ಶಿವಮೊಗ್ಗ: ಡಾ.ಪಂ. ಪುಟ್ಟರಾಜ ಗವಾಯಿಗಳವರು ವಿಕಲಚೇತನರಲ್ಲಿ ವಿಶ್ವಾಸವನ್ನು ತುಂಬಿ ಸಂಗೀತದ ಮೂಲಕವೇ ಪ್ರಪಂಚವೇ ಗುರುತಿಸುವಂತಹ ಕೆಲಸ ಮಾಡಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಇಂದು ಸಾಗರ ರಸ್ತೆಯ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಮ್ಮಿಕೊಂಡಿದ್ದ ಗಾನಯೋಗಿ, ಶಿವಯೋಗಿ ಭೂಲೋಕದ ಭಗವಂತ, ತ್ರಿಭಾಷಾ ಕವಿ, ಅಖಿಲ ವಾದ್ಯ ಕಂಠೀರವ, ಪದ್ಮಭೂಷಣ, ಸಂಗೀತದ ಜಗದ್ಗುರು ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 108 ನೇ ಜನ್ಮದಿನದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕೆಲವರಿಗೆ ಒಪ್ಪುತ್ತೋ ಇಲ್ಲವೋ ಹೆಸರಿನ ಮುಂದೆ ನೂರಾರು ಪದವಿಗಳನ್ನು ಹಾಕುತ್ತಾರೆ. ಆದರೆ, ಗವಾಯಿಗಳು ಆ ಎಲ್ಲಾ ಪ್ರಶಸ್ತಿಗಳನ್ನು ಮೀರಿದವರು. ಮನುಷ್ಯತ್ವ ಇದ್ದು ನಾವೆಲ್ಲರೂ ಬದುಕುತ್ತಿದ್ದೇವಾ ಎನ್ನುವ ಪ್ರಶ್ನೆ ಕೆಲವೊಮ್ಮೆ ಮೂಡಿ ಬರುತ್ತದೆ.

ಏಕೆಂದರೆ, ದೇವರು ನಮಗೆ ಕಣ್ಣು ಕೊಟ್ಟರೂ ಒಳ್ಳೆಯದನ್ನು ನೋಡುವುದಿಲ್ಲ. ಕೈಕಾಲು ಇದ್ದರೂ ಒಳ್ಳೆಯ ಕೆಲಸ ಮಾಡುವುದಿಲ್ಲ. ಆದರೆ, ಕಣ್ಣಿಲ್ಲದಿದ್ದರೂ, ಒಂದಿನಿತು ವ್ಯಥೆ ಪಡದೇ ಸಂಗೀತದ ಸಾಧನೆ ಮೂಲಕ ಇಡೀ ಪ್ರಪಂಚ ಅವರನ್ನು ನೋಡುವ ಹಾಗೆ ಮಾಡಿದರು. ವಿಕಲಚೇತನರಲ್ಲಿ ಆತ್ಮವಿಶ್ವಾಸ ತುಂಬಿ ಸಂಗೀತ ಕಲಿಸಿ ಶಿಷ್ಯ ಪರಂಪರೆ ಮೂಲಕ ಶಾಶ್ವತವಾಗಿ ಸಂಗೀತ ಉಳಿಸುವಂತೆ ಮಾಡಿದರು ಎಂದು ಹೇಳಿದರು. ಒತ್ತಡ ಮತ್ತು ಸಂಕುಚಿತ ಮನೋಭಾವನೆಯನ್ನು ಸಂಗೀತದ ಮೂಲಕ ದೂರ ಮಾಡಬಹುದು. ಆ ಕೆಲಸವನ್ನು ಗವಾಯಿಗಳು ಮಾಡಿದ್ದಾರೆ. ಈಗಾಗಲೇ ವೀರೇಶ್ವರ ಪುಣ್ಯಾಶ್ರಮಕ್ಕೆ ಸರ್ಕಾರ ಅನುದಾನ ನೀಡಿದೆ. ಮೂರನೇ ಅಂತಸ್ತಿನ ಕಾಮಗಾರಿಗೂ ಕೂಡ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದಾಗ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಲು ಒತ್ತಾಯಿಸುವುದಾಗಿ ತಿಳಿಸಿದರು.

ಪುಟ್ಟರಾಜ ಗವಾಯಿಗಳ ಸಾಮಾಜಿ ಯೋಚನೆ ಮತ್ತು ಯೋಜನೆಗಳನ್ನು ಸರಿ ದಿಕ್ಕಿನಲ್ಲಿ ಒಯ್ದಾಗ ಮಾತ್ರ ಅವರ ಜನ್ಮದಿನಕ್ಕೆ ಸಾರ್ಥವಾದ ಕೊಡುಗೆ ನೀಡಿದಂತಾಗುತ್ತದೆ ಎಂದರು.ಶಾಸಕ ಎಸ್. ರುದ್ರೇಗೌಡ ಮಾತನಾಡಿ, ಗವಾಯಿಗಳ ಸಾಧನೆ ಅಸಾಧಾರಣವಾದುದು. ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅವರು ಶಿಷ್ಯ ಪರಂಪರೆಯನ್ನು ಬೆಳೆಸಿ ಸಂಗೀತಕ್ಕೆ ಶಾಶ್ವತ ಕೊಡುಗೆ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಮಠ, ಮಾನ್ಯಗಳಿಗೆ ಮತ್ತು ಕಲಾ ಕ್ಷೇತ್ರಗಳಿಗೆ ಅಪಾರ ಅನುದಾನದ ಮೂಲಕ ಸಹಕಾರ ನೀಡಿದ್ದು ಅವಿಸ್ಮರಣೀಯ. ಸಂಸದ ರಾಘವೇಂದ್ರ ಕೂಡ ಆ ಕೆಲಸ ಮುಂದುವರೆಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಕಾಯಕಯೋಗಿ ಚನ್ನಬಸಪ್ಪ, ಟಿ.ಕೆ. ಕರಿಬಸಪ್ಪ, ಹೆಚ್. ಸೋಮಶೇಖರ್, ಶ್ರೀಮತಿ ಲೀಲಾಕ್ಷಮ್ಮ ನಾಗಭೂಷಣಸ್ವಾಮಿ ಶಿವಮೊಗ್ಗ ಇವರಿಗೆ ಶ್ರೀ ಗುರುಗಾನಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸುಜಾತ ಬಸವರಾಜ್ ಅವರ ಹಾದಿ ಮಧ್ಯದ ತಲ್ಲಣ ಚೊಚ್ಚಲ ಕೃತಿ ಬಿಡುಗಡೆಗೊಳಿಸಲಾಯಿತು. ಪಂ. ಪುಟ್ಟರಾಜ ಗವಾಯಿಗಳ ಮಾರ್ಷನ್ ಅಕಾಡೆಮಿ ವತಿಯಿಂದ ಕರಾಟೆ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಬೆಲ್ಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮಿಜಿ ಸಾನೀಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರುದ್ರಮುನಿ ಎನ್. ಸಜ್ಜನ್, ಎಸ್. ಕುಮಾರ್ ಭಾಗವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪಂ. ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…