ಮಂಗಳೂರು ಜನವರಿ 21, 2022: ರಾಜಕಾರಣದಲ್ಲಿನ ಇಚ್ಚಾಶಕ್ತಿಯ ಕೊರತೆಯಿಂದ ತುಳು ಮತ್ತು ಕೊಡವ ಭಾಷೆಗಳಂತಹ ಅಲ್ಪಸಂಖ್ಯಾತ ಭಾಷೆಗಳಿಗೆ ಇದುವರೆಗೂ ಸಾಂವಿಧಾನಿಕ ಮಾನ್ಯತೆ ದೊರಕಿಲ್ಲ ಎಂದು ವಿಶ್ರಾಂತ ಕುಲಪತಿ ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.

ಇಂದು ಮಂಗಳೂರಿನಲ್ಲಿ ಬಿ.ಕೆ ಹರಿಪ್ರಸಾದ್‌ ಅವರು ಸಂಸದರಾಗಿದ್ದಾಗ ಸಂಸತ್ತಿನಲ್ಲಿ ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8 ನೇ ಪರಿಚ್ಚೇದಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮಾಡಿದಂತಹ ಭಾಷಣಗಳ ಪುಸ್ತಕ “ತುಳು ಕೊಡವ ಭಾಷೆಗಳ ಅಳಿವು ಉಳಿವು” ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಬಿ.ಕೆ ಹರಿಪ್ರಸಾದ್‌ ಅವರು ತುಳು ಮತ್ತು ಕೊಡವ ಭಾಷೆಗಳ ಮಹತ್ವ ಮತ್ತು ಪ್ರಾಚೀನತೆಯನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಭಾಷೆಯ ಕೆಲಸ ಅದರ ಪರಿಭಾವದ ಬಗ್ಗೆ ವಿವರಿಸುತ್ತಾ ತುಳು ಮತ್ತು ಕೊಡವ ಬಾಷೆಗಳಿಗೆ ನಮ್ಮ ರಾಜ್ಯದಲ್ಲಿರುವ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. ಆದರೆ, ರಾಜಕಾರಣದಲ್ಲಿನ ಇಚ್ಚಾಶಕ್ತಿಯ ಕೊರತೆಯಿಂದಾಗಿ ಈ ಭಾಷೆಗಳಿಗೆ ಸಾಂವಿಧಾನಿಕ ಮಾನ್ಯತೆಯನ್ನು ಒದಗಿಸಿಕೊಡುವುದು ಸಾಧ್ಯವಾಗಿಲ್ಲ. ರಾಜಕಾರಣಿಗಳು ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಬದಿಗೊತ್ತಿ, ರಾಜ್ಯದ ಪ್ರಮುಖ ಭಾಷೆಗಳಾಗಿರುವ ತುಳು ಮತ್ತು ಕೊಡವ ಭಾಷೆಗಳನ್ನ ಸಂವಿಧಾನದ 8ನೇ ಪರಿಚ್ಚೇದಲ್ಲಿ ಸೇರಿಸುವ ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ ಎಂದು ಹೇಳಿದರು.

ಮಾಜಿ ಸಂಸದರು ಹಾಗೂ ಹಾಲಿ ವಿಧಾನಪರಿಷತ್‌ ಸದಸ್ಯರಾದ ಬಿ.ಕೆ ಹರಿಪ್ರಸಾದ್‌ ಮಾತನಾಡಿ, ಯಾವುದೇ ಭಾಷೆಯಲ್ಲಿ ಸಂಸ್ಕಾರ ಹಾಗೂ ಸಂಸ್ಕೃತಿ ಇರಲಿದೆ. ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದು, ತುಳು ಮತ್ತು ಕೊಡವ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಬೇಕು ಎನ್ನುವುದು ಧೀರ್ಘಕಾಲದ ಹೋರಾಟವಾಗಿದೆ. ನಮ್ಮ ರಾಜ್ಯದಲ್ಲಿ ತುಳು ಭಾಷಿಕರು 2011 ನೇ ಜನಗಣತಿಯ ಪ್ರಕಾರ 18.46 ಲಕ್ಷದಷ್ಟಿದ್ದಾರೆ. ಇದರ ಸಂಖ್ಯೆ ಈಗ ಇನ್ನು ಹೆಚ್ಚಾಗಿದೆ. ಆದರೆ, ಈ ಭಾಷೆಗಳಿಗೆ ಸಿಗಬೇಕಾಗಿದ್ದ ಮಾನ್ಯತೆಯನ್ನು ನೀಡದೇ ಇರುವ ಹಿನ್ನಲೆಯಲ್ಲಿ ಸರಿಯಾದ ಅಭಿವೃದ್ದಿಯಾಗಿಲ್ಲ. ಈ ಬಗ್ಗೆ ಎಲ್ಲರೂ ಒಗ್ಗಟ್ಟಿನ ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ವಾರ್ತಾಭಾರತಿ ದಿನ ಪತ್ರಿಕೆ ಸಂಪಾದಕರಾದ ಅಬ್ದುಸ್ಸಲಾಂ ಪುತ್ತಿಗೆ, ಹಿರಿಯ ಪತ್ರಕರ್ತ ಹಾಗೂ ಕೃತಿ ಸಂಪಾದಕರಾದ ಆರ್‌ ಜಯಕುಮಾರ್‌ ಉಪಸ್ಥಿತರಿದ್ದರು.

ವರದಿ ಹರೀಶ ಶೆಟ್ಟಿ…