ಶಿವಮೊಗ್ಗ: ಕಾಲೇಜ್ ಗಳಲ್ಲಿ ವಿದ್ಯಾರ್ಥಿಗಳನ್ನು ಪ್ರಚೋದನೆ ಮಾಡುವಂತಹ ಶಕ್ತಿಗಳ ಮೇಲೆ ಕ್ರಮಕೈಗೊಳ್ಳಬೇಕು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ. ಅವರು ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ, ನಿನ್ನೆಯ ಗಲಭೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.

ಇಂತಹ ಸಂದರ್ಭದಲ್ಲಿ ಅನಾವಶ್ಯಕವಾಗಿ ವಿದ್ಯಾರ್ಥಿಗಳಲ್ಲದವರು ಕಾಲೇಜ್ ಪ್ರವೇಶಿಸಿ ಗಲಭೆಗೆ ಪ್ರಚೋದನೆ ನೀಡುವುದು ಮತ್ತು ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಎಳೆಯುತ್ತಿರುವ ಕಾಲೇಜ್ ಆವರಣದಲ್ಲಿ ಗಲಭೆಗೆ ಕುಮ್ಮಕ್ಕು ನೀಡುತ್ತಿರುವ ಶಕ್ತಿಗಳನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.ಪ್ರಮುಖವಾಗಿ ನಿನ್ನೆಯ ಗಲಭೆಯಿಂದ ಮೊದಲೇ ಸಂಕಷ್ಟದಲ್ಲಿರುವ ವ್ಯಾಪಾರಸ್ಥರಿಗೆ ಪೊಲೀಸರು ಅಂಗಡಿ ಮುಚ್ಚುವಂತೆ ಸೂಚಿಸುತ್ತಿದ್ದಾರೆ. ಸೆಕ್ಷನ್ 144 ಜಾರಿಯಲ್ಲಿರುವುದರಿಂದ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಅವರು ವಿನಂತಿಸಿದರು.

ಕಾಲೇಜ್ ನಲ್ಲಿ ಸಣ್ಣಪುಟ್ಟ ಘಟನೆಗಳಾದ ಕೂಡಲೇ ಕಾಲೇಜ್ ಆಡಳಿತ ಮಂಡಳಿ ವಿಶ್ವವಿದ್ಯಾಲಯ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕು. ಹಿಂದೆ 2016 ರಲ್ಲಿ ಇದೇ ರೀತಿ ಸಹ್ಯಾದ್ರಿ ಕಾಲೇಜಿನಲ್ಲಿ ಘಟನೆಗಳಾದಾಗ ತಕ್ಷಣ ವಿವಿ ಮಟ್ಟದಲ್ಲೇ ಪರಿಸ್ಥಿತಿ ನಿಯಂತ್ರಿಸಲಾಯಿತು. ಈ ಬಾರಿ ಅನಾವಶ್ಯಕವಾಗಿ ಗಲಭೆ ಆಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಎಸ್.ಪಿ. ಲಕ್ಷ್ಮಿ ಪ್ರಸಾದ್ ಅವರು, ಸೆಕ್ಷನ್ 144 ಜಾರಿಯಲ್ಲಿದ್ದರೂ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡುವುದಿಲ್ಲ. ಸೂಕ್ಷ್ಮ ಪ್ರದೇಶಗಳಲ್ಲಿರುವ ಕೆಲವೊಂದು ಕ್ಯಾಂಟೀನ್ ಮತ್ತು ಗೂಡಂಗಡಿಗಳಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳು ಅನಾವಶ್ಯಕವಾಗಿ ಕಾಲಹರಣ ಮಾಡುವುದನ್ನು ಗಮನಿಸಿ ಅಂತಹ ಅಂಗಡಿಗಳನ್ನು ಮಾತ್ರ ಮುಚ್ಚಿಸಲಾಗಿದೆ ಎಂದರು.

ವಿದ್ಯಾರ್ಥಿಗಳು ಅನಾವಶ್ಯಕವಾಗಿ ಓಡಾಡದಂತೆ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಇವತ್ತು ಒಂದು ದಿನ ಪರಿಸ್ಥಿತಿ ಅವಲೋಕನ ಮಾಡಿ ನಾಳೆ ಬೆಳಗ್ಗೆ ಎಂದಿನಂತೆ ಜನ ಜೀವನ, ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳಲಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಪಾಲಿಕೆ ಸದಸ್ಯರಾದ ಶಾಮೀರ್ ಖಾನ್, ಆರ್.ಸಿ. ನಾಯ್ಕ್, ಪ್ರಮುಖರಾದ ಶ್ಯಾಂ ಸುಂದರ್, ಕೆ. ರಂಗನಾಥ್, ದೀಪಕ್ ಸಿಂಗ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…