ಶಿವಮೊಗ್ಗ: ಬಜರಂಗದಳದ ಯುವ ಕಾರ್ಯಕರ್ತ ಹರ್ಷ ಅವರ ಬರ್ಬರ ಹತ್ಯೆ ಮಾಡಿದ ಎಲ್ಲಾ ಆರೋಪಿಗಳನ್ನು ಹಾಗೂ ಅವರ ಹಿಂದಿರುವ ವ್ಯಕ್ತಿಗಳನ್ನು ಶೀಘ್ರ ಬಂಧಿಸಿ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ವಿಶ್ವಹಿಂದೂ ಪರಿಷತ್ ಬಜರಂಗದಳ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಹರ್ಷನ ಕೊಲೆಗೆ ಸಂಚು ಮಾಡಿರುವ ಮತ್ತು ಪ್ರೇರೇಪಿಸಿರುವ ಪಿಎಫ್ಐ ಹಾಗೂ ಎಸ್.ಡಿ.ಪಿ.ಐ. ಸಂಘಟನೆಗಳನ್ನು ನಿಷೇಧಿಸಿ ದೇಶ ವಿರೋಧಿ ಮಾನಸಿಕತೆಯ ಸಮಾಜಘಾತುಕ ಶಕ್ತಿಗಳಿಗೆ ನೈತಿಕ ಬೆಂಬಲ ಕೊಡುತ್ತಿರುವ ಸರ್ಕಾರದ ನೀತಿ ಯೋಜನೆಗಳನ್ನು ಪ್ರತಿಭಟನಾಕಾರರು ಖಂಡಿಸಿದರು.ಹಿಂದೂ ಹರ್ಷನ ಕೊಲೆ ಕೇವಲ ಪ್ರತ್ಯೇಕ ಕೊಲೆ ಆಗಿರದೇ ಹಿಂದೂ ಸಮಾಜವನ್ನು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಭಯಭೀತಗೊಳಿಸಲು ಪಿಎಫ್ಐ ಹಾಗೂ ಎಸ್.ಡಿ.ಪಿ.ಐ. ಸಂಘಟನೆಗಳ ಸಂಚಿನ ಸರಣಿ ಕೊಲೆಗಳ ಒಂದು ಭಾಗವಾಗಿದೆ. ಹಾಗಾಗಿ ಈ ಕೊಲೆಗಡುಕರ ಮೇಲೆ ಯುಎಪಿಎ(ಉಪಾ) ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಇದನ್ನು ಒಂದು ಭಯೋತ್ಪಾದನಾ ಕೃತ್ಯವೆಂಬಂತೆ ಪರಿಗಣಿಸಬೇಕೆಂದು ಆಗ್ರಹಿಸಿದರು.
ಹಿಂದೂ ಕಾರ್ಯಕರ್ತರ ಹತ್ಯೆಯ ಎಲ್ಲಾ ಮೊಕದ್ದಮೆಗಳನ್ನು ಗೃಹ ಇಲಾಖೆಯ ಆಂತರಿಕ ತನಿಖಾ ಸಂಸ್ಥೆ ವ್ಯಾಪ್ತಿಗೆ ತಂದು ವಿಚಾರಣೆ ನಡೆಸಬೇಕು. ಇಂತಹ ಪೈಶಾಚಿಕ ಕೃತ್ಯವನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ಅಂತಹ ಕ್ರೂರಿಗಳಿಗೆ ಕಾನೂನಾತ್ಮಕವಾಗಿ ರಕ್ಷಣೆ ಕೊಡಿಸುತ್ತಿರುವ ಅವಕಾಶವಾದಿ ರಾಜಕಾರಣಿಗಳ ಮಾನಸಿಕತೆಯನ್ನು ವಿರೋಧಿಸಿದರು.ನಗರದ ಅಮಾಯಕ ನಿರಪರಾಧಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ಹಾಕುತ್ತಿರುವ ಸುಳ್ಳು ಮೊಕದ್ದಮೆ ಹಿಂಪಡೆಯಬೇಕು. ಶಿವಮೊಗ್ಗದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಳಿಸುವಂತೆ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಜನರ ಓಡಾಟ ಇರುವಾಗಲೇ ಸಾರ್ವಜನಿಕ ಸ್ಥಳದಲ್ಲಿ ಕ್ರೂರವಾಗಿ 27 ವರ್ಷದ ಯುವಕನನ್ನು ಬರ್ಬರ ಹತ್ಯೆ ಮಾಡುವಷ್ಟು ಧೈರ್ಯ ಅನ್ಯ ಕೋಮಿನ ಯುವಕರಿಗೆ ಬಂದಿದೆ ಎಂದರೆ ಶಿವಮೊಗ್ಗದ ಕಾನೂನು ಸುವ್ಯವಸ್ಥೆ ಎಲ್ಲಿಗೆ ಬಂದು ನಿಂತಿದೆ.ಹಿಂದೂ ಕಾರ್ಯಕರ್ತರ ಹತ್ಯೆ ಆರೋಪಿಗಳನ್ನು ಬಂಧಿಸಿ, ಪಿಎಫ್ಐ ಹಾಗೂ ಎಸ್.ಡಿ.ಪಿ.ಐ. ಸಂಘಟನೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜೆ.ಆರ್. ವಾಸುದೇವ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ರಮೇಶ್ ಬಾಬು, ಎಂ.ಬಿ. ಭಾನುಪ್ರಕಾಶ್, ಆರ್.ಕೆ. ಸಿದ್ಧರಾಮಣ್ಣ, ಪವಿತ್ರಾ ರಾಮಯ್ಯ, ಜಗದೀಶ್, ದೀನದಯಾಳ್, ಕೆ.ಇ. ಕಾಂತೇಶ್, ಚನ್ನಬಸಪ್ಪ, ಸುನಿತಾ ಅಣ್ಣಪ್ಪ, ಮೋಹನ್ ರೆಡ್ಡಿ, ನಾರಾಯಣ ಜಿ. ವರ್ಣೇಕರ್, ರಾಜೇಶ್ ಗೌಡ, ಸಚಿನ್ ರಾಯ್ಕರ್, ಸತೀಶ್ ಮಂಚೆಮನೆ, ಸುಧಾಕರ್ ಎಸ್.ಆರ್., ಬಜರಂಗದಳದ ನಗರ ಸಂಚಾಲಕ ಅಂಕುಶ್, ಮಾಲತೇಶ್, ಶಿವರಾಜ್, ವಿನ್ಸೆಂಟ್, ಮೊದಲಾದವರಿದ್ದರು.