ಪ್ರತಿವರ್ಷ ಆಗಸ್ಟ್ 26 ರಂದು ವಿಶ್ವದಾದ್ಯಂತ ಮಹಿಳಾ ಸಮಾನತೆ ದಿನವನ್ನಾಗಿ ಆಚರಿಸಲಾಗುತ್ತಿದೆ.ಲಿಂಗತಾರತಮ್ಯವಿಲ್ಲದೆ ಎಲ್ಲರಿಗೂ ಚುನಾವಣೆಯಲ್ಲಿ ಸಮಾನ ಅಧಿಕಾರ ನೀಡುವ ಅಮೇರಿಕದ 19 ನೆ ಕಾಯ್ದೆ ತಿದ್ದುಪಡಿಯ ದ್ಯೋತಕವಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ.ನಾಗರಿಕ ಸಮಾಜ ಸಂಘಟನೆಗಳಿಂದ ಸತತವಾಗಿ 72 ವರ್ಷಗಳ ಕಾಲ ನಡೆದ ಹೋರಾಟದ ಫಲವಾಗಿ 1920 ರಲ್ಲಿ ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ದೊರಕಿತು.ಮಹಿಳೆಯರು ನೋಡಲು ಸುಂದರವಾಗಿರುತ್ತಾರಷ್ಟೇ,ಆದರೆ ಅವರು ಯಾವುದೇ ಗಂಭೀರ ಕೆಲಸಗಳನ್ನು ಮಾಡಲಾರರು ಎಂಬ ಧೋರಣೆ ಮೊದಲು ಅಮೆರಿಕದಲ್ಲಿ ಮನೆ ಮಾಡಿತ್ತು.ಕೊನೆಗೂ ಇಂಥದೊಂದು ತಾರತಮ್ಯವನ್ನು ಹೋಗಲಾಡಿಸಿ ಮಹಿಳೆಯರಿಗೂ ಪುರುಷರಷ್ಟೇ ಸಮಾನ ಹಕ್ಕುಗಳು ಸಿಗಲಾರಂಭಿಸಿದವು. ಈ ಭೂಮಿಯ ಮೇಲೆ ಹುಟ್ಟುವ ಪ್ರತಿಯೊಂದು ಮಗು ತನ್ನ ಸಾಮರ್ಥ್ಯ ಹಾಗೂ ಪ್ರತಿಭೆಗಳಿಗೆ ತಕ್ಕಂತೆ ಮುಕ್ತವಾಗಿ ಜೀವನ ರೂಪಿಸಿಕೊಳ್ಳುವುದು ಆ ಮಗುವಿನ ಹಕ್ಕಾಗಿರುತ್ತದೆ.ಇದು ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ಅನ್ವಯವಾಗುತ್ತದೆ.ಆದರೆ ಭಾರತದಲ್ಲಿ ಇಂದಿಗೂ ಲಿಂಗ ತಾರತಮ್ಯದ ಅನಿಷ್ಟ ಪದ್ದತಿ ಮುಂದುವರೆದುಕೊಂಡು ಬಂದಿರುವುದು ವಿಷಾದನೀಯ.ಶತಮಾನಗಳಿಂದಲೂ ಕತ್ತಲ ಕೂಪದೊಳಗಿದ್ದ ಸ್ತ್ರೀಯರಿಗೆ ಸ್ವಾತಂತ್ರ್ಯವಿರಲಿಲ್ಲ.” ನಾ ಸ್ತ್ರೀ ಸ್ವಾತಂತ್ರ್ಯಂ ಅಹರ್ತಿ” ಎಂಬ ನಿಲುವಿಗೆ ಜೋತು ಬಿದ್ದ ಕಾಲಘಟ್ಟದಲ್ಲಿ, 12ನೇ ಶತಮಾನದಲ್ಲಿ ಬಸವಣ್ಣನವರು ತಮ್ಮ ವಿಚಾರ ಕ್ರಾಂತಿಯಿಂದ ಸಮಾಜದ ಅಂಕು ಡೊಂಕುಗಳನ್ನು ನೇರವಾಗಿ ಹೇಳಿದ್ದಾರೆ.ಮೊಟ್ಟ ಮೊದಲು ಸ್ತ್ರೀ ಸ್ವಾತಂತ್ರ್ಯ, ಸಮಾನತೆಯ ಬಗ್ಗೆ ಎತ್ತಿಹಿಡಿದವರು ಬಸವಣ್ಣನವರು.ತಮ್ಮ ಅನುಭವ ಮಂಟಪದಲ್ಲಿ ವಚನಗಾರ್ತಿಯರಿಗೆ ಅವಕಾಶ ಕಲ್ಪಿಸಿ ಸ್ತ್ರೀ ಸ್ವಾತಂತ್ರ್ಯ, ಸಮಾನತೆಯನ್ನು ಎತ್ತಿಹಿಡಿದರು.
ಪ್ರಸ್ತುತ ನಮ್ಮ ಭಾರತದಲ್ಲಿ ಮಹಿಳೆಯರು ಶೈಕ್ಷಣಿಕ, ಆರೋಗ್ಯ,ಸಾಮಾಜಿಕ,ಆರ್ಥಿಕ,ವಿಜ್ಞಾನ,ತಂತ್ರಜ್ಞಾನ,ಕ್ರೀಡೆ, ರಾಜಕೀಯ,ಸೇವೆ,ಬಾಹ್ಯಾಕಾಶ,ರಕ್ಷಣಾ, ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ .ಆದರೂ ಶೇಕಡಾ 50 ರಷ್ಟು ಈ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ, ಸಮಾನತೆಯನ್ನು ಸಾಧಿಸಲಾಗಲಿಲ್ಲ.ಪೂಜನೀಯ ಸ್ಥಾನವನ್ನು ಮಹಿಳೆಯರಿಗೆ ಅನಾದಿ ಕಾಲದಿಂದಲೂ ನೀಡಿದ್ದರೂ, ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಳನ್ನು ತಡೆಯಲಾಗುತ್ತಿಲ್ಲ.ಇಂದಿಗೂ ಹೆಣ್ಣು ಪುರುಷ ಪ್ರಧಾನ ವ್ಯವಸ್ಥೆಯಲ್ಲಿಯೇ ಸಾಗುತ್ತಿದ್ದಾಳೆ.ಹಿಂದಿನ ಕಾಲಘಟ್ಟಕ್ಕಿಂತಲೂ ಪ್ರಸ್ತುತ ಮಹಿಳೆಯರ ಸ್ಥಿತಿ ಗತಿಗಳು ಸುಧಾರಣೆಗೊಂಡಿವೆಯಾದರೂ, ಬಹಳಷ್ಟು ಮಹಿಳೆಯರು ಸ್ವಾತಂತ್ರ್ಯ, ಸಮಾನತೆಯ ಹಕ್ಕಿನಿಂದ ವಂಚಿತರಾಗಿದ್ದಾರೆ.
ಬಹುತೇಕ ಹಳ್ಳಿಗಳಿಂದ ಕೂಡಿರುವ ನಮ್ಮ ದೇಶದಲ್ಲಿ, ಹಳ್ಳಿಯಲ್ಲಿರುವ ಮಹಿಳೆಯರು ಸಮಾನತೆ ,ಸ್ವಾತಂತ್ರ್ಯ ದಿಂದ ವಂಚಿತರಾಗಿದ್ದಾರೆ.ನಾಲ್ಕು ಗೋಡೆಗಳ ಮಧ್ಯೆ ತಮ್ಮ ಜೀವನ ಕಟ್ಟಿಕೊಂಡವರು ಇದ್ದಾರೆ.ತಮಗೆ ಪ್ರತಿಭೆ, ಸಾಮರ್ಥ್ಯಗಳಿದ್ದರೂ ಕುಟುಂಬಕ್ಕೋಸ್ಕರ ತ್ಯಾಗ ಮಾಡಿಕೊಂಡು ಜೀವನ ಸಾಗಿಸುತ್ತಿರುವವರು ನಮ್ಮ ದೇಶದಲ್ಲಿ ಇದ್ದಾರೆ. ಪ್ರತಿಯೊಬ್ಬರಿಗೂ ಮತದಾನದ ಹಕ್ಕಿದೆ, ಆದರೆ ಬಹುತೇಕ ಮಹಿಳೆಯರು ಇಂದಿಗೂ ಆ ಹಕ್ಕನ್ನು ಸ್ವತಂತ್ರವಾಗಿ ಬಳಸುತ್ತಿಲ್ಲ.ಇಲ್ಲಿ ಪತಿಯ ಅಥವಾ ತಂದೆಯ ಒಪ್ಪಿಗೆಯಂತೆ ಮತ ಚಲಾವಣೆಯಾಗುತ್ತದೆ.ನಮ್ಮ ದೇಶದಲ್ಲಿ ಶೇಕಡಾ 33 ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಿದ್ದರೂ, ಅದನ್ನು ಪೂರ್ಣ ಪ್ರಮಾಣದಲ್ಲಿ ಸಾಧಿಸಲಾಗುತ್ತಿಲ್ಲ.ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಗೆದ್ದು ಸ್ಥಾನ ಪಡೆದಿದ್ದರೂ.,ಇಲ್ಲಿ ಬೆನ್ನ ಹಿಂದೆ ಪುರುಷರ ಹಸ್ತಕ್ಷೇಪ, ಅಧಿಕಾರ ಚಲಾವಣೆ ಇದ್ದೆ ಇರುತ್ತದೆ.ಉದ್ಯೋಗಸ್ಥ ಮಹಿಳೆಯರು ಹಲವು ಒತ್ತಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ನಮ್ಮ ದೇಶದಲ್ಲಿ ಮಹಿಳಾ ಸಮಾನತೆಯನ್ನು ಸಾಧಿಸಬೇಕಾದರೆ ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು, ಆರ್ಥಿಕ ಸ್ವಾವಲಂಬನೆ ಹೊಂದಬೇಕು,ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಬೇಕು ಆಗ ಮಾತ್ರ ಮಹಿಳಾ ಸಮಾನತೆಯನ್ನು ಸಾಧಿಸಲು ಸಾಧ್ಯ.ಇಂದು ಉದ್ಯೋಗಸ್ಥ ಮಹಿಳೆಯರಾಗಿದ್ದರೂ ಹಲವು ನಿರ್ಬಂಧಕ್ಕೊಳ್ಳಪಡುತ್ತಿದ್ದಾರೆ.ಮಹಿಳೆಯರನ್ನು ಎರಡನೇ ದರ್ಜೆಯ ನಾಗರೀಕಳಾಗಿ ನೋಡುವ ದೃಷ್ಟಿಕೋನ ಬದಲಾಗಬೇಕಿದೆ.ಆದರಿಂದ ಹೆಣ್ಣುಮಕ್ಕಳು ವಿದ್ಯಾವಂತರಾಗಿ, ಆರ್ಥಿಕ ಸಬಲತೆ ಸಾಧಿಸಬೇಕು.ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾ ಮುನ್ನಡೆಯಬೇಕಿದೆ.ಆಗಲಾದರೂ ಮಹಿಳಾ ಸಮಾನತೆಯನ್ನು ಸಾಧಿಸಬಹುದು.ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬಹುದು.ಸಾಧಿಸಿದವರು ಬೆರಳೆಣಿಕೆಯ ಮಹಿಳೆಯರಿದ್ದಾರಷ್ಟೇ… ಆದರೆ ಸಮಾನತೆ ಸ್ವಾತಂತ್ರ್ಯ ದಿಂದ ವಂಚಿತರು ಅನೇಕ ಹೆಣ್ಣುಮಕ್ಕಳಿದ್ದಾರೆ.ಸಮಾನತೆಯ ವಂಚಿತ ಹೆಣ್ಣು ಮಕ್ಕಳಿಗೆ ಸ್ಪೂರ್ತಿ ಯಾಗಿ, ಅವರು ಸ್ವಾವಲಂಬನೆ ಬದುಕನ್ನು ಕಟ್ಟಿಕೊಳ್ಳಲು ಸಹಕರಿಸೋಣ.ನಮಗೆ ಸಿಕ್ಕ ಸ್ವಾತಂತ್ರ್ಯ ಸ್ವೇಚ್ಚಾಚಾರವಾಗಿ ಬಳಸಿಕೊಳ್ಳದೆ, ಉತ್ತಮ ಸಮಾಜದ ನಿರ್ಮಾಣದಲ್ಲಿ ಕೈಜೋಡಿಸೋಣ.ಹೆಣ್ಣು ಅಬಲೆಯಲ್ಲ, ಸಬಲೆ. ಅವಕಾಶ ಕಲ್ಪಿಸಿ,ಹುರಿದುಂಬಿಸಿದರೆ ಏನ್ನನ್ನಾ ದರೂ ಸಾಧಿಸಬಲ್ಲಳು ಎಂಬುದಕ್ಕೆ ನಮ್ಮ ಮುಂದೆ ಹಲವು ಸಾಧಕ ಮಹಿಳೆಯರ ನಿದರ್ಶನವಿದೆ. ನಮ್ಮ ನಾಗರಿಕ ಸಮಾಜದ ಪ್ರತಿಯೊಬ್ಬರೂ ಹೆಣ್ಣನ್ನು ಮಾತೃ, ಸಹೋದರಿಯ ಸ್ಥಾನದಲ್ಲಿ ಗೌರವಿಸುವಂತಾಗಲಿ.ಪುರುಷರಂತೆ ಮಹಿಳೆಯರಿಗೂ ಸರ್ವಸಮಾನತೆ ದೊರೆತಾಗ ಮಾತ್ರ ಒಂದು ಅದ್ಭುತ, ಸದೃಢ ಸಮಾಜ, ದೇಶ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.

ಅನಿತಕೃಷ್ಣ
ಶಿಕ್ಷಕಿ. ತೀರ್ಥಹಳ್ಳಿ

CCTV SALES & SERVICE

9880074684


 ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153