ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ “ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಂಭ್ರಮ ಹಾಗೂ ಸಮಾರೋಪ ಸಮಾರಂಭ” ದ ಮುಖ್ಯ ಅತಿಥಿಯಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಗವಹಿಸಿದ್ದರು.
ಧರ್ಮಸ್ಥಳದ ಧರ್ಮಾಧಿಕಾರಿಯಾದ ಪೂಜ್ಯ ಶ್ರೀ ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ನವೀಕೃತ ಗ್ರಂಥಾಲಯ ಹಾಗೂ ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಸಭೀಕರನ್ನು ಉದ್ದೇಶಿಸಿ ಮಾತನಾಡಿದರು.
ಶತಮಾನೋತ್ಸವ ಸಂಭ್ರಮದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಮಾರಂಭದಲ್ಲಿ ನಾವೆಲ್ಲ ಸೇರಿರುವುದು ಅತ್ಯಂತ ಹೆಮ್ಮೆ ಹಾಗೂ ಐತಿಹಾಸಿಕ ಕ್ಷಣವಾಗಿದ್ದು ಇದು ನನ್ನ ಸೌಭಾಗ್ಯ ಎಂದರು.
ಶತಮಾನೋತ್ಸವ ಸಂಭ್ರಮ ಎಂದರೆ ಕೇವಲ ನೂರು ವರ್ಷಗಳ ಸಂಭ್ರಮವಲ್ಲ. ಇದು ನೂರು ವರ್ಷಗಳ ಶ್ರಮ, ಸೇವೆ, ಮೌಲ್ಯಗಳು ಮತ್ತು ಅನೇಕ ತಲೆಮಾರಿನ ಬದುಕನ್ನು ರೂಪಿಸಿದ ಮಹತ್ವದ ಪಯಣವಾಗಿದೆ. ಈ ಶಾಲೆ ಶಿಕ್ಷಣದ ಜೊತೆಗೆ ಸಂಸ್ಕಾರ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೆಳೆಸಿದ ಪವಿತ್ರ ಕೇಂದ್ರವಾಗಿದೆ.
ಆರ್ಥಿಕ ಅಡೆತಡೆಗಳ ನಡುವೆಯೂ ಶಿಕ್ಷಣದಿಂದ ಬದುಕನ್ನು ರೂಪಿಸಿಕೊಳ್ಳಲು ಈ ಸಂಸ್ಥೆಯು ಗ್ರಾಮೀಣ ಭಾಗದ ಅನೇಕ ಮಕ್ಕಳಿಗೆ ಬೆಳಕಿನ ದಾರಿಯನ್ನು ತೋರಿಸಿದೆ ಎಂದರು.
ಈ ಮಹಾನ್ ಕಾರ್ಯದ ಹಿಂದೆ ನಿಂತಿರುವ ಧರ್ಮಸ್ಥಳದ ಆಡಳಿತ ಮಂಡಳಿ, ಶಾಲೆಯ ಹಳೆಯ ಹಾಗೂ ಪ್ರಸ್ತುತ ಶಿಕ್ಷಕರು, ಸಿಬ್ಬಂದಿ ಮತ್ತು ಪೋಷಕರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಮಕ್ಕಳ ಭವಿಷ್ಯಕ್ಕಾಗಿ ಅರ್ಪಿಸಿದ ಶಿಕ್ಷಕರ ಸೇವೆಯನ್ನು ನಾವು ಎಂದಿಗೂ ಮರೆಯಲಾರೆವು. ಅವರ ಈ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ.
ಇಂದು ಇಲ್ಲಿ ವಿದ್ಯಾಭ್ಯಾಸ ಮಾಡಿರುವ ಅನೇಕ ಹಳೆಯ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿರುವುದು ಈ ಶಾಲೆಯ ಗುಣಮಟ್ಟದ ಸಾಕ್ಷಿಯಾಗಿದೆ. ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.
ಶತಮಾನೋತ್ಸವದ ಈ ಸಮಾರೋಪ ಸಂದರ್ಭದಲ್ಲಿ, ಮುಂದಿನ ದಿನಗಳಲ್ಲಿ ಈ ಶಾಲೆ ಇನ್ನಷ್ಟು ಪ್ರಗತಿ ಸಾಧಿಸಿ, ಹೊಸ ತಂತ್ರಜ್ಞಾನ, ನವೀನ ಶಿಕ್ಷಣ ಪದ್ಧತಿಗಳೊಂದಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂಬುದು ನಮ್ಮೆಲ್ಲರ ಆಶಯ. ಈ ಮಹತ್ವದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ, ಈ ಶಾಲೆಯು ಇನ್ನೂ ಅನೇಕ ಶತಮಾನಗಳ ಕಾಲ ಜ್ಞಾನ ದೀಪವಾಗಿ ಬೆಳಗಲಿ ಎಂದು ಹೇಳಿದರು.
ಈ ಸಮಾರಂಭದಲ್ಲಿ ಸ್ಥಳೀಯ ಶಾಸಕರಾದ ಶ್ರೀ ಹರೀಶ್ ಶೆಟ್ಟಿ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ಎಲ್ ಭೋಜೇಗೌಡ, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಪೂಜಾರಿ, ಶ್ರೀ ಹರ್ಷೇಂದ್ರ ಜೈನ್ ಸೇರಿದಂತೆ ಅನೇಕ ಗಣ್ಯರು, ಮುಖಂಡರು ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಹಾಜರಿದ್ದರು.