ಶಿವಮೊಗ್ಗ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಂದು ವೇಳೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ತಾಲಿಬಾನ್ ಸರ್ಕಾರ ಬಂದಂತೆ. ಈ ಬಗ್ಗೆ ಜನರು ಜಾಗೃತರಾಗಬೇಕೆಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇಂದು ಸೀಗೆಹಟ್ಟಿಯ ಹರ್ಷ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ 5 ಲಕ್ಷ ರೂ. ಆರ್ಥಿಕ ನೆರವು ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಯುವಕ ಹರ್ಷ ಹತ್ಯೆಯಾಗಿ ಒಂದು ವಾರ ಕಳೆಯುತ್ತಾ ಬಂದರೂ ಕಾಂಗ್ರೆಸ್ ನಾಯಕರಿಗೆ ಆತನ ಕುಟುಂಬಕ್ಕೆ ಸಾಂತ್ವನ ಹೇಳಲು ಸಮಯವಿಲ್ಲದಂತಾಗಿದೆ. ಬರೀ ರಾಜಕೀಯ ದೃಷ್ಠಿಕೋನದಿಂದ ಒಂದು ವರ್ಗವನ್ನು ಓಲೈಸುವ ಕಾಂಗ್ರೆಸ್ ನಡವಳಿಕೆ ಖಂಡನೀಯವಾಗಿದೆ. ಆದರೆ, ಇದೆಲ್ಲವನ್ನೂ ಹಿಂದೂ ಸಮಾಜ ಗಮನಿಸುತ್ತಿದೆ.
ಕೋಮುವಾದಕ್ಕೆ ಬಲಿಯಾದ ಹಿಂದೂ ಯುವಕರ ರಕ್ಷಣೆಗೆ ನಾವೆಲ್ಲಾ ಸದಾ ಬೆಂಗಾವಲಾಗಿ ನಿಲ್ಲುತ್ತೇವೆ ಎಂದು ಹೇಳಿದರು.ಒಳ್ಳೆಯ ಕಾರ್ಯಕರ್ತ, ಕ್ರಿಯಾಶೀಲ, ಯುವಕರಿಗೆ ಮಾದರಿಯಾಗಿದ್ದ ಹರ್ಷ ಮತಾಂಧರ ಧರ್ಮಾಂಧತೆಗೆ ತುತ್ತಾಗಿದ್ದಾರೆ. ಅವರು ಕುಟುಂಬದವರಿಗೆ ಸಾಂತ್ವನ ಹೇಳಿದ್ದು, ಸಮಸ್ತ ಹಿಂದೂ ಬಾಂಧವರು ಅವರೊಂದಿಗೆ ಇದ್ದೇವೆ ಎಂದು ತಿಳಿಸಿದ್ದೇನೆ ಎಂದರು.ಹರ್ಷನ ಹತ್ಯೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು. ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವುದನ್ನು ನಿಲ್ಲಿಸಲು ಸರ್ಕಾರ ಕಾಯ್ದೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.