ಶಿವಮೊಗ್ಗ: ಮೆದುಳು ಮತ್ತು ನರರೋಗಗಳ ಚಿಕಿತ್ಸೆಗಾಗಿ ರೂಪುಗೊಂಡಿರುವ ‘ನ್ಯೂರೋಭಾರತ್ ಆಸ್ಪತ್ರೆ’ ಜ.19ರ ನಾಳೆ ಬೆಳಿಗ್ಗೆ 10ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಮೆದುಳು ಮತ್ತು ನರರೋಗ ತಜ್ಞ ಡಾ. ಎ.ಶಿವರಾಮಕೃಷ್ಣ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಜಿಲ್ಲಾ ಕಚೇರಿ ಪಕ್ಕದಲ್ಲಿ ನಿರ್ಮಾಣಗೊಂಡಿರುವ ಆಸ್ಪತ್ರೆ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ನಗರದ ಹಿರಿಯ ವೈದ್ಯರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಡಾ.ಎನ್.ಎಲ್.ನಾಯಕ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದರು.ನಗರವು ಕಳೆದ 10-15 ವರ್ಷಗಳಲ್ಲಿ ವೈದ್ಯಕೀಯ ಚಿಕಿತ್ಸೆಯಲ್ಲಿ ಗಣನೀಯ ಪ್ರಗತಿಯನ್ನು ಕಂಡಿದೆ.

ಅನೇಕ ಸಂಕೀರ್ಣ ಖಾಯಿಲೆಗಳ ಚಿಕಿತ್ಸೆಯ ಸೌಲಭ್ಯವೂ ನಗರದಲ್ಲೇ ಲಭ್ಯವಿದೆ. ದೇಹದ ವಿವಿಧ ಅಂಗಗಳ ವಿಶೇಷ ಪರೀಕ್ಷೆ ಹಾಗೂ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಪ್ರಾರಂಭವಾಗುತ್ತಿವೆ. ಈ ದಿಸೆಯಲ್ಲಿ ಮೆದುಳು ಮತ್ತು ನರರೋಗಗಳ ಚಿಕಿತ್ಸೆಗಾಗಿ ಈ ಆಸ್ಪತ್ರೆ ರೂಪುಗೊಂಡಿದೆ ಎಂದರು.ಬೆಂಗಳೂರಿನ ಪ್ರತಿಷ್ಟಿತ ನಿಮ್ಹಾನ್ಸ್ ಆಸ್ಪತ್ರೆಯಂತೆ ಮೆದುಳು, ಬೆನ್ನುಹುರಿ, ನರರೋಗಗಳು ಹಾಗೂ ಮನೋರೋಗ ಖಾಯಿಲೆಗಳಿಗೆ ಒಂದೇಸೂರಿನಡಿ ಚಿಕಿತ್ಸೆ ಒದಗಿಸುವ ಗುರಿಯೊಂದಿಗೆ ಆಸ್ಪತ್ರೆಯನ್ನು ಪ್ರಾರಂಭಿಸಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ಮೆದುಳು ಮತ್ತು ಬೆನ್ನುಹುರಿ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂರ್ಛರೋಗ, ತಲೆನೋವು, ಪಾರ್ಕಿನ್ಲೋನಿಸಮ್ ನಂತಹ ಮೆದುಳು ಹಾಗೂ ನರದೌರ್ಬಲ್ಯಗಳ ಕಾಯಿಲೆಗಳಿಗೂ ಹಾಗೂ ಮನೋರೋಗದ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದರು.

ಅಪಘಾತದಿಂದ ಮೆದುಳಿಗೆ ಹಾಗು ದೇಹದ ಇತರ ಭಾಗಗಳಲ್ಲಿ ಉಂಟಾದ ಗಾಯಗಳಿಗೂ ಚಿಕಿತ್ಸೆ ನೀಡಲಾಗುವುದು. ಮೆದುಳು ಮತ್ತು ನರರೋಗಗಳ ಚಿಕಿತ್ಸೆಗೆ ಅಗತ್ಯವಾದ ಸಿ.ಟಿ ಸ್ಕ್ಯಾನ್, ಎಕ್ಸರೇ, ಅಲ್ಲಾಸೌಂಡ್, ಸುಸಜ್ಜಿತ ಪ್ರಯೋಗಾಲಯ, ಇ.ಇ.ಜಿ, ಇ.ಮ್.ಜಿ, ಆರ್.ಟಿ.ಎಮ್.ಸ್ ಉಪಕರಣಗಳು ಈ ಆಸ್ಪತ್ರೆಯಲ್ಲಿ ಲಭ್ಯವಿರುತ್ತದೆ ಎಂದರು.ಮೆದುಳು ಹಾಗೂ ಮೂಳೆ ಶಸ್ತ್ರ ಚಿಕಿತ್ಸೆಗೆ ಅಗತ್ಯವಾದ ಎರಡು ಆತ್ಯಾಧುನಿಕ ಮಾಡ್ಯುಲಾರ್ ಶಸ್ತ್ರ ಚಿಕಿತ್ಸಾ ಕೊಠಡಿಗಳು ಇರುವುದು ಆಸ್ಪತ್ರೆಯ ವಿಶೇಷತೆ. ತೀವ್ರ ಸ್ವರೂಪದ ಖಾಯಿಲೆ ಇದ್ದವರಿಗೆ ಚಿಕಿತ್ಸೆ ನೀಡಲು ಸುಸಜ್ಜಿತ ತೀವ್ರನಿಗಾ ಘಟಕ ಲಭ್ಯವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ಎನ್.ಎಮ್. ಕುಮಾರ್, ಡಾ.ಶಶಾಂಕ ಅರೂರ್, ಡಾ. ಹೆಚ್.ಎಲ್. ಪ್ರಮೋದ್, ಡಾ. ಪಿ.ಜಿ.ಸಾತ್ವಿಕ್ , ಗಿರಿಯಪ್ಪ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…