ಶಿವಮೊಗ್ಗ ನ್ಯೂಸ್…
ಆಸೆ, ದ್ವೇಷ ಬಿಟ್ಟರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಖ್ಯಾತ ನಾಣ್ಯ ಸಂಗ್ರಾಹಕ ಹೆಚ್. ಖಂಡೋಬರಾವ್ ಹೇಳಿದರು.ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಖಂಡೋಬರಾವ್ ಅಭಿನಂದನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಮತ್ತು ಅಮೂಲ್ಯ ಸಿರಿ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಮನತುಂಬಿದ ಅಭಿನಂದನೆ ಸಲ್ಲಿಸಿದ್ದಕ್ಕೆ ನನ್ನ ಕೃತಜ್ಞತೆಗಳು.
ಮನುಷ್ಯ ಸಾಯುವ ಮೊದಲು ಏನಾದರೂ ಸಾಧನೆ ಮಾಡಲೇಬೇಕು. ಸಾಧನೆ ಹೇಗೆ ಮಾಡಲು ಸಾಧ್ಯ ಎಂದರೆ ಮೊದಲು ಆಸೆ ಮತ್ತು ದ್ವೇಷವನ್ನು ಬಿಡಬೇಕು. ಬಹುಶಃ ಆಸೆ ಮತ್ತು ದ್ವೇಷ ಬಿಟ್ಟಿದ್ದರೆ ರಾಮಾಯಣ ಮತ್ತು ಮಹಾಭಾರತದ ಕತೆಗಳು ನಡೆಯುತ್ತಲೇ ಇರಲಿಲ್ಲ. ಆಸೆ ಬದಲು ಜ್ಞಾನ, ದ್ವೇಷದ ಬದಲು ಸಾಧನೆ ಮಾಡಬೇಕು ಎಂದರು.ನನ್ನ ಬಗ್ಗೆ ಅಭಿಮಾನಿಗಳು, ಗೆಳೆಯರು, ತುಂಬು ಹೃದಯದಿಂದ ಮಾತನಾಡಿದ್ದಾರೆ. ನನಗೊಂದು ಉನ್ನತ ಸ್ಥಾನ ಕೊಟ್ಟಿದ್ದಾರೆ. ಅಭಿನಂದನಾ ಸ್ಥಾನ ಕೊಟ್ಟಿದ್ದಾರೆ. ಅಭಿನಂದನಾ ಸಲ್ಲಿಸಿದ್ದಾರೆ. ನಮ್ಮ ಪರಿವಾರದವರು ಮತ್ತು ನನ್ನ ಪತ್ನಿಯ ಕಡೆಯವರು ವಿಶೇಷವಾಗಿ ಅಭಿನಂದಿಸಿದ್ದು ನನಗೆ ಹೃದಯ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ ಎಂದರು.ಆದರ್ಶದ ಬದುಕು ನಮ್ಮದಾಗಬೇಕು. ಮನುಷ್ಯ ಒಳ್ಳೆಯ ಗುಣಗಳನ್ನು ಮತ್ತು ನಿರಂತರ ಚಟುವಟಿಕೆಯನ್ನು ಬೆಲೆಸಿಕೊಂಡರೆ ಉತ್ತಮ ಜೀವನ ಮತ್ತು ಸಂಸ್ಕಾರವನ್ನು ಪಡೆಯಬಹುದಾಗಿದೆ. ನನ್ನೆಲ್ಲಾ ಸಾಧನೆಗೆ ಗೆಳೆಯರ ಜೊತೆಗೆ ನನ್ನ ಪತ್ನಿಯೂ ಮುಖ್ಯ ಎಂದ ಅವರು, ಬಯಲು ಸೀಮೆಯ ಹುಡುಗ ನಾನು ಮಲೆನಾಡ ಹುಡುಗಿ ನನ್ನ ಪತ್ನಿ. ನಾನು ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದೆ. ಅವಳು ಹೋದ ಮೇಲೆ ಅವಳಿಗಾಗಿಯೇ ಈ ಅಮೂಲ್ಯ ಶೋಧ ನಿರ್ಮಿಸಿದೆ ಎಂದು ಭಾವುಕರಾಗಿ ನುಡಿದರು.ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಕರೆ ನೀಡಿದ ಖಂಡೋಬರಾವ್, ಮನುಷ್ಯನ ಬದುಕು ತುಂಬಾ ಕ್ಷಣಿಕವಾದುದು.
ನಾವು ನಮ್ಮ ಬದುಕಿನಲ್ಲಿ ಅನೇಕ ತಪ್ಪು, ಒಪ್ಪುಗಳನ್ನು ಮಾಡುತ್ತೇವೆ. ಆದರೆ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸಂಕಲ್ಪ ಮಾಡಿಕೊಳ್ಳಬೇಕು. ಹಾಗಾಗಿ ಪ್ರತಿಯೊಬ್ಬರು ತಮ್ಮ ಅಮೂಲ್ಯವಾದ ಕಣ್ಣುಗಳನ್ನು ಹಾಗೂ ಇಡೀ ದೇಹವನ್ನೇ ದಾನ ಮಾಡಬೇಕು. ಸತ್ತ ಮೇಲೆ ಎಲ್ಲೋ ಬೂದಿಯಾಗುವ, ಮಣ್ಣಿನಲ್ಲಿ ಕೊಳೆತು ಹೋಗುವ ಈ ಮನುಷ್ಯನ ದೇಹ ಸತ್ತಮೇಲಾದರೂ ಪ್ರಯೋಜನಕ್ಕೆ ಬರಲಿ ಎಂದರು.ನನ್ನ ಪತ್ನಿ ಸಾಯುವ ಮೊದಲೇ ಅವಳ ಎರಡೂ ಕಣ್ಣುಗಳನ್ನು ನಾನು ದಾನ ಮಾಡಿದ್ದೆ. ಹಾಗೆಯೇ ಈಗ ನನ್ನ ದೇಹವನ್ನು ದಾನ ಮಾಡಿದ್ದೇನೆ ಎಂದ ಅವರು, ಪರಿಸರ ಪ್ರೇಮ, ಸ್ವಚ್ಛತೆಗೆ ಆದ್ಯತೆ ನೀಡಿ ಒಳ್ಳೆಯ ಬದುಕನ್ನು ಬಾಳಿ. ಸಂಸ್ಕೃತಿ ಮತ್ತು ಸನಾತನತೆಯನ್ನು ಉಳಿಸಿ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ, ಖಂಡೋಬರಾವ್ ಅಂತಹವರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯ. ಅವರ ವ್ಯಕ್ತಿತ್ವವೇ ಬಹುದೊಡ್ಡದು. ಅವರ ಸಾಧನೆ ಮತ್ತಷ್ಟು ದೊಡ್ಡದು. ಅವರ ಅಮೂಲ್ಯ ಶೋಧದ ನಿರ್ಮಾಣ ಬೆಲೆ ಕಟ್ಟಲು ಆಗುವುದಿಲ್ಲ. ಅವರು ಸಂಗ್ರಹಿಸಿದ ನಾಣ್ಯಗಳು ಪುಸ್ತಕಗಳು, ಹಳೆಯ ಕಾಲದ ಪರಿಕರಗಳು, ಎಲೆಕ್ಟ್ರಿಕ್ ವಸ್ತುಗಳು, ಆಟಿಕೆಗಳು, ಅಡುಗೆ ಮನೆ ವಸ್ತುಗಳು ಹೀಗೆ ಎಲ್ಲವೂ ಕೂಡ ಅಮೂಲ್ಯವಾದವೇ. ಅವರೊಬ್ಬ ಸಂಸ್ಕೃತಿಯ ಸಂತ. ಅಂತಹವರನ್ನು ಸನ್ಮಾನಿಸುವುದು ಮತ್ತು ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡುವುದು ಅತ್ಯಂತ ಸಾರ್ಥಕದ ಕ್ಷಣ ಎಂದ ಅವರು, ಅವರ ಅಮೂಲ್ಯಶೋಧದ ನಿರ್ವಹಣೆಯ ಬಗ್ಗೆ ಗಮನಹರಿಸಬೇಕಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕಿ ಕಿರಣ್ ಆರ್. ದೇಸಾಯಿ, ಸನ್ಮಾನಿಸುವುದು ನಮ್ಮ ಕರ್ತವ್ಯ. ಇದರಿಂದ ಸಾಧಕೆ ಸಾಧನೆಗಳು ಪ್ರಕಟಗೊಳ್ಳುತ್ತವೆ. ಖಂಡೋಬರಾವ್ ಕೇವಲ ಇತಿಹಾಸ ತಜ್ಞರಲ್ಲ, ನಾಣ್ಯ ಸಂಗ್ರಾಹಕರಲ್ಲ, ಕವಿಗಳಲ್ಲ. ಅವರೊಬ್ಬ ಮಾನವೀಯತೆಯುಳ್ಳವರು. ಪತ್ನಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಅದರ ಗುರುತಾಗಿಯೇ ಅವರ ಅಮೂಲ್ಯವಾದ ಸಿರಿ ಲಕ್ಕಿನಕೊಪ್ಪದಲ್ಲಿ ಅರಳಿ ನಿಂತಿದೆ. ಅವರ ಅನ್ಯೋನ್ಯ ಸಂಬಂಧವೇ ಒಂದು ದೊಡ್ಡ ಅಮೂಲ್ಯ ಶೋಧ. ಅದೊಂದು ಅವರ ಬದುಕಿನ ಯಶೋಗಾಥೆ. ಅವರ ಬದುಕು ಯಾವಾಗಲು ಕ್ರಿಯಾಶೀಲರಾಗೇ ಇರಲಿ ಎಂದರು.ಅಭಿನಂದನಾ ಗ್ರಂಥ ಕುರಿತು ಸಮಿತಿ ಸಂಚಾಲಕ ಎಂ. ಸಕಲೇಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಖಂಡೋಬರಾವ್ ಅವರನ್ನು ಸ್ನೇಹಿತರು, ನೆಂಟರು, ವಿವಿಧ ಸಂಘ, ಸಂಸ್ಥೆಗಳಿಂದ ಗೌರವಿಸಲಾಯಿತು.
ಬಾರ್ಕೂರು ಮಹಾಸಂಸ್ಥಾನದ ಡಾ. ವಿಶ್ವ ಸಂತೋಷಭಾರತಿ ಸ್ವಾಮೀಜಿ, ಇವತ್ತು ಇತಿಹಾಸ ಪುಟ ಸೇರುವಂತಹ ದಿನ. ಬಹಳಷ್ಟು ಜನ ಹುಟ್ಟಿ ಬೆಳೆದು ಕಳೆದು ಹೋಗುತ್ತಾರೆ. ಸಾವು ಬರುತ್ತದೆ. ಆದರೆ, ಸಾಧನೆ ಮಾಡಿ ಹೋಗಬೇಕು ಎಂಬುದು ಖಂಡೋಬರಾವ್ ಅಭಿಮತವಾಗಿದೆ. ಅದನ್ನು ಅವರು ತಮ್ಮ ಜೀವನದಲ್ಲಿ ಸಾಧಿಸಿ ತಮ್ಮ ಫಸಲು ಬರುವ ತೋಟವನ್ನೇ ತೆಗೆದು ಮ್ಯೂಸಿಯಂ ಮಾಡಿ ದೇಶದ ಮತ್ತು ರಾಜ್ಯದ ಆಸ್ತಿ ಮಾಡಿದ್ದಾರೆ. ಇತಿಹಾಸ ಕೃಷಿ ಮಾಡಿದ ಕೆಲವೇ ಜನರಲ್ಲಿ ಖಂಡೋಬರಾವ್ ಒಬ್ಬರಾಗಿದ್ದು, ಮುಂದಿನ ಪೀಳಿಗೆಗೆ ಇತಿಹಾಸದ ಅರಿವು ಮೂಡಿಸುವ ಉದಾರತೆಯನ್ನು ತೋರಿದ್ದಾರೆ ಎಂದರು. ಬೆಕ್ಕಿನ ಕಲ್ಮಠದ ಶ್ರೀಗಳಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನಿನ್ನೆ ಎಂಬುದು ಸತ್ತು ಹೋಗಿದೆ. ಇಂದು ಸಾಲ ಮಾಡಿಯಾದರೂ ತುಪ್ಪ ತಿಂದು ಹೋಗಿಬಿಡೋಣ ಎನ್ನುವ ಈ ಕಾಲಘಟ್ಟದಲ್ಲಿ ನಾವು ಏನು ಎಂದು ಮರೆತು ಗೊತ್ತು ಗುರಿ ಇಲ್ಲದೇ ಪಯಣ ಮಾಡುತ್ತಿರುವ ಈ ಸಂದರ್ಭದಲ್ಲಿ ಸಮಾಜಕ್ಕೆ ಆಸ್ತಿ ಎಂದರೆ ಯಾವುದು ಎಂದು ಅರಿವು ಮೂಡಿಸುವ ಖಂಡೋಬರಾವ್ ಅವರ ಕಾರ್ಯ ಅನುಕರಣೀಯ.
ಅನೇಕರು ವಿಭಿನ್ನ ರೀತಿಯಲ್ಲಿ ತಮ್ಮ ಆಸ್ತಿ ಎಂದು ಹೇಳುತ್ತಾರೆ. ಕೆಲವರಿಗೆ ಪುಸ್ತಕವೇ ಆಸ್ತಿ. ಕೆಲವರಿಗೆ ಹಿರಿಯರು ಬಿಟ್ಟು ಹೋದ ಹೊಲ ಗದ್ದೆಗಳೇ ಆಸ್ತಿ ಎನ್ನುತ್ತಾರೆ. ಆದರೆ, ನಿಜವಾದ ಆಸ್ತಿ ಯಾವುದೆಂದರೆ ಹಿಂದಿನವರು ಬದುಕಿದ ಘಟನೆಗಳು, ಅವರು ಬಾಳಿ ಬದುಕಿದ ಸಂದರ್ಭಗಳು, ಹಳೆಯ ವಸ್ತುಗಳು, ಇವೇ ಮುಂದಿನ ಪೀಳಿಗೆಗೆ ಆಸ್ತಿ ಎಂದು ಪರಿಗಣಿಸಿ ಅದನ್ನು ಸಂರಕ್ಷಿಸಿ ಪುರಾತನ ವಸ್ತುಗಳ ಸಂಗ್ರಹವೇ ಮುಂದಿನ ಪೀಳಿಗೆಗೆ ಆಸ್ತಿ ಎಂದು ತೋರಿಸಿಕೊಟ್ಟವರು ಖಂಡೋಬರಾವ್ ಅವರು. ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಹಾಗೆ, ಸರಳ, ಸಜ್ಜನಿಕೆ ಮತ್ತು ಸಹೃದಯತೆ ಇರುವ ಅವರು ತಮ್ಮ ವಿಭಿನ್ನ ಆಸಕ್ತಿ ಹಾಗೂ ಅಭಿರುಚಿಯಿಂದ ಮುಂದಿನ ಪೀಳಿಗೆಗೆ ದಾರಿ ದೀಪವಾಗಿದ್ದಾರೆ ಎಂದರು.ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಬಾಗಲಕೋಟೆಯ ಉದ್ಯಮಿ ಮಾರುತಿ ರಾವ್ ಶಿಂಧೆ ಮುಂತಾದವರು ಉಪಸ್ಥಿತರಿದ್ದರು. ಎಸ್.ಬಿ. ಅಶೋಕ್ ಕುಮಾರ್ ಸ್ವಾಗತಿಸಿದರು. ರಮೇಶ್ ಬಾಬು ಜಾಧವ್ ನಿರೂಪಿಸಿದರು.