ಆಡಳಿತ ಪಕ್ಷದ ವಿಷಯ ಮಂಡನೆಗಳು, ವಿರೋಧ ಪಕ್ಷದ ಪ್ರಶ್ನೆ ಮತ್ತು ಚರ್ಚೆಗಳು, ಪರ ವಿರೋಧದ ಅಲೆಗಳು ಒಟ್ಟಾರೆ ಯುವ ಸಂಸತ್ತಿನ ಕಲಾಪಗಳು ಸಂಸತ್ತಿನ ಅಧಿವೇಶನವನ್ನು ನೆನಪಿಸುಂತಿತ್ತು.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಕರ್ನಾಟಕ ಸರ್ಕಾರದ ಸಚಿವಾಲಯ ಬೆಂಗಳೂರು ಹಾಗೂ ಜಿಲ್ಲಾ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಯುವ ಸಂಸದೀಯ ಪಟುಗಳು ಉತ್ತಮವಾಗಿ ತಮ್ಮ ಪಾತ್ರ ನಿರ್ವಹಣೆ ಮಾಡಿದರು.
ಮಾಸೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯಾದ ನವ್ಯ ಕೆ.ಜಿ ಸಭಾಪತಿಯಾಗಿ ಉತ್ತಮವಾಗಿ ಅಧಿನವೇನದ ಕಲಾಪಗಳನ್ನು ನಡೆಸಿಕೊಟ್ಟರು.

ಆರಂಭದಲ್ಲಿ ರಾಜಕಾರಣಿ ಸುಭದ್ರಮ್ಮನವರಿಗೆ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಸಂತಾಪ ಸೂಚಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷದ ಸದಸ್ಯರು ಗೃಹಲಕ್ಷ್ಮಿ ಯೋಜನೆಯಡಿ ಇನ್ನೂ ಹಲವಾರು ಮಹಿಳಾ ಫಲಾನುಭವಿಗಳ ಖಾತೆಗೆ ಹಣ ಮಂಜೂರಾಗಿಲ್ಲ. ತಮ್ಮದು ಕೇವಲ ಹುಸಿ ಭರವಸೆ ನೀಡುವ ಸರ್ಕಾರ ಎಂದು ಮೂದಲಿಸಿದರು.
ಸುಭಾಷ್‍ನಗರ ಸರ್ಕಾರಿ ಪ್ರೌಢಶಾಲೆಯ ಭೂಮಿಕಾ ಮುಖ್ಯಮಂತ್ರಿ ಪಾತ್ರ ನಿರ್ವಹಿಸಿ, ನಮ್ಮದು ಮೌಲ್ಯಾಧಾರಿತ ರಾಜಕಾರಣ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಹಂತ ಹಂತವಾಗಿ ಎಲ್ಲ ಅರ್ಹ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಹಣ ಜಮೆಯಾಗಲಿದೆ ಎಂದು ಸಮರ್ಥಿಸಿಕೊಂಡರು.
ವಿರೋಧಪಕ್ಷದ ಸದಸ್ಯರು ಜಿಲ್ಲೆಯ ರಸ್ತೆಗಳಲ್ಲಿ ಗುಂಡಿ-ಗೊಟರುಗಳು ಬಿದ್ದಿದ್ದು ಹಾಳಾಗಿವೆ.

ದೂರದರ್ಶಿತ್ವವಿಲ್ಲದೆ ಕಳಪೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ರಸ್ತೆಗಳ ನಿರ್ವಹಣೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದರು. ಲೋಕೋಪಯೋಗಿ ಸಚಿವರು ಉತ್ತರಿಸಿ, ತಮ್ಮ ಸರ್ಕಾರದ ಅವಧಿಯಲ್ಲಿ ನಿರ್ಮಿಸಿದ ರಸ್ತೆಗಳ ಕಥೆ ಹೀಗೆ ಆಗಿದೆ. ನಾವು ಉತ್ತಮ ರಸ್ತೆಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಿಕೊಂಡಿದ್ದೇವೆ. ನಮ್ಮ ಸರ್ಕಾರ ಬಂದಾಗಿನಿಂದ ಅಪಘಾತಗಳ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದುತ್ತರಿಸಿದರು.
ಶಿಕ್ಷಣ ಮಂತ್ರಿಗಳನ್ನುದ್ದೇಶಿಸಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 55 ಸಾವಿರ ಶಿಕ್ಷಕರ ಕೊರತೆ ಇದೆ. ಇದಕ್ಕೆ ಸರ್ಕಾರದ ಕ್ರಮ ಏನು? ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇದೆ. ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ಓರ್ವವಿರೋಧ ಪಕ್ಷದ ಸದಸ್ಯರು ಪ್ರಶ್ನಿಸಿದರೆ, ಮತ್ತೋರ್ವ ಸದಸ್ಯರು ಎಸ್‍ಎಸ್‍ಎಲ್‍ಸಿ ಯಲ್ಲಿ ಮೂರು ಪ್ರಯತ್ನದ ಪರೀಕ್ಷೆ ಅಗತ್ಯವಿತ್ತೇ, ಜಿಪಿಟಿ ಶಿಕ್ಷಕರಿಗೆ ಜವಾಬ್ದಾರಿ ನೀಡುತ್ತಿಲ್ಲ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ಕ್ರಮ ಏನು ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕಿ ಶೃತಿ ಎಸ್, 8ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ನೀಡುತ್ತಿಲ್ಲ. ಕೇವಲ ಭರವಸೆ ನೀಡಿದರೆ ಸಾಲದು, ಅದನ್ನು ಜಾರಿಗೊಳಿಸಬೇಕೆಂದರು
ಹಳೆಸೊರಬ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಿದಾ ನಾಜ್ ಶಿಕ್ಷಣಮಂತ್ರಿಯಾಗಿ ಉತ್ತರಿಸಿ, ಹಂತ ಹಂತವಾಗಿ ಶಾಲಾ ಶಿಕ್ಷಕರನ್ನು ಭರ್ತಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಹಾಗೂ ಅತಿಥಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಇಲ್ಲ. ಕೆಲವು ಕಡೆ ಮಾತ್ರ ಸಮಸ್ಯೆ ಇದ್ದು ಅಲ್ಲಿ ಮಕ್ಕಳು ಶಾಲೆಗೆ ಬರಲು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಿ, ಶಾಲೆಗೆ ದಾಖಲು ಮಾಡಲಾಗುತ್ತಿದೆ. ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ, ಶೂ, ಪುಸ್ತಕ ಹೀಗೆ ಎಲ್ಲ ಉಚಿತವಾಗಿ ನೀಡಲಾಗುತ್ತಿದ್ದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದ ಅವರು ವಿರೋಧ ಪಕ್ಷದ ನಾಯಕರ ಪ್ರಶ್ನೆಗೆ ಕೊರೊನಾ ವೇಳೆ ತಮ್ಮ ಸರ್ಕಾರಾವಧಿಯಲ್ಲೇ ಸೈಕಲ್ ವಿತರಣೆ ನಿಲ್ಲಿಸಲಾಗಿತ್ತು, ಇದೀಗ ಮತ್ತೆ ಸೈಕಲ್ ವಿತರಣೆಗೆ ಕ್ರಮ ವಹಿಸಲಾಗುವುದು ಎಂದು ಉತ್ತರಿಸಿದರು.

ವಿರೋಧಪಕ್ಷದ ಸದಸ್ಯರೋರ್ವರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಹಾಗೂ ಕಲುಷಿತ ನೀರು ಸರಬರಾಜಿನಿಂದ ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ ಇದಕ್ಕೆ ಏನು ಕ್ರಮ ಕೈಗೊಂಡಿದ್ದೇರೆಂದು ಪ್ರಶ್ನಿಸಿದರು.
ಸಂಬಂಧಿಸಿದ ಸಚಿವರು, ಕುಡಿಯುವ ನೀರಿಗೆ ಸದ್ಯಕ್ಕೆ ಕೊರತೆ ಇಲ್ಲ. ಮನೆ ಮನೆ ಗಂಗಾ ಯೋಜನೆ ಮೂಲಕ ಪ್ರತಿ ಮನೆಗೆ ನಲ್ಲಿ ಹಾಕಿಸಿ ನೀರು ನೀಡಲಾಗುತ್ತಿದೆ. ಇನ್ನು ಕಲುಷಿತ ನೀರು ಸರಬರಾಜಿಗೆ ಕಾರಣವಾದ ಪೈಪ್‍ಲೈನ್‍ಗಳನ್ನು ಸರಿಪಡಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಊರುಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದರು.
ಕಾವೇರಿ ನದಿ ನೀರನ್ನು ಹೊರರಾಜ್ಯಕ್ಕೆ ಹರಿಸುವ ಸಂಬಂಧ ಮುಖ್ಯಮಂತ್ರಿಗಳು ಸ್ವತಃ ತಾವೇ ನಿರ್ಧಾರ ಕೈಗೊಂಡು ರಾಜ್ಯಕ್ಕೆ ಮೋಸವಾಗುತ್ತಿದೆ ಎಂದು ದೂರಿದರು. ಮುಖ್ಯಮಂತ್ರಿಗಳು ಉತ್ತರಿಸಿ, ಕಾವೇರಿ ನೀರಿನ ಸಮಸ್ಯೆ ಇಂದಿನದಲ್ಲ. ದಶಕಗಳ ಕಾಲದ ಸಮಸ್ಯೆ. ಹಾಗೂ ನಮ್ಮ ಸರ್ಕಾರ ನಮ್ಮ ಜನತೆ ಮತ್ತು ರೈತರಿಗೆ ಅನ್ಯಾಯ ಆಗುವ ರೀತಿ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸ್ಪಷ್ಟನೆ ನೀಡಿದರು.
ವಿರೋಧ ಪಕ್ಷದ ಸದಸ್ಯರ ಪ್ರಶ್ನೆಗಳಿಗೆ ಆರೋಗ್ಯ ಸಚಿವರು ಉತ್ತರಿಸಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಸೌಲಭ್ಯಗಳ ಕೊರತೆ ಇಲ್ಲ. ಜಿಲ್ಲಾಸ್ಪತ್ರೆಯಲ್ಲಿ ಸ್ಪೆಷಾಲಿಟಿ ಸೌಲಭ್ಯವೂ ಇದೆ. ಔಷಧಿಗಳ ಸಾಕಷ್ಟು ಲಭ್ಯತೆ ಇದ್ದು ಯಾರೂ ಹೊರಗಡೆ ಮಾತ್ರೆಗಳನ್ನು ತೆಗೆದುಕೊಳ್ಳಬಾರದೆಂದು ಸೂಚಿಸಲಾಗಿದೆ.

ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ ಇಂದಿಗೂ ನಿವಾರಣೆಯಾಗಿಲ್ಲ ಈ ಬಗ್ಗೆ ಕ್ರಮದು ಕುರಿತು ವಿರೋಧ ಪಕ್ಷದ ಸದಸ್ಯರು ಪ್ರಶ್ನಿಸಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಉತ್ತರಿಸಿ, ಎಲ್ಲ ಕಡೆ ಬಾಲ್ಯವಿವಾಹ ತಡೆಗೆ ಕ್ರಮ ವಹಿಸಲಾಗಿದೆ. ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ದತಿ ವಿರುದ್ದ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದರು.
ಗಾಂಜಾ, ತಂಬಾಕು ಇತರೆ ಮಾದಕ ವ್ಯಸನ ತಡೆಗೆ ಗೃಹಸಚಿವರು ಏನು ಕ್ರಮ ಕೈಗೊಂಡಿದ್ದಾರೆಂದು ವಿರೋಧಪಕ್ಷದ ನಾಯಕರು ಪ್ರಶ್ನಿಸಿದರು. ಸಚಿವರು ಉತ್ತರಿಸಿ, ಕೋಟ್ಪಾ ಮತ್ತು ಸಂಬಂಧಿಸಿದ ಕಾಯ್ದೆಯಡಿ ದಾಳಿ ನಡೆಸಿ ಪ್ರಕರಣ ದಾಖಲಿಸಿ ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತಿದೆ. ಅರಿವು ಕಾರ್ಯಕ್ರಮಗಳು, ತಂಬಾಕು ಮುಕ್ತ ಶಾಲೆಗಳ ಘೋಷಣೆ ಮಾಡಲಾಗುತಿದೆ ಎಂದರು.

ವಿಧೇಯಕ ಮಂಡನೆ ವೇಳೆ ಶರಾವತಿ ಮತ್ತು ಗೇರುಸೊಪ್ಪ ಅಭಯಾರಣ್ಯ ಸ್ಥಾಪನೆಯಿಂದ ಜೈವಿಕ ವ್ಯವಸ್ಥೆ ಸುಧಾರಣೆಯೊಂದಿಗೆ ಸಿಂಗಳೀಕದಂತಹ ಅಪರೂಪದ ಪ್ರಾಣಿಗಳ ರಕ್ಷೆಣೆಗೆ ಅನುಕೂಲವಾಗುತ್ತದೆ ಎಂಬ ವಿಧೇಯ ಮಂಡಿಸಿದರು. ಸದಸ್ಯರು ಈ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿ, ಅನುಮೋದಿಸಿದರು.
ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ನಾಯಕಿ ನಮ್ಮ ರಾಜ್ಯದ ಬರಗಾಲ ಪೀಡಿತ ಜಿಲ್ಲೆಗಳು ಮತ್ತು ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನಿಸಿದರು.
ಕಂದಾಯ ಸಚಿವರು ಉತ್ತರಿಸಿ, 151 ತಾಲ್ಲೂಕುಗಳನ್ನು ತೀವ್ರ ಬರಗಾಲ ಮತ್ತು 34 ತಾಲ್ಲೂಕುಗಳನ್ನು ಸಾಧಾರಣ ಒಟ್ಟು 195 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಗತ್ಯವಿರುವೆಡೆ ಮೋಡ ಬಿತ್ತನೆ ಮಾಡಲಾಗಿದೆ. ಬೆಳೆ ಸಮೀಕ್ಷೆ, ಬೆಳೆ ವಿಮೆಯನ್ನು ಮಾಡಿಸಲಾಗಿದೆ ಎಂದರು.
ವಿರೋಧ ಪಕ್ಷದ ಸದಸ್ಯ ಕೇವಲ ಗ್ಯಾರಂಟಿ ಯೋಜನೆಗಳ ಕಡೆ ಗಮನ ಇದ್ದು ಅಭಿವೃದ್ದಿ ಕೆಲಸಗಳೇನೂ ಆಗುತ್ತಿಲ್ಲ, ತಮ್ಮ ಕೈಯಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲದಿದ್ದರೆ ರಾಜೀನಾಮೆ ನೀಡಿರಿ ಎಂದು ಆಗ್ರಹಿಸಿದರು.
ಆಡಳಿತ ಪಕ್ಷದ ನಾಯಕರು ತಮ್ಮ ಆಡಳಿತ ಮತ್ತು ನಾಯಕತ್ವದ ಕುರಿತು ವಿವರಣೆ ನೀಡಿ ಸಮರ್ಥಿಸಿಕೊಂಡರು.

ರಾಜ್ಯ ಮಟ್ಟಕ್ಕೆ ಆಯ್ಕೆ

ಸಾಗರ ತಾಲ್ಲೂಕಿನ ಸುಭಾಷ್‍ನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಭೂಮಿಕಾ ಬಿ.ಜಿ ಪ್ರಥಮ ಮತ್ತು ಶಿವಮೊಗ್ಗ ತಾಲ್ಲೂಕು ಪಿಳ್ಳಂಗಿರಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಜ್ವಲ್ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಮಾಧಾನಕರ ಬಹುಮಾನ

ಸುಭಾಷ್‍ನಗರ್ ಸರ್ಕಾರಿ ಪ್ರೌಢಶಾಲೆಯ ಶೃತಿ ಬಿ ಎಸ್ ತೃತೀಯ, ಹೊಸನಗರ ತಾಲ್ಲೂಕಿನ ಮಸಗಲ್ಲಿ ಸ.ಪ್ರೌ.ಶಾ ಯ ವಿದ್ಯಾರ್ಥಿನಿ ಸಹನ ಕೆ ನಾಲ್ಕನೇ, ಮಾಸೂರು ಶಾಲೆಯ ನವ್ಯ ಕೆ.ಜಿ ಐದನೇ ಮತ್ತು ಕೊಮ್ಮನಾಳ್ ಶಾಲೆಯ ಹರ್ಷಿತಾ ಜಿ ಆರನೇ ಬಹುಮಾನ ಪಡೆದುಕೊಂಡರು.

ವರದಿ ಪ್ರಜಾಶಕ್ತಿ…