ಒಮ್ಮೆ ಕೈಲಾಸದಲ್ಲಿ ಪಾರ್ವತಿ ಒಂಟಿತನವನ್ನು ಅನುಭವಿಸುತ್ತಿದ್ದಳು. ತನ್ನ ಒಂಟಿತನವನ್ನು ಕಳೆಯಲು ಮಣ್ಣಿನಿಂದ ಚಿಕ್ಕ ಬಾಲಕನ ಪ್ರತಿಮೆಯೊಂದನ್ನು ಮಾಡಿ ಅದಕ್ಕೆ ಜೀವ ನೀಡಿದಳು. ಈ ಬಾಲಕನಿಗೆ ಗಣೇಶ ಎಂದು ನಾಮಕರಣ ಮಾಡಿ ತಾನು ಸ್ನಾನಕ್ಕೆ ಹೋದಾಗ ತನ್ನ ಸ್ನಾನಗೃಹದ ಬಾಗಿಲನ್ನು ಕಾವಲು ಕಾಯುವಂತೆ ಆಜ್ಞಾಪಿಸಿ ಒಳನಡೆದಳು. ಈ ಸಮಯದಲ್ಲಿ ಕೈಲಾಸಕ್ಕೆ ಆಗಮಿಸಿದ ಶಿವ ಒಳಗಡಿಯಿಡಲು ಯತ್ನಿಸಿದಾಗ ಬಾಲಕ ಗಣೇಶ ಶಿವನನ್ನು ತಡೆಯುತ್ತಾನೆ. ತನ್ನ ಮಗನೇ ಎಂದು ಗೊತ್ತಿಲ್ಲದೆ ಕೋಪಾವಿಷ್ಠನಾದ ಶಿವ ಬಾಲಕನ ರುಂಡವನ್ನು ಸಂಹರಿಸುತ್ತಾನೆ. ಬಳಿಕ ಸ್ನಾನ ಮುಗಿಸಿ ಹೊರಬಂದ ಪಾರ್ವತಿದೇವಿ ತನ್ನ ಮಗನ ಶವವನ್ನು ಕಂಡು ಅತ್ಯಂತ ದುಃಖಿತಳಾಗುತ್ತಾಳೆ. ದುಗುಡ ಮತೋ ಕೋಪಾವೇಶಗಳ ಭರದಲ್ಲಿ ಗಣೇಶನ ರುಂಡ ಎಲ್ಲಿಯೋ ಕಳೆದುಹೋಗುತ್ತದೆ. ಪಾರ್ವತಿಯನ್ನು ಶಾಂತಗೊಳಿಸಲು ಶಿವ ಬಾಲಕನಿಗೆ ಜೀವನೀಡುವ ವಾಗ್ದಾನ ನೀಡುತ್ತಾನೆ. ಆದರೆ ಕಳೆದ ರುಂಡ ಸಿಗದೇ ಇರುವ ಕಾರಣ ತನ್ನ ಬೆಂಬಲಿಗರಲ್ಲಿ ಕಾಡಿನ ಕಡೆಯಿಂದ ಯಾವ ಪ್ರಾಣಿ ಮೊದಲು ಬಂದಿತೋ ಅದನ್ನೇ ಗಣೇಶನಿಗೆ ಇರಿಸುವುದಾಗಿ ತಿಳಿಸುತ್ತಾನೆ. ಬಳಿಕ ಬಿಳಿಯ ಆನೆಯೊಂದು ಪ್ರಥಮವಾಗಿ ಪ್ರತ್ಯಕ್ಷವಾಗುತ್ತದೆ. ಅಂತೆಯೇ ಆನೆಯ ತಲೆಯನ್ನು ಬಾಲಕನ ಮುಂಡಕ್ಕೆ ಜೋಡಿಸಿ ಜೀವ ನೀಡಲಾಗುತ್ತದೆ. ಅಂತೆಯೇ ಗಣೇಶನ ಮುಂಡ ಮಾನವರಂತಿದ್ದರು ರುಂಡ ಮಾತ್ರ ಆನೆಯದ್ದಾದುದರಿಂದಲೇ ಗಜಮುಖನೆಂಬ ಹೆಸರು ಬಂದಿದೆ.

ಪೂಜಾ.ಕೆ
ಶಿವಮೊಗ್ಗ