ಶಿವಮೊಗ್ಗ: ಈ ಬಾರಿಯ ಕೇಂದ್ರ ಬಜೆಟ್ ಸುಳ್ಳು ಘೋಷಣೆಗಳ ಬೋಗಸ್ ಬಜೆಟ್ ಆಗಿದ್ದು, ಅತ್ಯಂತ ನಿರಾಶದಾಯಕವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಬಜೆಟ್ ಅತ್ಯಂತ ದುರ್ಬಲವಾಗಿದೆ. ಈ ಬಜೆಟ್ ನಲ್ಲಿ ಏನೂ ಇಲ್ಲ. ಇದು ರೈತ ವಿರೋಧಿ ಬಜೆಟ್ ಮಾತ್ರವಲ್ಲದೇ, ಮಹಿಳಾ ವಿರೋಧಿ, ಕಾರ್ಮಿಕ ವಿರೋಧಿ, ಶ್ರಮಿಕರ ವಿರೋಧಿ ಬಜೆಟ್ ಆಗಿದೆ. ಆಶಾ ಕಾರ್ಯಕರ್ತೆಯರು, ದುಡಿಯುವ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು, ಸಾಮಾನ್ಯ ಮಹಿಳೆಯರು ಸೇರಿ ಶ್ರಮಿಕರಿಗೆ  ಯಾವ ಕೊಡುಗೆಯೂ ಇಲ್ಲವಾಗಿದೆ ಎಂದು ದೂರಿದರು.ಕಳೆದ ಎರಡು ವರ್ಷಗಳಿಂದ ಕರ್ನಾಟಕ ಜನತೆ ಕೋವಿಡ್ ಸಂಕಟದಿಂದ, ಅತಿವೃಷ್ಠಿ, ಅನಾವೃಷ್ಠಿಯಿಂದ ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ.

ಇವರ ಆರ್ಥಿಕ ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ಯಾವ ಕ್ರಮವನ್ನು ಕೈಗೊಂಡಿಲ್ಲ. ಎಲ್ಲಾ ಬಡವರ್ಗದ ಜನರನ್ನು ಮರೆತು ಶ್ರೀಮಂತರ ಪರವಾಗಿ ಕಕೆಲವು ಯೋಜನೆಗಳನ್ನು ಪ್ರಕಟಿಸಿ ಬಜೆಟ್ ಜನವಿರೋಧಿಯಾಗುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.ಇಂತಹ ಕಷ್ಟದ ಸಂದರ್ಭದಲ್ಲಿ ಯಾವ ತೆರಿಗೆ ವಿನಾಯಿತಿ ನೀಡಿಲ್ಲ. ಅದರ ಬದಲು ಕರ್ನಾಟಕಕ್ಕೆ ಸಾಲದ ಹೊರೆ ಹೆಚ್ಚು ಮಾಡಲಾಗಿದೆ. ಇದರ ಪರಿಣಾಮ ರಾಜ್ಯದ ಜನರೇ ಮತ್ತಷ್ಟು ತೆರಿಗೆ ಕಟ್ಟಬೇಕಾಗಬಹುದು. ಬಡವರಿಗೆ ಮಧ್ಯಮ ವರ್ಗ, ಕೂಲಿ ಕಾರ್ಮಿಕ ವರ್ಗ ಇವರನ್ನೆಲ್ಲಾ ಸಂಪೂರ್ಣವಾಗಿ ಮರೆತಿರುವ ಬಜೆಟ್ ಹೇಗೆ ಜನಪರವಾಗುತ್ತದೆ ಎಂದು ಪ್ರಶ್ನಿಸಿದರು.ದೇಶದ ಸಾಲ ಹೆಚ್ಚುತ್ತಲೇ ಇದೆ. 93 ಲಕ್ಷ ಕೋಟಿ ರೂ. ಇದ್ದ ಸಾಲ ಒಂದೇ ವರ್ಷದಲ್ಲಿ 135 ಲಕ್ಷ ಕೋಟಿ ರೂ. ದಾಟಿದೆ. ರಾಜ್ಯದ ಪಾಲಿನ ಜಿ.ಎಸ್.ಟಿ. ಇನ್ನೂ ಕೊಟ್ಟಿಲ್ಲ.

ಆದರೆ, 30 ಸಾವಿರ ಕೋಟಿ ರೂ. ಸಾಲ ಕೊಡುತ್ತಾರೆ. ಇದು ಯಾವ ನ್ಯಾಯ? ಹಣದುಬ್ಬರ ಕಡಿಮೆ ಮಾಡಲು ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪೆಟ್ರೋಲ್ ಉತ್ಪನ್ನದ ಮೇಲೆ ಶೇ. 2 ರಷ್ಟು ಟ್ಯಾಕ್ಸ್ ಹಾಕಲಾಗಿದೆ. ನದಿ ಜೋಡಣೆ ಪ್ರಸ್ತಾಪ ಮಾಡಿದ್ದರೂ ಕೂಡ ಇದೊಂದು ಘೋಷಣೆಯಾಗಿಯೇ ಉಳಿಯುತ್ತದೆ ಅಷ್ಟೇ. ಒಟ್ಟಾರೆ ಬಡವರ ಆಸೆಗಳ ಪೂರೈಸಲಾರದಷ್ಟು ದುರ್ಬಲವಾದ ಬಜೆಟ್ ಇದು ಎಂದು ಟೀಕಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಯಮುನಾ ರಂಗೇಗೌಡ, ರಮೇಶ್ ಹೆಗ್ಡೆ, ರೇಖಾ ರಂಗನಾಥ್, ಚಂದ್ರಭೂಪಾಲ್, ಚಂದ್ರಶೇಖರ್, ಸೌಗಂಧಿಕಾ, ಚಂದನ್, ಎನ್.ಡಿ. ಪ್ರವೀಣ್ ಕುಮಾರ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…