ಶಿವಮೊಗ್ಗ: ವಿನೋಬನಗರದ ಆಟೋ ಕಾಂಪ್ಲೆಕ್ಸ್ ಮೊದಲ ತಿರುವಿನಲ್ಲಿ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದ್ದು, ಮೂರು ಕಾರ್ ಗಳು ಬೆಂಕಿಗೆ ಆಹುತಿಯಾಗಿವೆ. ಒಂದು ಭಾಗಶಃ ಸುಟ್ಟುಹೋಗಿದೆ.ತಕ್ಷಣ ಅಗ್ನಿಶಾಮಕ ದಳಕ್ಕೆ ಸ್ಥಳೀಯ ಕಾರ್ಪೋರೇಟರ್ ರಾಹುಲ್ ಬಿದರೆ ಮತ್ತು ಸ್ಥಳೀಯ ನಿವಾಸಿಗಳು ಕರೆ ಮಾಡಿ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಆಟೋ ಕಾಂಪ್ಲೆಕ್ಸ್ ಕೆಐಎಡಿಬಿ ಇನ್ನೂ ಕೂಡ ಮಹಾನಗರ ಪಾಲಿಕೆಗೆ ನಿರ್ವಹಣೆಗೆ ಹಸ್ತಾಂತರಿಸಿಲ್ಲವಾದ್ದರಿಂದ ಆಟೋ ಕಾಂಪ್ಲೆಕ್ಸ್ ನಲ್ಲಿರುವ ಕೆಲವು ಮಳೆಗೆಯವರು ತಮ್ಮ ಮಳಿಗೆ ತ್ಯಾಜ್ಯ ವಸ್ತುಗಳನ್ನು ಒಂದನೇ ತಿರುವಿನ ಖಾಲಿ ಜಾಗದಲ್ಲಿ ತಂದು ಸುರಿದಿದ್ದು ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ನಿನ್ನೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದರಿಂದ ಪಕ್ಕದಲ್ಲೇ ಗ್ಯಾರೇಜ್ ಗಳಲ್ಲಿದ್ದ ದುರಸ್ತಿಗಾಗಿ ತಂದು ನಿಲ್ಲಿಸಿದ್ದ ಎರಡು ಮಾರುತಿ ಓಮ್ನಿ, ಒಂದು ಮಾಟಿಸ್ ಕಾರ್ ಬೆಂಕಿಗೆ ಸುಟ್ಟುಕರಕಲಾಗಿವೆ. ಪಕ್ಕದಲ್ಲೇ ವಿದ್ಯುತ್ ಪರಿವರ್ತಕವಿದ್ದು, ಅದೃಷ್ಟವಶಾತ್ ಅಗ್ನಿಶಾಮಕದಳದ ಸಕಾಲಿಕ ಕಾರ್ಯಾಚರಣೆಯಿಂದಾಗಿ ಭಾರಿ ಅನಾಹುತ ತಪ್ಪಿದೆ.ನಿನ್ನೆ ಭಾನುವಾರವಾಗಿದ್ದ ಕಾರಣ ಜನಸಂಖ್ಯೆ ವಿರಳವಾಗಿತ್ತು.
ಬೆಂಕಿಯ ಕೆನ್ನಾಲಿಗೆ ಮತ್ತು ಸುಟ್ಟ ವಾಸನೆಗೆ ಸ್ಥಳೀಯರು ಎಚ್ಚೆತ್ತು ಮಾಹಿತಿ ನೀಡಿದ್ದರಿಂದ ಸೂಕ್ತ ಸಂದರ್ಭದಲ್ಲಿ ಕ್ರಮವಹಿಸಿದ್ದರಿಂದ ಹೆಚ್ಚಿನ ಹಾನಿ ತಪ್ಪಿದೆ. ಮಳಿಗೆಗಳ ಸಾಲಿಗೆ ಏನಾದರೂ ಬೆಂಕಿ ವ್ಯಾಪಿಸಿದ್ದರೆ ಭಾರೀ ಅನಾಹುತವೇ ಉಂಟಾಗುತ್ತಿತ್ತು. ಕೆಐಎಡಿಬಿಯ ನಿರ್ಲಕ್ಷ್ಯಕ್ಕೆ ಭಾರಿ ತೆರಬೇಕಾಗುತ್ತಿತ್ತು. ಇನ್ನಾದರೂ ಆಟೋ ಕಾಂಪ್ಲೆಕ್ಸ್ ನಿರ್ವಹಣೆಯನ್ನು ತುರ್ತಾಗಿ ಪಾಲಿಕೆಗೆ ವಹಿಸುವುದು ಉತ್ತಮ ಎಂದು ಸ್ಥಳೀಯ ವ್ಯಾಪಾರಸ್ಥರು ಜಿಲ್ಲಾಡಳಿತಕ್ಕೆ ವಿನಂತಿಸಿದ್ದಾರೆ. ನಿನ್ನೆಯ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಅಧಿಕಾರಿ ಅಶೋಕ್ ಕುಮಾರ್, ಠಾಣಾಧಿಕಾರಿ ಪ್ರವೀಣ್ ಹಾಗೂ ಸಿಬ್ಬಂದಿ ವರ್ಗ, ವಿನೋಬನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರವಿ ಮತ್ತು ಸಿಬ್ಬಂದಿ, ಕಾರ್ಪೋರೇಟರ್ ರಾಹುಲ್ ಬಿದರೆ ಮತ್ತಿತರರು ಇದ್ದರು.