತಿಗ ಪರಂಪರೆಯಲ್ಲಿ ನಾವು ಕೂಡ ಸಾಗಿ ಅವರ ವಿಚಾರಗಳನ್ನು ಅಳವಡಿಸಿಕೊಳ್ಳೋಣ ಎಂದರು.
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದ ನಾಮ ನಿರ್ದೇಶಕ ಕೆ.ಎಸ್.ಅರುಣ್‍ಕುಮಾರ್ ಮಾತನಾಡಿ, ಮಾಚಿದೇವರು ಶ್ರೇಷ್ಟ ಶಿವಶರಣರು. ಬಸವಣ್ಣನವರ ಅನುಭವ ಮಂಟಪದಲ್ಲಿ ಅಗ್ರಸ್ಥಾನ ಪಡೆದಿದ್ದು, ಕಲ್ಯಾಣಕ್ಕೆ ಹೊರಗಿನಿಂದ ಬಂದವರನ್ನು ಪರೀಕ್ಷಿಸಿ ಪ್ರವೇಶ ನೀಡುವ ಕಾಯಕವನ್ನು ಮಾಡುತ್ತಿದ್ದರು ಹಾಗೂ ಶರಣರ ಬಟ್ಟೆಗಳನ್ನು ನಿಷ್ಟಯಿಂದ ಮಡಿ ಮಾಡುತ್ತಿದ್ದ ಇವರು ಅನೇಕ ವಚನಗಳನ್ನು ರಚಿಸಿದ್ದಾರೆ. 354 ವಚನಗಳ ದಾಖಲೆಗಳಿದ್ದರೂ 600 ಕ್ಕೂ ಹೆಚ್ಚು ವಚನ ರಚಿಸಿದ್ದಾರೆಂಬ ಉಲ್ಲೇಖವಿದೆ ಎಂದರು.
ಶ್ರೀ ವಿದ್ಯಾಲಯ ಶಿಕ್ಷಣ ಟ್ರಸ್ಟ್‍ನ ಕಾರ್ಯದರ್ಶಿ ಡಾ.ಹೆಚ್.ಬಿ.ಮಡಿವಾಳರ್ ವಿಶೇಷ ಉಪನ್ಯಾಸ ನೀಡಿ, ಮಡಿವಾಳ ಮಾಚಿದೇವರು 12 ಶತಮಾನದ ಕ್ರಾಂತಿಕಾರಿ ಶರಣರಲ್ಲಿ ಒಬ್ಬರಾಗಿದ್ದರು. ಅಂದಿನ ಅಸಮಾನತೆ, ಅಸ್ಪøಶ್ಯತೆ, ಜಾತೀಯತೆ, ದುರ್ಬಲರ ಶೋಷಣೆಯನ್ನು ವಿರೋಧಿಸಿ, ಸರ್ವರಿಗೂ ಸಮಬಾಳು ಹಾಗೂ ಸಮಪಾಲು ಎಂಬ ಸರಿ ಸಮಾನ ವ್ಯಕ್ತಿತ್ವದ ಪ್ರತಿಪಾದನೆ ಮೂಲಕ ಶೋಷಿತರನ್ನು ಮುಖ್ಯವಾಹಿನಿಗೆ ತರುವ ಅಂದಿನ ಶರಣ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದ್ದರು.
ಶೂದ್ರರಿಗೆ ವಿದ್ಯಾಭ್ಯಾಸ ಮತ್ತಿತರೆ ಸೌಲಭ್ಯಗಳು ಕಷ್ಟವಾಗಿದ್ದ ಆಗಿನ ಕಾಲದಲ್ಲಿ ಕ್ರಾಂತಿಕಾರಕ ಮನೋಭಾವದಿಂದ ಕೂಡಿದ ಇವರಿಗೆ ಕ್ರಾಂತಿಕಾರಕ ಗುರುಗಳೇ ದೊರೆತಿದ್ದು, ಅವರ ಗುರುಗಳಾದ ಮಲ್ಲಿಕಾರ್ಜುನಯ್ಯ ಅವರು ಮಾಚಿದೇವಯ್ಯರನ್ನು ಶ್ರೇಷ್ಟ ವ್ಯಕ್ತಿಯನ್ನಾಗಿ ಮಾಡುತ್ತಾರೆ.
ವೀರಭದ್ರನ ಅವತಾರ ಪುರುಷನಾದ ಮಾಚಿದೇವರು ಉಲ್ಲೇಖವೊಂದರ ಪ್ರಕಾರ ಶಿವನ ಶಾಪದಿಂದ ವಿಮೋಚನೆಗಾಗಿ ಭೂಲೋಕದಲ್ಲಿ ಹುಟ್ಟಿ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾಯಕದಲ್ಲಿ ತೊಡಗುತ್ತಾರೆ. ಅವರು ಕೇವಲ ಶರಣರ ಬಟ್ಟೆಗಳನ್ನು ಮಾತ್ರ ಮಡಿ ಮಾಡಿ, ಅತ್ಯಂತ ಮಡಿಯಿಂದ ಅವನ್ನು ಶರಣರಿಗೆ ತಲುಪಿಸುತ್ತಿದ್ದರು. ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂದು ತಮ್ಮ ಮಡಿ ಮಾಡುವ ಕಾಯಕವನ್ನೇ ಕೈಲಾಸವೆಂದು ತಿಳಿದು ಅತ್ಯಂತ ನಿಷ್ಟೆಯಿಂದ, ಶ್ರದ್ದೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಕಾಯಕ ಮಾಡುತ್ತಾ ಕಾಯಕಯೋಗಿ ಎನಿಸಿದ್ದರು ಎಂದರು.
ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರಾದ ಹೆಚ್.ಎಸ್.ಸದಾಶಿವಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಇತರೆ ಪದಾಧಿಕಾರಿಗಳು, ಸಮಾಜದ ಬಾಂಧವರು ಹಾಜರಿದ್ದರು.