ಶಿವಮೊಗ್ಗ: ವಿನೋಬನಗರದ ದೂರವಾಣಿ ಬಡಾವಣೆಯ ರೈಲ್ವೇ ಕೆಳ ಸೇತುವೆ ನಿರ್ಮಾಣಕ್ಕೆ ಇಂದು ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ಕನಕ ನಗರ, ಪಿ ಅಂಡ್ ಟಿ ಕಾಲೋನಿ, ಸೂರ್ಯ ಬಡಾವಣೆ ಈ ಭಾಗದ ಜನರಿಗೆ ಈ ರೈಲ್ವೇ ಕೆಳ ಸೇತುವೆಯಿಂದ ಬಹಳ ಅನುಕೂಲವಾಗಲಿದೆ. ಸಂಸದರ ನಿರಂತರ ಪ್ರಯತ್ನದಿಂದ ಈ ಕೆಲಸ ಆಗಿದೆ. ಪ್ರತಿ ಬಾರಿ ದೆಹಲಿಗೆ ಹೋದಾಗ ಏನಾದರೂ ಒಂದು ಹೊಸ ಯೋಜನೆಯನ್ನು ಜಿಲ್ಲೆಗೆ ತಂದು ಅಭಿವೃದ್ಧಿಯ ಹರಿಕಾರ ಎಂದೆನಿಸಿಕೊಂಡಿದ್ದಾರೆ. ರೈಲ್ವೇ, ವಿಮಾನ ನಿಲ್ದಾಣ, ರಸ್ತೆಗಳ ಅಭಿವೃದ್ಧಿ, ರೈಲ್ವೇ ಸೇತುವೆಗಳು ಮೊದಲಾದ ಯೋಜನೆಗಳಿಗೆ ಅನುದಾನ ತಂದಿದ್ದಾರೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ರೈಲ್ವೇ ಲೆವೆಲ್ ಕ್ರಾಸ್ ಬಂದ್ ಮಾಡಿದ್ದರಿಂದ ಈ ಭಾಗದ ಜನರ ಓಡಾಟಕ್ಕೆ ತೊಂದರೆಯಾಗುತ್ತಿತ್ತು. ಕೇಂದ್ರ ರೈಲ್ವೇ ಸಚಿವ ಮನವೊಲಿಸಿ ಮೇಲ್ಸೇತುವೆ ಮತ್ತು ಕೆಳ ಸೇತುವೆ ಹಾಗೂ ವರ್ತುಲ ರಸ್ತೆಗೆ 150 ಕೋಟಿ ಅನುದಾನ ನೀಡಲಾಗಿದೆ ಎಂದರು. ಭದ್ರಾವತಿ ಕಡದಕಟ್ಟೆ, ವಿದ್ಯಾನಗರ ಫ್ಲೈಓವರ್, ಸವಳಂಗ ರಸ್ತೆಯಲ್ಲಿ ಒಂದು ಓವರ್ ಬ್ರಿಡ್ಜ್, ಒಂದು ಅಂಡರ್ ಬ್ರಿಡ್ಜ್, ಕಾಶಿಪುರದಲ್ಲಿ ರಸ್ತೆ ಕಾಮಗಾರಿಗೆ ಅನುದಾನ ನೀಡಲಾಗಿದೆ. ಏಪ್ರಿಲ್ ಅಂತ್ಯದೊಳಗೆ ಈ ಕೆಳ ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಈ ಕೆಳ ಸೇತುವೆ ನಿರ್ಮಾಣ ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚನೆ ನೀಡಿದ್ದು, ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗಿದೆ.

ಯಾವುದೇ ಕಾರಣಕ್ಕೂ ಕೆಳ ಸೇತುವೆಯಲ್ಲಿ ನೀರು ಪ್ರವೇಶಿಸಿ ನಿಲ್ಲದಂತೆ ಅತ್ಯುತ್ತಮ ಕಾಮಗಾರಿಗೆ ಸೂಚಿಸಲಾಗಿದೆ ಎಂದು ಹೇಳಿದರು.ವಿಮಾನ ನಿಲ್ದಾಣ ಪೂರ್ಣಗೊಂಡಲ್ಲಿ ಇಡೀ ಮಧ್ಯ ಕರ್ನಾಟಕಕ್ಕೆ ಅನುಕೂಲವಾಗಲಿದೆ. 3250 ಮೀಟರ್ ಉದ್ದದ ರನ್ ವೇ ಇರುವ ರಾಜ್ಯದ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಶಿವಮೊಗ್ಗ 10 ನೇ ಸ್ಥಾನದಲ್ಲಿದೆ ಎಂದರು.ಈ ಸಂದರ್ಭದಲ್ಲಿ ಎಸ್. ದತ್ತಾತ್ರಿ, ಶಂಕರ್ ಗನ್ನಿ, ರಾಜಶೇಖರ್, ಜಗದೀಶ್, ಪಾಲಿಕೆ ಸದಸ್ಯೆ ಆಶಾ ಚಂದ್ರಪ್ಪ, ಪ್ರಭು, ರೈಲ್ವೇ ಅಧಿಕಾರಿ ವಿನೋದ್, ಬಳ್ಳೆಕೆರೆ ಸಂತೋಷ್, ಹನುಮಂತಪ್ಪ, ನಿವಾಸಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…