ಶಿವಮೊಗ್ಗ: ಸೂರ್ಯ ನಮಸ್ಕಾರದಿಂದ ಸಕಲವು ಪ್ರಾಪ್ತಿಯಾಗುತ್ತದೆ. ಸೂರ್ಯ ನಮಸ್ಕಾರ ಹಾಗೂ ಯೋಗದಿಂದ ಹೃದಯ ಸಂಬಂಧಿ ಕಾಯಿಲೆ ದೂರಾಗುತ್ತದೆ. ಮಾನಸಿಕ ಖಿನ್ನತೆ ಕಡಿಮೆಯಾಗುವುದರ ಜತೆಯಲ್ಲಿ ಸದಾ ಚಟುವಟಿಕೆಯಿಂದ ಇರಲು ಸಾಧ್ಯ ಎಂದು ಶಿವಗಂಗಾ ಯೋಗಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಹೇಳಿದರು.

ಶಿವಮೊಗ್ಗ ನಗರದ ಕಲ್ಲಳ್ಳಿಯ ಶಿವಗಂಗಾ ಯೋಗ ಕೇಂದ್ರದಲ್ಲಿ ರಥಸಪ್ತಮಿ ಪ್ರಯುಕ್ತ ಆಯೋಜಿಸಿದ್ದ ಸೂರ್ಯ ಯಜ್ಞ ರಥಸಪ್ತಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸೂರ್ಯನನ್ನು ಪೂಜಿಸುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂದು ತಿಳಿಸಿದರು.ಸೂರ್ಯ ನಮಸ್ಕಾರ ಹಾಗೂ ಯೋಗದಿಂದ ಎಲ್ಲ ಕಾಯಿಲೆಗಳು ದೂರವಾಗುತ್ತವೆ. ಯೋಗ ಮನುಷ್ಯನ ದೇಹ ಮನಸ್ಸನನ್ನು ಸದೃಢವಾಗಿಸುವ ಜತೆಯಲ್ಲಿ ದೀರ್ಘಾಯುಷ್ಯ ಉಳ್ಳವನನ್ನಾಗಿಸುತ್ತದೆ. ಯೋಗ ಮತ್ತು ಸೂರ್ಯ ನಮಸ್ಕಾರದಿಂದ ಔಷಧಿ, ಮಾತ್ರೆಗಳಿಂದ ಮುಕ್ತರಾಗಲು ಸಾಧ್ಯ. ಮಕ್ಕಳಿಗೂ ಯೋಗಾಭ್ಯಾಸ ಮಾಡಿಸಬೇಕು ಎಂದರು.

ಪ್ರಪಂಚದ ಎಲ್ಲ ಜನರು ಸೂರ್ಯನನ್ನು ಆರಾಧಿಸುತ್ತಾರೆ. ಎಲ್ಲ ನಾಗಕರೀಕತೆಯಲ್ಲಿಯೂ ಸೂರ್ಯನಿಗೆ ಪ್ರಮುಖ ಸ್ಥಾನ ನೀಡಲಾಗಿದೆ. ಅಂತಹ ಸೂರ್ಯದೇವ ತನ್ನ ರಥವನ್ನು ತನ್ನ ಪಥವನ್ನು ಬದಲಿಸುವ ಪವಿತ್ರ ದಿನವಾಗಿದೆ. ಈ ದಿನ ಸೂರ್ಯನನ್ನು ಪೂಜಿಸುವುದರಿಂದ ವಿಶೇಷ ಶಕ್ತಿ, ಶಾಂತಿ, ನೆಮ್ಮದಿ ಸಿಗುತ್ತದೆ ಎಂದರು.ಮಾಘ ಮಾಸದ ಸಪ್ತಮಿಯಂದು ಸೂರ್ಯದೇವನು ತನ್ನ ರಥವನ್ನು ಉತ್ತರ ದಿಕ್ಕಿಗೆ ತಿರುಗಿಸುವ ದಿನವೇ ರಥಸಪ್ತಮಿ. ಸೂರ್ಯ ರಥದ ಏಳು ಕುದುರೆಗಳು ಏಳು ದಿನಗಳ ಸಂಕೇತ ಆಗಿದ್ದು, ಬೆಳಕಿನಲ್ಲಿರುವ ಏಳು ಬಣ್ಣಗಳು ಸಹ ಏಳು ಅಶ್ವಗಳ ಸಂಕೇತ ಆಗಿದೆ. ರಥದ 12 ಚಕ್ರಗಳು ವರ್ಷದ 12 ತಿಂಗಳು ಹಾಗು ದ್ವಾದಶ ರಾಶಿಗಳ ಸಂಕೇತವಾಗಿದೆ ಎಂದು ಹೇಳಿದರು.

ಶಿವಗಂಗಾ ಯೋಗಕೇಂದ್ರದ ನಗರದ 27 ಶಾಖೆಗಳಲ್ಲಿ 500ಕ್ಕೂ ಹೆಚ್ಚು ಶಿಬಿರಾರ್ಥಿಗಳು ಸೂರ್ಯಯಜ್ಞದಲ್ಲಿ ಪಾಲ್ಗೊಂಡಿದ್ದರು. ಯೋಗದಲ್ಲಿ ವಿಶೇಷ ಸಾಧನೆ ಮಾಡಿದ ಡಾ. ರಘುನಂದನ್, ಹರ್ಷ ಅವರಿಗೆ ಯೋಗಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.
ಡಾ. ಗಾಯತ್ರಿದೇವಿ ಸಜ್ಜನ್ ಅವರು ರಥಸಪ್ತಮಿ ಬಗ್ಗೆ ವಿಶೇಷ ಉಪನ್ಯಾಸ ನೀಡುವುದರ ಜತೆಯಲ್ಲಿ ಸೂರ್ಯಮಂತ್ರ ಹಾಗೂ ಸೂರ್ಯ ನಮಸ್ಕಾರದ ವಿಶೇಷ ಲಾಭಗಳ ಬಗ್ಗೆ ತಿಳಿಸಿದರು.
ಕಾಟನ್ ಜಗದೀಶ್, ಜಿ.ವಿಜಯ್‌ಕುಮಾರ್, ಲವಕುಮಾರ್, ವಿಜಯ ಬಾಯರ್, ಪ್ರೊ. ಎ.ಎಸ್.ಚಂದ್ರಶೇಖರ್, ಹೂವೇಗೌಡ, ಭಾರತಿ ಚಂದ್ರಶೇಖರ್, ಯೋಗಶಿಕ್ಷಕರಾದ ಹರೀಶ್, ಲಕ್ಷಿö್ಮÃ, ಯೋಗಶಿಕ್ಷಕರು ಹಾಗೂ ಯೋಗ ಶಿಕ್ಷಣಾರ್ಥಿಗಳು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…