ಅಪರಾಧ ತಡೆ ಮಾಸಾಚರಣೆ – 2024ರ ಅಂಗವಾಗಿ
ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಕುವೆಂಪು ವಿಶ್ವ ವಿಧ್ಯಾಲಯದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಶ್ರೀ ಮಿಥುನ್ ಕುಮಾರ್ ಜಿ. ಕೆ. ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ, ವಿಧ್ಯಾರ್ಥಿಗಳ ಕುರಿತು ಮಾತನಾಡಿ ಈ ಕೆಳಕಂಡ ಮಾಹಿತಿಯನ್ನು ನೀಡಿರುತ್ತಾರೆ.
1) ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಜನ ಸಾಮಾನ್ಯರ ಬಳಿ ಮೊಬೈಲ್ ಫೋನ್ ಇರುವುದು ಸರ್ವೇ ಸಾಮಾನ್ಯ ವಿಷಯವಾಗಿರುತ್ತದೆ ಹಾಗೂ ಮೊಬೈಲ್ ಮತ್ತು ಇಂಟರ್ ನೆಟ್ ನ ಬಳಕೆ ಹೆಚ್ಚು ಮಾಡುತ್ತಾ ಹೋದಂತೆ ಸಾಮಾಜಿಕ ಜಾಲತಾಣದಲ್ಲಿ ಸಂವಹನ ಹಾಗೂ ವಿಷಯದ ವಿನಿಮಯ ಕೂಡ ಹೆಚ್ಚುತ್ತಾ ಹೋಗುತ್ತದೆ. ಸಾಮಾಜಿಕ ಜಾಲತಾಣದ ಬಳಕೆಯಿಂದ ಉಪಯುಕ್ತತೆ ಎಷ್ಟು ಪ್ರಮಾಣದಲ್ಲಿ ಇರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದುಷ್ಪರಿಣಾಮಗಳೂ ಸಹಾ ಇರುತ್ತವೆ. ಆದ್ದರಿಂದ ಎಚ್ಚರಿಕೆಯಿಂದ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿ ಹಾಗೂ ಸುರಕ್ಷಿತರಾಗಿರಿ.
2) ಸೈಬರ್ ವಂಚಕರು ಸಾಮಾಜಿಕ ಜಾಲತಾಣದಲ್ಲಿ ಬೇರೆಯವರ ಹೆಸರಿನಲ್ಲಿ ಸುಳ್ಳು ಪ್ರೊಫೈಲ್ ಗಳನ್ನು ಕ್ರಿಯೇಟ್ ಮಾಡಿಕೊಂಡು, ನಿಮ್ಮ ಜೊತೆ ಸಂವಹನ ನಡೆಸಿ, ನಿಮ್ಮ ಫೋಟೋ / ವೈಯಕ್ತಿಕ ಮಾಹಿತಿಯನ್ನು ಪಡೆದು, ನಿಮಗೆ ಮೋಸ ಮಾಡುವ ಹಾಗೂ ನಿಮಗೆ ಬೆದರಿಕೆ ಹಾಕುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಫ್ರೆಂಡ್ಸ್ ರಿಕ್ವೆಸ್ಟ್ ಗಳಿಗೆ ಅಕ್ಸೆಪ್ಟ್ ಕೊಡಬೇಡಿ ಮತ್ತು ನೀವುಗಳು ಯಾರೊಂದಿಗೆ ಸಂವಹನ ನಡೆಸುತ್ತಿದ್ದೀರ ಎಂಬ ಬಗ್ಗೆ ತಿಳಿದು ಕೊಂಡು ಸಂವಹನ ನಡೆಸಿ. ನಿಮಗೆ ಎಷ್ಟೇ ಪರಿಚಿತರಿದ್ದರೂ ಕೂಡ ಸಾಮಾಜಿಕ ಜಾಳತಾಣದ ಮೂಲಕ ನಿಮ್ಮ ಯಾವುದೇ ವೈಯಕ್ತಿಕ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳ ಬೇಡಿ.
3) ಆನ್ ಲೈನ್ ಗೇಮಿಂಗ್ ಎಂಬುದು ಒಂದು ದುಶ್ಚಟದ ರೀತಿ, ಹದಿ ಹರೆಯದ ವಯಸ್ಸಿನವರಲ್ಲಿ ಈ ಗೀಳು ಹೆಚ್ಚಿರುತ್ತದೆ, ಒಂದು ವೇಳೆ ನೀವು ಆನ್ ಲೈನ್ ಗೇಮ್ ಆಡುವ ಚಟವನ್ನು ಒಂದು ಬಾರಿ ಬೆಳೆಸಿಕೊಂಡರೆ ಅದರಿಂದ ಹೊರ ಬರಲು ಕಷ್ಟ ಸಾಧ್ಯವಿರುತ್ತದೆ. ವಿಧ್ಯಾರ್ಥಿಗಳು ಆನ್ ಲೈನ್ ಗೇಮ್ ನಲ್ಲಿ ಹಣ ಕಟ್ಟಿ ಆಡುವ ಸಲುವಾಗಿ ಮೊಬೈಲ್ ಫೋನ್ ಗಳಲ್ಲಿ ಲೋನ್ ಅಪ್ಲಿಕೇಷನ್ ಗಳನ್ನು ಇನ್ ಸ್ಟಾಲ್ ಮಾಡಿಕೊಂಡು ಅದರಿಂದ ಸಾಲ ಪಡೆದಿದ್ದೇ ಆದಲ್ಲಿ, ನೀವು ಅಪ್ಲಿಕೇಷನ್ ಇನ್ ಸ್ಟಾಲ್ ಮಾಡುವಾಗ ಫೋಟೋ, ವಿಡಿಯೋ, ಗ್ಯಾಲರಿ, ಕಾಲ್ ಲೊಕೇಷನ್ ಅನ್ನು ಅಕ್ಸೆಪ್ಟ್ ನೀಡಿರುತ್ತೀರಿ, ಇದರಿಂದ ಲೋನ್ ಅಪ್ಲಿಕೇಷನ್ ನವರು ನಿಮ್ಮ ದಾಖಲಾತಿಗಳನ್ನು / ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ. ಸಾಲದ ಹಣ ನೀಡಲು ತಡ ಮಾಡಿದ್ದೇ ಆದಲ್ಲಿ ನಿಮ್ಮ ಫೋಟೋವನ್ನು ಪಡೆದು ಮಾರ್ಫಿಂಗ್ ಮಾಡಿ, ನಿಮಗೆ ಬೆದರಿಕೆ ಹಾಕುವುದು, ಹೆಚ್ಚಿನ ಹಣ ನೀಡದೇ ಇದ್ದಲ್ಲಿ ನಿಮ್ಮ ಮಾನ ಹಾನಿ ಮಾಡುತ್ತೇವೆಂದು ಬೆದರಿಕೆ ಹಾಕುತ್ತಾರೆ ಆದ್ದರಿಂದ ಎಚ್ಚರಿಕೆ ಇಂದಿರಿ.
4) ನೀವು ಮೊಬೈಲ್ ಬಳಕೆ ಮಾಡುವಾಗ ಯಾವುದೇ ಅಪ್ಲಿಕೇಷನ್ ಗಳನ್ನು ಇನ್ ಸ್ಟಾಲ್ ಮಾಡುವ ಮುನ್ನ ನಂಬಿಕಸ್ಥ ಮೂಲದಿಂದ ಮಾತ್ರ ಅಪ್ಲಿಕೇಷನ್ ಗಳನ್ನು ಇನ್ ಸ್ಟಾಲ್ ಮಾಡಿ, ಯಾವುದೇ ಅಪರಿಚಿತ ವ್ಯಕ್ತಿಗಳು ನಿಮಗೆ apk. ಫೈಲ್ ಗಳನ್ನು ಕಳುಹಿಸಿದರೆ ಇನ್ ಸ್ಟಾಲ್ ಮಾಡಬೇಡಿ. ಒಂದು ವೇಳೆ ನೀವು ಸತ್ಯಾ ಸತ್ಯತೆ ತಿಳಿಯದೇ ಇನ್ ಸ್ಟಾಲ್ ಮಾಡಿಕೊಂಡರೆ ಸೈಬರ್ ವಂಚಕರು ಸುಲಭವಾಗಿ ನಿಮ್ಮ ವೈಯಕ್ತಿಕ ಮಾಹಿತಿ ಹಾಗೂ ದಾಖಲಾತಿಗಳನ್ನು ಪಡೆದುಕೊಂಡು, ಅವುಗಳನ್ನು ದುರುಪಯೋಗ ಮಾಡಿ ನಿಮಗೆ ಯಾವ ರೀತಿ ಬೇಕಾದರೂ ಮೋಸ ಮಾಡುತ್ತಾರೆ. ಜೊತೆಗೆ ನಿಮ್ಮ ಕಾಲ್ ಲಿಸ್ಟ್ ನಲ್ಲಿ ನಿಮ್ಮ ಪೋಷಕರು ಹಾಗೂ ಸಂಬಂಧಿಕರ ನಂಬರ್ ಗಳನ್ನು ಪಡೆದುಕೊಂಡು ಅವರಿಗೆ ಎಡಿಟ್ ಮಾಡಿದ ನಿಮ್ಮ ಫೋಟೋಗಳನ್ನು ಕಳುಹಿಸಿ ನಿಮ್ಮ ಮಾನ ಹಾನಿ ಮಾಡಿ, ಹಣಕ್ಕೆ ಬೇಡಿಕೆ ಇಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣ ಬಳಸುವಾಗ ಎಚ್ಚರಿಕೆಯಿಂದಿರಿ.
5) ಇತ್ತಿಚಿತ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂಬುವುದು ಸಾಮಾನ್ಯವಾಗಿ ಕಂಡು ಬರುತ್ತಿರುವ ಸೈಬರ್ ಕ್ರೈಂ ಆಗಿರುತ್ತದೆ. ಅಪರಿಚಿತ ವ್ಯಕ್ತಿಗಳು ನಿಮ್ಮ ಮೊಬೈಲ್ ಗೆ ವಿಡಿಯೋ ಕರೆ ಮಾಡಿ, ಪೊಲಿಸ್ ಸಮವಸ್ತ್ರದಲ್ಲಿ ಇದ್ದು ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ನೀವು ಡಾರ್ಕ್ ವೆಬ್ / ಆನ್ ಲೈನ್ ನಲ್ಲಿ ನಲ್ಲಿ ಮಾದಕ ವಸ್ತುವಿನ ವ್ಯವಹಾರ ನಡೆಸಿರುವ ಬಗ್ಗೆ ಮಾಹಿತಿ ದೊರೆಕಿದ್ದು, ನಿಮ್ಮ ಮೇಲೆ ಪ್ರಕರಣ ದಾಖಲಿಸಿಲಾಗುತ್ತದೆ. ಒಂದು ವೇಳೆ ನೀವು ದಂಡದ ಮೊತ್ತವನ್ನು ನೀಡಿದರೆ ನಿಮ್ಮ ಮೇಲೆ ಯಾವುದೇ ಪ್ರಕರಣ ದಾಖಲಿಸದೇ ಪ್ರಕರಣವನ್ನು ಮುಕ್ತಾಯ ಮಾಡುತ್ತೇವೆ, ಇಲ್ಲದೇ ಹೋದಲ್ಲಿ ನಿಮ್ಮನ್ನು ದಸ್ತಗಿರಿ ಮಾಡುತ್ತೇವೆಂದು ಹೇಳಿ ನಿಮಗೆ ಬೆದರಿಸಿ ನಿಮ್ಮಿಂದ ಹಣ ಹಾಕಿಸಿಕೊಂಡು ಮೋಸ ಮಾಡುತ್ತಾರೆ. ಆದರೆ ಪ್ರಸ್ತುತ ಡಿಜಿಟಲ್ / ಆನ್ ಲೈನ್ ಕರೆ ಮಾಡಿ ನಿಮ್ಮನ್ನು ದಸ್ತಗಿರಿ ಮಾಡುವ ವ್ಯವಸ್ಥೆ ಜಾರಿಯಲ್ಲಿ ಇರುವುದಿಲ್ಲ. ಆದ್ದರಿಂದ ಇಂತಹ ಮೋಸದ ಕರೆಗಳಿಗೆ ನೀವು ಹೆದರಿ ಹಣವನ್ನು ಕಳೆದುಕೊಳ್ಳಬೇಡಿ, ಕೂಡಲೇ 1903 ಸಹಾಯವಾಣಿಗೆ / ಹತ್ತಿರದ ಸೈಬರ್ ಪೊಲೀಸ್ ಠಾಣೆಗೆ ಸಂಪರ್ಕಿಸಿ ದೂರು ನೀಡಿ.
6) ಸೈಬರ್ ವಂಚಕರು ನಿಮಗೆ ಮೊಸ ಮಾಡುವ ಉದ್ದೇಶದಿಂದ ಮೋಸದ ಕಂಪನಿಗಳ ಬಗ್ಗೆ ಆನ್ ಲೈನ್ ನಲ್ಲಿ ಸುಳ್ಳು ಪ್ರಚಾರ ಮಾಡಿ, ಕಡಿಮೆ ಅವಧಿಗೆ ಹೆಚ್ಚಿಗೆ ಲಾಭ ಮಾಡಿಕೊಡುತ್ತೇವೆಂದು ಆನ್ ಲೈನ್ ನಲ್ಲಿ ಇನ್ವೆಸ್ಟ್ ಮೆಂಟ್ ಮಾಡಿಸಿಕೊಂಡು, ಮೊದಲು ಕಡಿಮೆ ಹಣಕ್ಕೆ ಹೆಚ್ಚು ಹಣ ಕೊಟ್ಟಂತೆ ಆಸೆ ತೋರಿಸಿ, ನಂತರ ನೀವು ಹೆಚ್ಚು ಹಣ ಹೂಡಿಕೆ ಮಾಡುತ್ತಾ ಹೋದಂತೆ ನಿಮಗೆ ಹೂಡಿಕೆ ಮಾಡಿದ ಹಣವನ್ನೂ ಸಹಾ ಹಿಂದಿರುಗಸದೇ ಮೊಸ ಮಾಡುತ್ತಾರೆ. ಆನ್ ಲೈನ್ ನಲ್ಲಿ ಹಣ ಕಾಸಿನ ವ್ಯವಹಾರ ಮಾಡುವ ಮುನ್ನ ಎಚ್ಚರಿಕೆಯಿಂದಿರಿ ಹಾಗೂ ಸತ್ಯಾಸತ್ಯತೆ ತಿಳಿದ ನಂತರವೇ ಹಣ ಹೂಡಿಕೆ ಮಾಡಿ.
7) ಸಾಮಾಜಿಕ ಜಾಲತಾಣದ ದುಷ್ಪರಿಣಾಮದಿಂದ ಎಷ್ಟೋ ಜನರು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ವರದಿಯಾಗಿರುತ್ತವೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ ಮತ್ತು ಸಾಮಾಜಿಕ ಜಾಲತಾಣ ಅಕೌಂಟ್ ಗಳಲ್ಲಿ ಸೆಕ್ಯುರಿಟಿ ಫೀಚರ್ ಗಳನ್ನು ಎನೇಬಲ್ ಮಾಡಿಕೊಳ್ಳಿ, ನಿಮ್ಮ ಪ್ರೊಫೈಲ್ ವಿವರಗಳನ್ನು ಬ್ಲಾಕ್ ಮಾಡಿ ಮತ್ತು ಡೇಟಾ ಆಕ್ಸೆಸ್ ಗೆ ಎಲ್ಲರಿಗೂ ಅನುಮತಿ ಕೊಡಬೇಡಿ.
8) ಶ್ರಧ್ದೆ ಮತ್ತು ಪರಿಶ್ರಮ ಎಂಬುದು ಒಬ್ಬ ವ್ಯಕ್ತಿಯನ್ನು ಸಮಾಜದಲ್ಲಿ ಗಣ್ಯವ್ಯಕ್ತಿಯನ್ನಾಗಿ ಮಾಡುತ್ತವೆ. ಎಲ್ಲರೂ ಶ್ರದ್ಧೆಯಿಂದ ವಿಧ್ಯಾಭ್ಯಾಸ ಮಾಡಿ ಮತ್ತು ನೀವು ಸಾಧಿಸ ಬೇಕಾದ ಗುರಿಯ ಬಗ್ಗೆ ಗಮನ ಇರಲಿ. ಕೆಲವು ವರ್ಷಗಳು ನೀವು ಶ್ರಮವಹಿಸಿ ವಿಧ್ಯಾಭ್ಯಾಸ ಮಾಡಿದ್ದೇ ಆದಲ್ಲಿ, ಇದು ನಿಮ್ಮ ಜೀವನದುದ್ದಕ್ಕೂ ನಿಮ್ಮನ್ನು ಕಾಪಾಡುತ್ತದೆ. ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಎ ಎಲ್ ಮಂಜುನಾಥ್, ಕೆ ಎ ಎಸ್, ಕುಲಸಚಿವರು, ಆಡಳಿತ ವಿಭಾಗ, ಕುವೆಂಪು ವಿಶ್ವ ವಿಧ್ಯಾಲಯ, ಶಿವಮೊಗ್ಗ ಶ್ರೀ ನಾಗರಾಜ್, ಡಿವೈಎಸ್ಪಿ ಭದ್ರಾವತಿ ಉಪ ವಿಭಾಗ, ಶ್ರಿ ಜಗಧೀಶ್ ಹಂಚಿನಾಳ್, ಪಿಐ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.