ರಾಜ್ಯದ ಎಲ್ಲ ನಗರಗಳ ಜ್ವಲಂತ ಸಮಸ್ಯೆಗಳಲ್ಲಿ ಒಂದು ಪಾರ್ಕಿಂಗ್ ಸಮಸ್ಯೆ. ಶಿವಮೊಗ್ಗ ನಗರ ಕೂಡ ಇದರಿಂದ ಹೊರತಾಗಿಲ್ಲ. ಶಿವಮೊಗ್ಗ ನಗರಾದ್ಯಂತ ಪೊಲೀಸರು ಅಲ್ಲಲ್ಲಿ ನೋ ಪಾರ್ಕಿಂಗ್ ಪ್ರದೇಶಗಳನ್ನು ನಿಗದಿಪಡಿಸಿದ್ದಾರೆ. ನೋ ಪಾರ್ಕಿಂಗ್ ನಲ್ಲಿ ಪಾರ್ಕಿಂಗ್ ಮಾಡಿದಾಗ ಟ್ರಾಫಿಕ್ ಪೊಲೀಸ್ ನಿಮ್ಮ ವಾಹನದ ಮೇಲೆ ಕೇಸ್ ದಾಖಲಿಸಿದ್ದು ಸರ್ವೇಸಾಮಾನ್ಯ ಅಲ್ಲದೆ ಟೊ ಮಾಡಲು ಕೂಡ ಕಾನೂನಾತ್ಮಕವಾಗಿ ಅವಕಾಶವಿದೆ ಅಂತೆಯೇ ಕೆಲವು ಪ್ರದೇಶಗಳಲ್ಲಿ ಪಾರ್ಕಿಂಗ್ ಗಾಗಿ ನಿಗದಿಪಡಿಸಿದ್ದಾರೆ. ಹಲವು ರಸ್ತೆಗಳಲ್ಲಿ ಸೋಮವಾರ ಬುಧವಾರ ಶುಕ್ರವಾರ ರಸ್ತೆಯ 1ಭಾಗದಲ್ಲಿ ಪಾರ್ಕಿಂಗ್ ಹಾಗೂ ಮಂಗಳವಾರ ಗುರುವಾರ ಶನಿವಾರ ರಸ್ತೆಯ ಇನ್ನೊಂದು ಭಾಗದಲ್ಲಿ ಪಾರ್ಕಿಂಗ್ ಗೆ ಅನುವು ಮಾಡಿಕೊಡಲಾಗಿದೆ. ಆದರೆ ಇಲ್ಲೊಂದು ಸಮಸ್ಯೆ ಏನೆಂದರೆ ನಿಗದಿಪಡಿಸಿದ ಪಾರ್ಕಿಂಗ್ ನಲ್ಲಿ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿದರೂ ಕೂಡ ಅಂಗಡಿ ಮುಂಗಟ್ಟಿನ ಮಾಲೀಕರು ವಾಹನ ಸವಾರರ ಮೇಲೆ ದೌರ್ಜನ್ಯ ನಡೆಸುವುದು ಸರ್ವೆ ಸಾಮಾನ್ಯವಾಗಿದೆ. ವಾಹನದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಮೂರು ನಾಲ್ಕುರಸ್ತೆ ತಿರುಗಿ ನಿಗದಿಪಡಿಸಿದ ಪಾರ್ಕಿಂಗ್ ಜಾಗ ಸಿಕ್ಕಿತೆಂದು ನಿಟ್ಟುಸಿರು ಬಿಟ್ಟು ಪಾರ್ಕಿಂಗ್ ಮಾಡಲು ಹೋದರೆ ಅಂಗಡಿ ಮಾಲೀಕರು ನಮ್ಮ ಅಂಗಡಿಯ ಮುಂದೆ ಪಾರ್ಕಿಂಗ್ ಮಾಡಬೇಡಿ ಎಂದು ಖ್ಯಾತೆ ತೆಗೆಯುವುದು ಸರ್ವೇಸಾಮಾನ್ಯವಾಗಿದೆ. ಹಾಗಿದ್ದರೆ ಕಾನೂನಾತ್ಮಕವಾಗಿ ಪಾರ್ಕಿಂಗ್ ಮಾಡುತ್ತಿರುವ ಸವಾರರು ಸರಿಯೇ ಅಥವಾ ಅಂಗಡಿ ಮಾಲೀಕರು ಸರಿಯೇ ? ಉತ್ತರ ಈ ಲೇಖನದಲ್ಲಿದೆ ನೋಡಿ.
ಯಾವುದೇ ಅಂಗಡಿ ಮಾಲೀಕರು ಕೂಡ ಅವರ ಅಂಗಡಿಯ ಜಾಗವನ್ನು ಹೊರತುಪಡಿಸಿ ಮುಂದಿರುವ ಫುಟ್ ಪಾತ್ ಹಾಗೂ ರಸ್ತೆಯ ಪಾರ್ಕಿಂಗ್ ಸ್ಪೇಸ್ ಮೇಲೆ ಯಾವುದೇ ಹಿಡಿತವನ್ನು ಹೊಂದಿರುವುದಿಲ್ಲ. ಫುಟ್ ಪಾತ್ ಹಾಗೂ ರಸ್ತೆಗಳು ಪಾಲಿಕೆಯ ಸ್ವತ್ತಾಗಿರುತ್ತವೆ. ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ 1988 ಪ್ರಕಾರ ನೋ ಪಾರ್ಕಿಂಗ್ ನಲ್ಲಿ ನಿಮ್ಮ ವಾಹನ ನಿಲ್ಲಿಸುವುದು ಎಷ್ಟು ತಪ್ಪೋ, ಪಾರ್ಕಿಂಗ್ ಜಾಗದಲ್ಲಿ ನಿಮ್ಮ ವಾಹನ ನಿಲ್ಲಿಸುವುದು ಅಷ್ಟೇ ಸರಿ. ನಗರದಲ್ಲಿ ಟ್ರಾಫಿಕ್ ಪೊಲೀಸರಿಂದ ನಿಗದಿಪಡಿಸಿದ ಜಾಗದಲ್ಲಿ ಪಾರ್ಕಿಂಗ್ ಮಾಡುವುದು ಪ್ರತಿಯೊಬ್ಬ ವಾಹನ ಸವಾರನ ಹಕ್ಕು. ಟ್ರಾಫಿಕ್ ಪೊಲೀಸರು ನಿಗದಿಪಡಿಸಿದ ಪಾರ್ಕಿಂಗ್ ಜಾಗದಲ್ಲಿ ವಾಹನ ಪಾರ್ಕ್ ಮಾಡಲು ಅಂಗಡಿ ಮಾಲೀಕ ಅಡ್ಡಿಪಡಿಸಿದರೆ ಅದು ಕಾನೂನಿನ ಪ್ರಕಾರ ತಪ್ಪು ಏಕೆಂದರೆ ಅಂಗಡಿಯ ಜಾಗದ ಎದುರಿಗಿರುವ ಫುಟ್ ಪಾತ್ ಹಾಗೂ ರಸ್ತೆಯ ಮೇಲೆ ಯಾವ ಅಂಗಡಿ ಮಾಲೀಕರು ಹಕ್ಕು ಚಲಾಯಿಸುವಂತಿಲ್ಲ ಅದು ಅವರ ಆಸ್ತಿಯೂ ಅಲ್ಲ.
ಅಂಗಡಿಗೆ ಬರುವ ಗ್ರಾಹಕರಿಗೆ ತೊಂದರೆಯಾಗುತ್ತದೆ ಎಂಬ ಪ್ರಶ್ನೆ ಯಾರಿಗಾದ್ರೂ ಮೂಡಿದಲ್ಲಿ ಅದಕ್ಕೆ ಉತ್ತರ ಇಲ್ಲಿದೆ ನೋಡಿ ಸಂಚಾರಿ ಪೊಲೀಸರು ಯಾವುದೇ ಪಾರ್ಕಿಂಗ್ ಜಾಗ ನಿಗದಿ ಪಡಿಸುವ ವೇಳೆ ಅಂಗಡಿಯ ಮುಂದೆ ಸಾಕಷ್ಟು ಫುಟ್ ಪಾತ್ ಗಾಗಿ ಜಾಗವನ್ನು ನಿಗದಿ ಪಡಿಸಿ ತದನಂತರ ಪಾರ್ಕಿಂಗ್ ವ್ಯವಸ್ಥೆ ಮಾಡಿರುತ್ತಾರೆ. ಹಾಗಾಗಿ ಅಂಗಡಿಗೆ ಬರುವ ಜನರಿಗೆ ತೊಂದರೆಯಾಗುತ್ತದೆ ಎಂಬ ಕಲ್ಪನೆಯೇ ತಪ್ಪು.
ಮುಂದೆ ಇದೇ ಕಾಯ್ದೆಯನ್ನು ನೋಡುತ್ತಾ ಹೋಗುವುದಾದರೆ ಯಾವುದೇ ವಾಹನವೂ ಪಾರ್ಕಿಂಗ್ ಜಾಗದಲ್ಲಿ ಹತ್ತು ಗಂಟೆಯ ನಂತರವೂ ಒಂದೇ ಜಾಗದಲ್ಲಿ ನಿಂತಿದ್ದರೆ ಹಾಗೂ ಅದರ ಮಾಲೀಕರು ಸುತ್ತಮುತ್ತಲಲ್ಲಿ ಲಭ್ಯವಿಲ್ಲದಿದ್ದರೆ ಅದನ್ನು abondned ವೆಹಿಕಲ್ ಎಂದು ಗುರುತಿಸಿ ಪೊಲೀಸರು ಆತನನ್ನು ಹತ್ತಿರದ ಸಂಚಾರಿ ಠಾಣೆಗೆ ಟೊ ಮಾಡಲು ಇದೇ ಆ್ಯಕ್ಟ್ ನಲ್ಲಿ ಅವಕಾಶ ನೀಡಲಾಗಿದೆ. ಆದರೂ ಇಲ್ಲಿ ಕೂಡ ಅಂಗಡಿ ಮಾಲೀಕರು ಸಂಚಾರಿ ಪೊಲೀಸರಿಗೆ ಕರೆ ಮಾಡಿ ವಿಷಯವನ್ನು ತಿಳಿಸಬೇಕಾಗುತ್ತದೆ ಅನಂತರ ಸಂಚಾರಿ ಪೊಲೀಸರು ವಾಹನದ ಹತ್ತಿರ ಬಂದು ಮಾಲೀಕನು ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಮೇಲೆ ಅವರು ವಾಹನವನ್ನು ಟೋ ಮಾಡಿ ತೆಗೆದುಕೊಂಡು ಹೋಗಬಹುದು.
ಇಷ್ಟೆಲ್ಲಾ ತಿಳಿದ ಮೇಲೂ ಅಂಗಡಿಯ ಮಾಲೀಕರು ಪಾರ್ಕಿಂಗ್ ವಿಚಾರವಾಗಿ ನಿಮ್ಮನ್ನು ನಿಂದಿಸಿದರೆ ನೀವು ಹತ್ತಿರದ ಪೋಲಿಸ್ ಸ್ಟೇಷನ್ ನಲ್ಲಿ ದೂರನ್ನು ದಾಖಲಿಸಬಹುದು.
ಟೀಂ ಪ್ರಜಾಶಕ್ತಿ
ಕಾನೂನು ಸಲಹೆ : ಎಂಎ ಸುಗಂಧಿ
ವಕೀಲರು ಬೆಂಗಳೂರು, ಸಂಪಾದಕರು ಪ್ರಜಾಶ್ರೀ ಪತ್ರಿಕೆ