ಶಿವಮೊಗ್ಗ: ನಮ್ಮ ಪರಂಪರೆಯಲ್ಲಿರುವ ಸಂಸ್ಕೃತಿ, ಕಲೆ, ಆಚಾರ, ವಿಚಾರಗಳನ್ನು ಜೀವಂತವಾಗಿರಿಸುವುದಕ್ಕೆ ವಚನ ಕಂಠಪಾಠ ಸ್ಪರ್ಧೆ, ವಚನ ಗಾಯನ ಸ್ಪರ್ಧೆ, ರಂಗೋಲಿ ಸ್ಪರ್ಧೆ ಹಾಗೂ ಭಜನಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಅವರು ಇಂದು ಶ್ರೀ ಬೆಕ್ಕಿನ ಕಲ್ಮಠದ ಗುರುಬಸವ ಭವನದಲ್ಲಿ ಪರಮ ತಪಸ್ವಿ ಲಿಂ. ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ 110 ನೇ ಪುಣರ್ಯ ಸ್ಮರಣೋತ್ಸವ, ಶರಣ ಸಾಹಿತ್ಯ ಸಮ್ಮೇಳನ ಮತ್ತು ಭಾವೈಕ್ಯ ಸಮ್ಮೇಳನದ ಹಾಗೂ 509 ನೇ ಮಾಸಿಕ ಶಿವಾನುಭವ ಗೋಷ್ಠಿ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಕೋವಿಡ್ ನಂತರ ಅಪರೂಪದ ಅರ್ಥಪೂರ್ಣ ಸಮಾರಂಭ ಇದಾಗಿದೆ. ಟಿವಿಯಲ್ಲಿ ಬರುವವರೇ ಬಹಳ ದೊಡ್ಡ ಕಲಾವಿದರೆಂಬ ಭ್ರಮೆಯಲ್ಲಿ ನಾವಿದ್ದೇವೆ.

ಆದರೆ, ನಮ್ಮ ಪೂರ್ವಜರು ದಿನನಿತ್ಯದ ಕೆಲಸ ಕಾರ್ಯಗಳ ಜೊತೆಗೆ ನಮ್ಮ ಸಂಸ್ಕೃತಿಯ ಪ್ರತಿರೂಪವಾಗಿ ಅನೇಕ ಸಾಧನೆಗಳನ್ನು ತೆರೆ ಮರೆಯಲ್ಲಿ ಮಾಡಿದ್ದಾರೆ. ತೆರೆಮರೆಯಲ್ಲಿ ಅನೇಕ ಕಲಾವಿದರು ನಮ್ಮೊಂದಿಗಿದ್ದಾರೆ. ಇಂತಹ ಸ್ಪರ್ಧೆಗಳಿಂದ ಅವರು ಬೆಳಕಿಗೆ ಬರುತ್ತಾರೆ ಎಂದರು.ಸಮಸ್ಯೆಗಳಿರುವುದು ನಮ್ಮ ಮನೆಯ ಟಿವಿಯಲ್ಲಿ. ಒಂದು ದಿನ ಟಿವಿ ಕೆಟ್ಟು ಹೋದರೆ ಅದುವರೆಗೆ ಕೆಟ್ಟು ಹೋಗಿದ್ದ ಮನೆಯ ವಾತಾವರಣ ನೆಟ್ಟಗಾಗುತ್ತದೆ. ರಂಗೋಲಿ, ಭಜನೆ ಮತ್ತು ವಚನಗಳ ಕಂಠಪಾಠ ನಮ್ಮ ಆತ್ಮಬಲ ಹೆಚ್ಚಿಸುತ್ತದೆ. ಹಿಂದಿನವರು ಅನಕ್ಷರಸ್ಥರಾದರೂ ಆತ್ಮಬಲವುಳ್ಳವರಾಗಿದ್ದರು. ಆದರೆ, ಈಗಿನವರೂ ದೇವರು ಪ್ರತ್ಯಕ್ಷರಾಗಿ ನಿಂತರೂ ಹೌದೋ, ಅಲ್ಲವೋ ಎಂದು ಪರೀಕ್ಷೆ ಮಾಡಿ ಆಮೇಲೆ ಬೇಡಿಕೆಯ ಪಟ್ಟಿಯನ್ನು ದೇವರ ಮುಂದಿಡುತ್ತಾರೆ ಎಂದರು.

ಹಳೆಯ ಜನ ಕಾಯಕಕ್ಕೆ ಪ್ರಾಧಾನ್ಯತೆ ನೀಡುತ್ತಿದ್ದರು. ದೇವರು ಪ್ರತ್ಯಕ್ಷರಾದರೆ ಕಾಯಕ ಮಾಡುವ ಶಕ್ತಿ ನೀಡು ಎಂದು ಬೇಡುತ್ತಿದ್ದರು. ನಿಷ್ಕಲ್ಮಶ ಮನಸ್ಸಿನಿಂದ ಮತ್ತು ತನ್ಮಯತೆಯಿಂದ ಕಾಯಕ ಮಾಡಿದರೆ ಶಿವನ ಒಲವು ನಿಶ್ಚಿತ ಎಂದು ನಂಬಿದ್ದರು. ಯಾರಿಗೆ ಆದರೂ ಕಷ್ಟದ ಸಂದರ್ಭದಲ್ಲಿ ವಚನಗಳನ್ನು ನೆನೆದರೆ ಆತ್ಮಸ್ಥೈರ್ಯ ಲಭಿಸುತ್ತದೆ. ವಚನ ಮತ್ತು ಭಜನೆಗಳಿಂದ ಮಕ್ಕಳ ಮೇಲೆ ಅಪಾರ ಪ್ರಭಾವ ಉಂಟಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶ್ರೀ ಕಲ್ಮಠ ಗುತ್ತಲದ ಪ್ರಭು ಮಹಾಸ್ವಾಮಿಗಳು ಉಪಸ್ಥಿತರಿದ್ದರು. ಎನ್.ಜೆ. ರಾಜಶೇಖರ್, ಮಹಾಲಿಂಗಯ್ಯಶಾಸ್ತ್ರಿ, ಶಕುಂತಲಾ ಜಗದೀಶ್, ಸುಜಯಾ ಪ್ರಸಾದ್, ಗಣೇಶ್ ಕೆಂಚನಾಳ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟ…