ಶಿವಮೊಗ್ಗ: ಜಿಪಂ ಮತ್ತು ತಾಪಂ ಚುನಾವಣೆಯನ್ನು ಆದಷ್ಟು ಬೇಗ ನಡೆಸಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಜಿಪಂ, ತಾಪಂ ಚುನಾವಣೆ ಆದಷ್ಟು ಬೇಗ ನಡೆಸುವಂತೆ ಚುನಾವಣಾ ಆಯೋಗಕ್ಕೆ ಈಗಾಗಲೇ ನಾವು ಮನವಿ ಕೊಟ್ಟಿದ್ದೇವೆ. ಚುನಾವಣಾ ಆಯೋಗ ಈ ಬಗ್ಗೆ ಚಿಂತನೆ ನಡೆಸಿದೆ ಎಂದರು.

ಚುನಾವಣೆಗೆ ಸಂಬಂಧಿಸಿದಂತೆ 780 ಕ್ಕೂ ಹೆಚ್ಚು ತಕರಾರು ಅರ್ಜಿಗಳು ಬಂದಿದ್ದರಿಂದ ಅವುಗಳನ್ನು ಪರಿಶೀಲಿಸಿ ಕೆಲವು ನಿಯಮಗಳಿಗೆ ತಿದ್ದುಪಡಿ ತಂದು ಚುನಾವಣೆ ನಡೆಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಲಕ್ಷ್ಮಿನಾರಾಯಣ ನೇತೃತ್ವದ ಸಮಿತಿ ರಚಿಸಲಾಗಿದೆ. ಸಮಿತಿಯು ಎಲ್ಲಾ ಕೋನಗಳಲ್ಲಿ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ವರದಿ ಬಂದ ನಂತರ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದರು.ಅವಕಾಶವಾದಿ ರಾಜಕಾರಣಕ್ಕೆ ಮತ್ತೊಂದು ಸಿಎಂ ಇಬ್ರಾಹಿಂ ಮತ್ತು ಸಿದ್ಧರಾಮಯ್ಯ ಅವರೇ ಆಗಿದ್ದಾರೆ ಎಂದು ವ್ಯಂಗ್ಯವಾಡಿದ ಈಶ್ವರಪ್ಪ ಇವರಿಬ್ಬರು ಬೇರೆ ಬೇರೆ ಅಲ್ಲ. ಒಂದು ರೀತಿಯ ಅವಳಿ –ಜವಳಿ ಇದ್ದ ಹಾಗೆ ಇಬ್ಬರಿಗೂ ಅಧಿಕಾರದ ಆಸೆ. ರಾಜ್ಯಾಧ್ಯಕ್ಷ ಸ್ಥಾನ ತಪ್ಪಿ ಹೋದರೆ ಅಥವಾ ಯಾವುದೇ ಅಧಿಕಾರ ಸಿಗದಿದ್ದರೆ ಇಬ್ಬರೂ ಪಕ್ಷ ಬಿಡುವ ಮಾತನಾಡುತ್ತಾರೆ. ಹಾಗಾಗಿ ಈ ಅವಕಾಶವಾದಿಗಳ ಬಗ್ಗೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.

ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಕೇಶವಮೂರ್ತಿ ಅಭಿನಂದನೆ:ಇದಕ್ಕೂ ಮೊದಲು ಈಶ್ವರಪ್ಪ ಅವರು ಪದ್ಮಶ್ರೀ ಪುರಸ್ಕೃತ ಹೊಸಹಳ್ಳಿ ಕೇಶವಮೂರ್ತಿ ಅವರ ನಿವಾಸಕ್ಕೆ ತೆರಳಿ ಅವರನ್ನು ಅಭಿನಂದಿಸಿದರು.ನಂತರ ಅವರು ಮಾತನಾಡಿ, ಹೊಸಹಳ್ಳಿ ಕೇಶವಮೂರ್ತಿ ನಮ್ಮ ಜಿಲ್ಲೆಯವರು ಎನ್ನುವುದೇ ನಮಗೊಂದು ಹೆಮ್ಮೆ. ಅವರಿಗೆ ಪ್ರಶಸ್ತಿ ಬಂದಿರುವುದು ಪ್ರಶಸ್ತಿ ಗೌರವವನ್ನು ಹೆಚ್ಚಿಸಿದೆ ಎಂದರು.ಗಮಕ ಕಲೆಯ ಮೂಲಕ ಕೇಶವಮೂರ್ತಿ ಅವರು ಲಕ್ಷಾಂತರ ಜನರಿಗೆ ಭಾರತೀಯ ಸಂಸ್ಕೃತಿ ಪರಿಚಯ ಮಾಡಿಕೊಟ್ಟಿದ್ದಾರೆ. ಸುಮಾರು 40 ವರ್ಷಗಳ ಸೇವೆಯನ್ನು ಈ ಕ್ಷೇತ್ರದಲ್ಲಿ ಅವರು ಸಲ್ಲಿಸಿದ್ದಾರೆ. ಅವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಅವರನ್ನು ಗೌರವಿಸಿದೆ. ಅವರಿಂದ ಭಾರತೀಯ ಸಂಸ್ಕೃತಿ ಮತ್ತಷ್ಟು ಬೆಳೆಯಲಿ. ಇಂತಹ ಮಹಾನುಭಾವರ ಆದರ್ಶಗಳು ನಮಗೆ ಸದಾ ಸಿಗಲಿ ಎಂದರು.ಕೇಶವಮೂರ್ತಿ ಅವರು ಈ ಸಂದರ್ಭದಲ್ಲಿ ಗಮಕವಾಚನ ಮಾಡಿದರು. ಹೊಸಹಳ್ಳಿ ವೆಂಕಟರಾಂ, ಸುನಿತಾ ಅಣ್ಣಪ್ಪ, ಟಿ.ಡಿ. ಮೇಘರಾಜ್, ಹೃಷಿಕೇಶ್ ಪೈ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…