ಶುದ್ಧ ನೀರು ಉಪಯೋಗಿಸಬೇಕಾದ್ದು ನಮ್ಮೆಲ್ಲರ ಹಕ್ಕು ,ಅದನ್ನ ಕೇಳಿ ಪಡೆಯೋದು ನಮ್ಮೆಲ್ಲರ ಹಕ್ಕು. ಹರಿಯುವ ನೀರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ ಅನ್ನುತ್ತಾರೆ.ಹಾಗೇಯೇ ಹರಿಯುವ ನೀರಿಗೆ ಕಸ ಹಾಕಲು ಅಥವಾ ಕಲುಷಿತಗೊಳಿಸಲು ಯಾರು ಅಪ್ಪಣೆ ಕೊಡೋದಿಲ್ಲ. ಸಾಮಾನ್ಯವಾಗಿ ಊರುಗಳು ಸೃಷ್ಟಿಯಾಗುವುದೇ ನದಿಗಳನ್ನು ಅವಲಂಬಿಸಿ.ಜನರೇ ನದಿಗಳ ಹತ್ತಿರ ಹೋಗಿದ್ದು ವಿನಹಃ ನದಿಗಳು ಜನರ ಬಳಿ ಹೋಗಿದ್ದಲ್ಲ.ಅಂದ ಮೇಲೆ ನಾವು ನದಿಯನ್ನು ಯಾವ ರೀತಿಯಲ್ಲಿ ಕಾಪಾಡಬೇಕೆಂದು ಯೋಚಿಸಬೇಕು.
ನದಿಯ ನೀರನ್ನು ನಾವು ಕುಡಿಯಲಿಕ್ಕೆ ಉಪಯೋಗಿಸುವ ನೀರು ಅಂತ ತಿಳಿದಿದ್ದರೂ ನದಿಗೆ ಕಸವನ್ನು ಸುರಿಯುತ್ತಾರೆ ಅಂದರೆ ನಮಗೆ ಎಷ್ಟು ಜವಾಬ್ದಾರಿ ಇದೆ ಅನ್ನುವ ಪ್ರಶ್ನೆ ಬರುತ್ತೆ.ಇದನ್ನು ನೋಡಿಯೂ ನೋಡದಂತೆ ಹೋಗುವ ನಾವೆಷ್ಟು ಜವಾಬ್ದಾರಯಿಂದ ವರ್ತಿಸ್ತೇವೆ.ನಾನು ನೋಡಿದಂತೆ ಕೆಲವರು ಪ್ಲಾಸ್ಟಿಕ್ ಚೀಲದಲ್ಲಿ ಕಸವನ್ನು ಗಂಟುಕಟ್ಟಿ ನದಿಗೆ ಎಸೆಯುವುದು ,ಮಾಂಸದ ತ್ಯಾಜ್ಯವನ್ನು ನದಿಗೆ ಎಸೆಯುವುದು , ಫ್ಯಾಕ್ಟರಿ ತ್ಯಾಜ್ಯವನ್ನು ನದಿಗೆ ಬಿಡುವುದು ಹಾಗೂ ಕೆಲವು ಊರಲ್ಲಿ ಕೊಳಚೆ ನೀರನ್ನು ನದಿಗೆ ಹರಿಯಲು ಬಿಡುವುದು ಇದು ಸರಿಯಾದ ಮಾರ್ಗವೇ? ಪೌರ ಕಾರ್ಮಿಕರು ಶಕ್ತಿ ಮೀರಿ ತಮ್ಮ ಕೆಲಸವನ್ನು ಊರಿನ ಸ್ವಚ್ಚತೆಗಾಗಿ ಮಾಡುತ್ತಾರೆ.
ಅವರು ಮಾಡುವ ಕೆಲಸಕ್ಕೆ ನಾವೆಲ್ಲಾ ಗೌರವಿಸಬೇಕು.ದಿವಸವೂ ಬೆಳಗ್ಗೆ ಒಣ ಕಸ ಹಸಿ ಕಸ ಬೇರ್ಪಡಿಸಿ ಕೊಡಿ ಎಂದು ಹಾಡಿನ ಮುಖಾಂತರ ಹೇಳುತ್ತಾರೆ. ಶೇಕಡಾ 90 ರಷ್ಟು ಜನ ಇದನ್ನು ಪಾಲಿಸಬಹುದು.ಆದರೆ ಈ ಶೇಕಡಾ 10 ರಷ್ಟು ಜನರಿಗೆ ದೇವರೇ ಬುದ್ದಿ ಹೇಳಬೇಕು.ಪೌರ ಕಾರ್ಮಿಕರು ಮನೆಯ ಮುಂದೆ ಕಸ ತುಂಬುವ ವಾಹನ ತಂದಾಗ ಕೆಲವರಿಗೆ ಕಸವನ್ನು ಬೇರ್ಪಡಿಸಿ ಕೊಡುವ ಆಸಕ್ತಿ ಇರೋಲ್ಲ. ಇದು ನಿರ್ಲಕ್ಷ್ಯವೋ? ನಿರಾಸಕ್ತಿಯೋ?ಅಸಡ್ಡೆಯೋ? ಅಥವಾ ಇವೆಲ್ಲಾ ಸರ್ಕಾರದ ಕೆಲಸ ಅನ್ನೋ ಕೆಟ್ಟ ಮನಸ್ಥಿತಿಯೋ? ಅನ್ನೋ ಪ್ರಶ್ನೆ ಬರುತ್ತೆ. ನದಿಗೆ ಕಸ ಹಾಕಿ ಅದೇ ನೀರನ್ನು ಕುಡಿಯಲು ಬಳಸುತ್ತೇವೆ ಅನ್ನೋ ಸಾಮಾನ್ಯವಾದ ಬುದ್ದಿ ಇಲ್ಲದಿರೋ ಜನ ನಮ್ಮ ಸುತ್ತ ಇದ್ದಾರೆ.
ಸುಂದರವಾದ ನದಿಯು ಊರಿನ ಪಕ್ಕದಲ್ಲಿ ಅಥವಾ ಮಧ್ಯದಲ್ಲಿ ಹರಿಯುತ್ತಿದ್ದರೆ ಅದರ ಸೌಂದರ್ಯವೇ ಬೇರೆ.ನದಿಯ ದಡದಲ್ಲಿ ಹಸರೀಕರಣ ಮಾಡಿದ್ರೆ ಸೌಂದರ್ಯ ಇನ್ನೂ ಹೆಚ್ಚುವುದರಲ್ಲಿ ಯಾವ ಅನುಮಾನವೂ ಇಲ್ಲ.ಅದನ್ನು ಬಿಟ್ಟು ನದಿಯ ಬದಿಯಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್ ಚೀಲಗಳು ,ಬಾಟಲಿಗಳು ಹಾಗೂ ಮೂಟೆಗಳನ್ನ ನೋಡ್ತೇವೆ.ಊರು ತುಂಬಾ ವಿದ್ಯಾವಂತರು ಹಾಗೂ ಬುದ್ಧಿವಂತರೂ ಇದ್ದರೂ ಪ್ರಯೋಜನಕ್ಕೆ ಬಾರದು ಅನಿಸುತ್ತೆ. ಕಸವನ್ನು ನದಿಗೆ ಚೆಲ್ಲಿದರೆ ದಂಡ ವಿಧಿಸಲಾಗುತ್ತದೆ ಅನ್ನೋ ಫಲಕ ಇದ್ದಾಗ್ಯೂ ಕಸ ಚೆಲ್ಲುವವರು ಇದ್ದಾರೆ.ಓದಲಿಕ್ಕೆ ಬರುವವರು ಹೀಗೆ ಮಾಡಿದ್ರೆ ಓದಲಿಕ್ಕೆ ಬರದವರ ಗತಿ ಏನು? ಇಂತಹ ಪ್ರಕರಣ ಕಂಡುಬಂದರೆ ತಕ್ಷಣ ಅಲ್ಲೇ ಪ್ರತಿರೋಧ ಮಾಡಬೇಕು.
ಇಲ್ಲದಿದ್ದರೆ ಕಸವೀರರ ಸಂಖ್ಯೆ ಹೆಚ್ಚಾಗುತ್ತೆ. ಸಿ ಸಿ ಕ್ಯಾಮರಾದಲ್ಲಿ ಆರೋಪಿಗಳನ್ನ ಗುರುತಿಸಿ ಒಮ್ಮೆ ದಂಡ ಹಾಕಿದ್ರೆ ಸಾಕು ಮತ್ತೆ ಜೀವನದಲ್ಲಿ ನದಿಗೆ ಕಸ ಹಾಕೋಲ್ಲ ಅನಿಸುತ್ತೆ.
ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳು ಬಂದಾಗ ಯಾರನ್ನು ದೂಷಿಸುವುದು ಅನ್ನೋದು ಗೊತ್ತಾಗದೆ ವೈದ್ಯರ ಮೇಲೆ ಸಾಮಾನ್ಯವಾಗಿ ಬಾಣ ಬಿರುಸುಗಳು ಬರೋದು ಸಹಜ.ರೋಗಿಗಳು ವಾಂತಿ ಬೇದಿ ಪ್ರಕರಣಗಳಲ್ಲಿ ಮಾನಸಿಕವಾಗಿ , ದೈಹಿಕವಾಗಿ ಆರ್ಥಿಕವಾಗಿಯೂ ಬಳಲುತ್ತಾರೆ . ಇಂಥಹ ಪ್ರಕರಣವನ್ನು ಸಾರ್ವಜನಿಕರು ಸಹಕರಿಸಿದಲ್ಲಿ ಮಾತ್ರ ತಡೆಯಬಹುದು.
ಇತ್ತೀಚಿಗೆ ಬಯಲು ಮಲವಿಸರ್ಜನೆ ತೀರಾ ಕಡಿಮೆ ಆಗಿದೆ.ಇದರಿಂದ ನೀರು ಕಲುಷಿತಗೊಳ್ಳೋದು ಕಡಿಮೆ ಆಗಿದೆ .ಆದರೆ ಶೌಚಾಲಯದ ಗುಂಡಿ ಬಾವಿಯ ಅಥವಾ ಬೋರ್ ವೆಲ್ ಹತ್ತಿರ ಇರಕೂಡದು ಕನಿಷ್ಟ 50 ಅಡಿಯಾದರೂ ದೂರ ಇರಬೇಕು.ಮನೆಯಲ್ಲಿ ಫಿಲ್ಟರ್ ಇಲ್ಲದಿದ್ದರೆ ಕಾಯಿಸಿ ಆರಿಸಿದ ನೀರು ಉಪಯೋಗಿಸುವುದು ಒಳ್ಳೆಯದು. ನೀರನ್ನು ಯಾವಾಗಲೂ ಮುಚ್ಚಿಡಲೇ ಬೇಕು ,ಇದರಿಂದ ಬೇರೆ ಕಾಯಿಲೆಯ ಜೊತೆ (ಇಲಿಯ ಮೂತ್ರ ನೀರಿನಲ್ಲಿ ಬೀಳುವವದರಿಂದ) ಇಲಿ ಜ್ವರ ಕೂಡ ತಡೆಯಬಹುದು. ಲೋಟವನ್ನು ನೀರಿನಲ್ಲಿ ಅದ್ದಿ ನೀರು ತೆಗೆಯುವ ಅಬ್ಯಾಸ ಆರೋಗ್ಯಕರವಾದುದಲ್ಲ.ನೀರನ್ನು ಶುದ್ದೀಕರಣ ಮಾಡಿ ಕೊಡುವುದು ಸರ್ಕಾರ ಮಾಡುತ್ತಾ ಬಂದಿದೆ.ಅದರ ಸದ್ಬಳಕೆ ನಮ್ಮ ಕೈಯಲ್ಲಿ ಇದೆ.
ಸಾರ್ವಜನಿಕ ಸ್ಥಳಗಳಲ್ಲಿ ,ಹೊಟೆಲ್ ಹಾಗೂ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಿದಾಗ ಶುದ್ದವಾದ ನೀರು ಬಹಳ ಮುಖ್ಯವಾದದ್ದು.ಇಲ್ಲವಾದಲ್ಲಿ ಸಾಮೂಹಿಕ ವಾಂತಿ ಬೇದಿ ಪ್ರಕರಣಗಳನ್ನ ಅನುಭವಿಸಬೇಕಾಗುತ್ತೆ. ಹೋಟೆಲ್ಗಳಲ್ಲಿ ಸಾಮಾನ್ಯವಾಗಿ ಬಿಸಿನೀರಿನ ವ್ಯವಸ್ಥೆ ಇರುತ್ತೆ ಇಲ್ಲದಿದ್ದರೆ ಕೇಳಿ ಪಡೆಯಬೇಕು. ಕೆಲವೊಂದು ಹೊಟೆಲ್ ನಲ್ಲಿ ಲೋಟವನ್ನು ನೀರಿನಲ್ಲಿ ಮುಳುಗಿಸಿ ನೀರು ಕೊಡುವ ವ್ಯವಸ್ಥೆ ಇರುತ್ತೆ,ಹಾಗಿದ್ರೆ ತಕ್ಷಣ ಪ್ರತಿರೋಧ ಮಾಡಬೇಕು. ಶುಧ್ದವಲ್ಲದ ಕೈಗಳು ನೀರಿನಲ್ಲಿ ಹಾಕಿದ್ರೆ ಏನಾಗಬಹುದು ಯೋಚಿಸಿ. ಕೆಲವೊಮ್ಮೆ ನಾಲ್ಕು ಬೆರಳುಗಳು ನಾಲ್ಕು ಲೋಟಗಳಲ್ಲಿ ಹಾಕಿ ನೀರು ತಂದು ಕೊಡುವ ಕೆಟ್ಟ ಅಭ್ಯಾಸ ಇಟ್ಕೊಂಡಿರ್ತಾರೆ.
ಇದು ಬಹಳ ಕೆಟ್ಟದ್ದು ,ಏಕೆಂದರೆ ಬೆರಳಿನ ಉಗುರಿನ ಒಳಗೆ ಗಲೀಜಿದ್ದರೆ ಕಾಯಿಲೆ ಹಾಗೂ ಆಸ್ಪತ್ರೆ ಕಟ್ಟಿಟ್ಟ ಬುತ್ತಿ.ಸಾಮೂಹಿಕ ಬೋಜನ ಕೂಟಗಳಲ್ಲಿ ಬಾಟಲ್ ಗಳಲ್ಲಿ ನೀರು ವ್ಯವಸ್ಥೆ ಮಾಡಿದ್ರೆ ಅದೆಷ್ಟು ಸುರಕ್ಷಿತ ಅನ್ನೋದು ಪ್ರಶ್ನಾರ್ಹ.ಅದರೆ,ಸಾಂಕ್ರಾಮಿಕ ರೋಗ ಬರದಿದ್ದ ಹಾಗೆ ತಡೆಯಬಹುದು. ದೊಡ್ಡ ಪಾತ್ರೆಗಳಲ್ಲಿ ನೀರಿನ ವ್ಯವಸ್ಥೆ ಮಾಡಿದಾಗ ಸ್ವಲ್ಪ ಎಚ್ಚರಿಕೆಯಿಂದ ಇರೋದು ಒಳ್ಳೆಯದು.ಇನ್ನು ಬೀದಿ ಬದಿ ಅಂಗಡಿಯವರಿಗೆ ನೀರಿನ ವ್ಯವಸ್ಥೆ ಸ್ವಲ್ಪ ಕಷ್ಟವೇ,ತಾವು ತಂದಂತಹ ನೀರು ಬಹಳ ಹೊತ್ತಿಗೆ ಸಾಲದು.ಶಿವಮೊಗ್ಗದ ಫುಡ್ ಕೋರ್ಟ್ ಮಾದರಿಯಲ್ಲಿ ಸಣ್ಣ ಸಣ್ಣ ಅಂಗಡಿಗಳನ್ನ ಮಾಡಿದ್ರೆ ಸ್ವಚ್ಚತೆ ಹಾಗೂ ನೀರಿನ ವ್ಯವಸ್ಥೆ ಚೆನ್ನಾಗಿ ಮಾಡಬಹುದು.
ಸ್ವಚ್ಛವಾದ ನೀರು ಕೊಡಲು ಪ್ರಯತ್ನಿಸಬಹುದು. ನಮ್ಮಗಳ ಬೇಜಾವ್ದಾರಿತನ ನಮ್ಮಗಳ ಆರೋಗ್ಯಕ್ಕೆ ಹಾನಿ ಆಗಬಾರದು ಹಾಗೇಯೇ ಎಲ್ಲದ್ದಕ್ಕೂ ವೈದ್ಯರನ್ನ ಹೊಣೆ ಮಾಡಬಾರದು. ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ದುರುಪಯೋಗ ಚೆನ್ನಾಗಿ ಆಗ್ತಿದೆ ಅನ್ನೋದಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳು ಮರಿಗಳ ಮುಂದೆ ಬೀಡಿ ಸಿಗರೇಟು ಸೇರುವುದು ಹಾಗೂ ಸಿಗರೇಟು ತುಂಡುಗಳನ್ನು ಎಲ್ಲಿಬೇಕೆಂದರಲ್ಲಿ ಎಸೆಯುವುದು, ಎಲೆ ಅಡಿಕೆ ಗುಟ್ಕ ತಿಂದು ಕಂಡ ಕಂಡಲ್ಲಿ ಉಳಿಯುವುದು ಮತ್ತು ಅದರ ಪ್ಯಾಕೆಟ್ ಎಲ್ಲಿ ಬೇಕೆಂದರಲ್ಲಿ ಎಸೆಯುವುದು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಬಾಟಲಿಗಳನ್ನು ಅಲ್ಲೇ ಎಸೆದು ಹೋಗುವುದು ನಮ್ಮ ಮುಂದಿರುವ ದೊಡ್ಡ ಸಾಕ್ಷಿಗಳು. ನಮಗೆ ಬಂದಂತ ಸ್ವಾತಂತ್ರ್ಯವನ್ನು ಮನ ಬಂದಂತೆ ದುರುಪಯೋಗ ಮಾಡ್ತಾ ಇದ್ದೇವೆ ಅನಿಸೋಲ್ವೆ?ಎಲ್ಲಿ ಬೇಕೆಂದರಲ್ಲಿ ಕಸ ಚೆಲ್ಲುವುದು,ಕಂಡ ಕಂಡಲ್ಲಿ ಉಗಿಯುವುದು,ತ್ಯಾಜ್ಯವನ್ನು ಬೇಕಾಬಿಟ್ಟಿ ಎಸೆಯುವುದು, ಸಮರ್ಪಕವಾಗಿ ಸರ್ಕಾರಿ ಪೌರಾಡಳಿತ ವ್ಯವಸ್ಥೆಯನ್ನು ಉಪಯೋಗಿಸದೇ ಇರುವುದು ಹಾಗೂ ಸ್ವಚ್ಛತೆ ವಿಷಯದಲ್ಲಿ ನಿರ್ಲಕ್ಷ್ಯ ತೋರುವುದು .ಇಷ್ಟೆಲ್ಲ ಆದಮೇಲೆ ರಾಜಕಾರಣಿಗಳನ್ನ,ಅಧಿಕಾರಿಗಳನ್ನ ಹಾಗೂ ಪೌರ ಕಾರ್ಮಿಕರನ್ನ ದೂರುತ್ತೇವೆ.
ಒಟ್ಟಾರೆಯಾಗಿ ಹೇಳುವುದಾದರೆ ನಾವು ಉಪಯೋಗಿಸುವ ಆಹಾರ ಮತ್ತು ನೀರು ಶುದ್ಧವಾಗಿರಬೇಕು ಅನ್ನೋದು ನಮಗೆಲ್ಲ ಗೊತ್ತಿರುವ ವಿಷಯ .ಅದು ನಮ್ಮ ಹಕ್ಕಾದ್ದರಿಂದ ಅದನ್ನು ಕೇಳಿ ಪಡೆಯೋದು ತಪ್ಪೇನಿಲ್ಲ .ನಾವು ಸ್ವಚ್ಛತೆ ಇಲ್ಲದ ಆಹಾರ ಹಾಗೂ ನೀರನ್ನು ದುಡ್ಡು ಕೊಟ್ಟು ಕಾಯಿಲೆಯನ್ನು ಜೊತೆಗೆ ಪಡೆಯುವುದಾದರೆ ಸ್ವಲ್ಪ ಮಟ್ಟಿಗೆ ಜಾಗೃತವಾಗಿರೋದು ಒಳ್ಳೆಯದು.
ಇನ್ನಾದರೂ ಸ್ವಚ್ಛ ಆಹಾರ ಹಾಗೇಯೇ ಶುದ್ಧ ನೀರಿಗೆ ಆದ್ಯತೆ ಕೊಡೋಣವೆ? ಕೇಳಿ ಪಡೆಯೋಣವೆ?
ಡಾ.ಶಿವಪ್ರಕಾಶ್ .ಡಿ.ಎಸ್ ಎಂ.ಬಿ.ಬಿ.ಎಸ್,ಎಂ.ಎಸ್.
ಶಸ್ತ್ರಚಿಕಿತ್ಸಾ ತಜ್ಞರು.
ಸಾರ್ವಜನಿಕ ಆಸ್ಪತ್ರೆ, ಭದ್ರಾವತಿ…