ಶಿವಮೊಗ್ಗ: ಕನ್ನಡ ಧ್ವಜ ಸುಟ್ಟು ಕನ್ನಡಿಗರಿಗೆ ಅವಮಾನ ಮಾಡಿರುವ ಎಂಇಎಸ್ ಮತ್ತು ಶಿವಸೇನೆ ನಿಷೇಧಿಸುವಂತೆ ಒತ್ತಾಯಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕದಲ್ಲಿ ಎಲ್ಲಾ ಭಾಷಿಕರು ಒಗ್ಗಟ್ಟಿನಿಂದ ಜೀವನ ನಡೆಸುತ್ತಿದ್ದು, ಮಹಾರಾಷ್ಟ್ರದ ಕೆಲವು ಕಿಡಿಗೇಡಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುರುದ್ಧೇಶದಿಂದ ಮಹಾರಾಷ್ಟ್ರ ಏಕೀಕರಣ ಸಮಿತಿ, ಶಿವಸೇನೆ ಎಂಬ ಸಂಘಟನೆ ಹಾಗೂ ರಾಜಕೀಯ ಪಕ್ಷ ಹುಟ್ಟು ಹಾಕಿ ಬೆಳಗಾವಿಯಲ್ಲಿ ನಿರಂತರವಾಗಿ ಸಾರ್ವಜನಿಕರ ನೆಮ್ಮದಿ ಕೆಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ನವೆಂಬರ್ ತಿಂಗಳಲ್ಲಿ ಕರಾಳ ದಿನಾಚರಣೆ ಮಾಡುತ್ತಾ, ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಾ, ಕನ್ನಡಿಗರು ಹಾಗೂ ಮರಾಠಿಗರ ನಡುವೆ ನಿರಂತರ ವೈಷಮ್ಯಕ್ಕೆ ಕಾರಣವಾಗಿದೆ. ಬೆಳಗಾವಿಯಲ್ಲಿ ಮರಾಠ ಮಹಾಮೇಳ ನಡೆಸಿ ಕರ್ನಾಟಕ ಸರ್ಕಾರದ ವಿರುದ್ಧ ನಿರಂತರವಾಗಿ ಮರಾಠರನ್ನು ಪ್ರಚೋದನೆಗೊಳಿಸಿ, ಹಿಂಸಾತ್ಮಕ ಕೃತ್ಯಗಳನ್ನು ನಡೆಸುವುದರ ಜೊತೆಗೆ ಇತ್ತೀಚೆಗೆ ಕನ್ನಡ ಧ್ವಜ ಸುಟ್ಟು ದೇಶಪ್ರೇಮಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಭಗ್ನಗೊಳಿಸಿ ಅವಮಾನಗೊಳಿಸಿದ್ದಲ್ಲದೇ ಸರ್ಕಾರಿ ವಾಹನಗಳಿಗೂ ಕಲ್ಲು ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಕೀಕರಣವಾದಾಗಿನಿಂದಲೂ ನಿರಂತರವಾಗಿ ಬೆಳಗಾವಿಯಲ್ಲಿ ಹಿಂಸಾಚಾರಕ್ಕೆ ಕಾರಣವಾಗಿರುವ ಕರ್ನಾಟಕ ಸರ್ಕಾರಕ್ಕೆ ವಿರುದ್ಧವಾಗಿ ಕಾನೂನು ಬಾಹಿರವಾಗಿ ಕೆಲಸ ಮಾಡುವ ಎಂಇಎಸ್ ಸಂಘಟನೆ ಹಾಗೂ ಶಿವಸೇನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಪ್ರಮುಖರಾದ ನಿಂಗರಾಜ್, ಸಂತೋಷ್, ದೇವೇಂದ್ರಪ್ಪ, ನಯನಾ, ರಾಜಮ್ಮ, ಎಂ. ರಾಜಣ್ಣ, ಸುರೇಶ್, ನಟೇಶ್, ಅಶ್ರಫ್, ರಾಜು ಗುಜ್ಜರ್ ಸೇರಿದಂತೆ ಹಲವರಿದ್ದರು.