ಶಿವಮೊಗ್ಗ: ಮನುಷ್ಯನ ಸ್ವಾರ್ಥಕ್ಕೆ ವಿಜ್ಞಾನ ಬಳಕೆಯಾಗದೇ ವೈಜ್ಞಾನಿಕ ಮನೋಭಾವನೆ ವಿಸ್ತರಿಸುವಂತಾಗಬೇಕು ಎಂದು ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನದ ಸಮ್ಮೇಳನಾಧ್ಯಕ್ಷ, ಇಸ್ರೋ ಮಾಜಿ ಅಧ್ಯಕ್ಷ, ಖ್ಯಾತ ವಿಜ್ಞಾನಿ ಡಾ.ಎ.ಎಸ್. ಕಿರಣ್ ಕುಮಾರ್ ಹೇಳಿದರು.
ಅವರು ಇಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಥಮ ವೈಜ್ಞಾನಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾತನಾಡಿದರು. ವಿಶೇಷವಾದ ಜ್ಞಾನ ಈ ವಿಜ್ಞಾನ. ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಮನುಷ್ಯನ ಬದುಕು ಅತ್ಯಂತ ವೇಗದಲ್ಲಿ ಬದಲಾವಣೆಯಾಗುತ್ತಿದೆ. ಮತ್ತು ತನ್ನ ಜೀವನ ವಿಧಾನವನ್ನು ಕೂಡ ಸುಧಾರಿಸಿಕೊಂಡಿದ್ದಾನೆ.
ಆದರೆ, ವಿಜ್ಞಾನ ಎಂಬುದು ಕೊನೆಗೆ ಮನುಷ್ಯ ಸಂತೋಷದಿಂದ ಬದುಕಲು ಸಹಾಯಕವಾಗಬೇಕೆ ಹೊರತು ಆತನ ಸ್ವಾರ್ಥಕ್ಕೆ ಬಳಕೆಯಾಗಬಾರದು. ಮನುಷ್ಯ ಇಂದು ಭೂಮಿಯ ಆಚೆ ದಾಟಿದ್ದಾನೆ. ಮಾಹಿತಿಯನ್ನು ಕ್ಷಣಕ್ಷಣಕ್ಕೂ ಪಡೆಯುತ್ತಿದ್ದಾನೆ. ಎಲ್ಲಾ ವಿದ್ಯಮಾನಗಳು ವಿಜ್ಞಾನದ ಹಾದಿಯಲ್ಲಿಯೇ ಮುಂದುವರೆಯುತ್ತಿವೆ. ಆದರೆ, ಎಲ್ಲೋ ಒಂದು ಕಡೆ ಆತನ ಸಂತೋಷವನ್ನು ಕೂಡ ಕಸಿದುಕೊಳ್ಳಲಾಗುತ್ತಿದೆ ಎಂದರು.ಹೊಸ ಹೊಸ ಸವಲತ್ತುಗಳು ವಿಜ್ಞಾನದಿಂದ ಮನುಷ್ಯನಿಗೆ ಸಿಕ್ಕಿವೆ.
ಆತನ ದೈಹಿಕ ಸಾಮರ್ಥ್ಯ ಕಡಿಮೆಯಾಗಿದೆ. ಯಂತ್ರಗಳು ಬಂದು ಅನೇಕ ಕಷ್ಟದ ಕೆಲಸಗಳನ್ನು ಹೋಗಲಾಡಿಸಿವೆ. ಎಲ್ಲವೂ ನಿಜ, ವಿಜ್ಞಾನದ ಜೊತೆಗೆ ಮನುಷ್ಯನಲ್ಲಿ ಹೊಸ ವಿವೇಚನೆಯ ಜಗತ್ತು ತೆರೆದುಕೊಳ್ಳಬೇಕಾಗಿದೆ. ನಮಗೆ ಗೊತ್ತಿಲ್ಲದೇ ನಾವು ಚಲಿಸುತ್ತಲೇ ಇರುತ್ತೇವೆ. ಹಾಗೆಯೇ ವಿಜ್ಞಾನ ಕೂಡ. ಸಂಶೋಧನೆಗಳು ದಿನದಿಂದ ದಿನಕ್ಕೆ ಅತಿಬೇಗನೆ ವಿಜ್ಞಾನಕ್ಕೆ ಸೇರಿಕೊಳ್ಳುತ್ತಿವೆ ಎಂದರು.ವಿಜ್ಞಾನವನ್ನು ಮನುಷ್ಯ ಸ್ಪಷ್ಟವಾಗಿ ಅರಿತುಕೊಳ್ಳಬೇಕಾಗಿದೆ.
ಇದಕ್ಕೆ ಎರಡು ಮಾರ್ಗಗಳು ಉಂಟು. ತನ್ನೊಳಗೆ ತಾನು ತಿಳಿದುಕೊಂಡು ಅಳವಡಿಸಿಕೊಳ್ಳುವುದು ಮತ್ತು ಕಲಿಯುವುದು, ಹಾಗೂ ವಿಜ್ಞಾನದ ಸಂಶೋಧನೆಗಳಿಂದ ಅನಿವಾರ್ಯವಾಗಿ ಅದನ್ನು ಬಳಕೆ ಮಾಡಿಕೊಳ್ಳುವುದು. ಈ ಎರಡೂ ದೃಷ್ಟಿಯಲ್ಲೂ ಕೂಡ ಯೋಚಿಸಿ ಮನುಷ್ಯ ನಡೆದುಕೊಳ್ಳಬೇಕಾಗುತ್ತದೆ. ವಿಜ್ಞಾನ ಮುಂದುವರೆಯುತ್ತಲೇ ಇದೆ. ಅದರ ಜೊತೆಗೆ ಮನುಷ್ಯನ ಬುದ್ಧಿವಂತಿಕೆಯೂ ಕೂಡ ತಿರುಗುತ್ತಲೇ ಇದೆ. ಇದು ಎಲ್ಲೂ ಕೂಡ ತಪ್ಪು ಕ್ರಿಯೆಗಳಿಗೆ ದಾರಿಯಾಗಬಾರದು ಎಂದರು.
ಪ್ರಮುಖವಾಗಿ ಮೂಢನಂಬಿಕೆಗಳನ್ನು ಹೊಡೆದೋಡಿಸಲು ವಿಜ್ಞಾನವೇ ತಳಹದಿಯಾಗಿರುತ್ತದೆ. ಜನಸಾಮಾನ್ಯರಲ್ಲಿ ವೈಚಾರಿಕ ಚಿಂತನೆಗಳನ್ನು ಬೆಳೆಸಬೇಕು. ವಿಜ್ಞಾನದ ಜೊತೆ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಶಿಕ್ಷಣ ಇವೆಲ್ಲವೂ ಬೆರೆತುಕೊಳ್ಳಬೇಕು. ಮುಖ್ಯವಾಗಿ ವಿಜ್ಞಾನ ಹಣದ ಮೂಲದಿಂದ ದೂರ ಉಳಿಯಬೇಕು ಎಂದರು.ಹುಲಿಕಲ್ ನಟರಾಜ್ ಅವರ ಈ ವೈಜ್ಞಾನಿಕ ಸಂಶೋಧನಾ ಪರಿಷತ್ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದೆ. ಇಂತಹ ಸಂಸ್ಥೆಗಳಿಗೆ ಸರ್ಕಾರ ಕೂಡ ಸಹಾಯಕ್ಕೆ ಬರಬೇಕು. ಪ್ರಮುಖವಾಗಿ ಪ್ರಕೃತಿಗೆ ಬೆಲೆ ಕೊಡಬೇಕು. ಜಗತ್ತಿನಲ್ಲಿ ನಾವಿನ್ನು ಮೂಢನಂಬಿಕೆಯ ರಾಷ್ಟ್ರ ಎಂದೇ ಬಿಂಬಿಸಿಕೊಳ್ಳುತ್ತಿದ್ದೇವೆ. ಆದರೆ, ವೈಜ್ಞಾನಿಕವಾಗಿ ಜಗತ್ತಿನ ರಾಷ್ಟ್ರಗಳ ಜೊತೆ ನಾವಿದ್ದೇವೆ ಎಂದರು.