ಶಿವಮೊಗ್ಗ: ಮಾ. 22 ರಿಂದ 26 ರವರೆಗೆ ನಡೆಯುವ ನಗರದ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ ಇಂದು ನಗರದ ಗಾಂಧಿ ಬಜಾರ್ ನಲ್ಲಿ ಚಪ್ಪರದ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕೋಟೆ ಮಾರಿಕಾಂಬ ಸಮಿತಿಯ ಪ್ರಮುಖರಾದ ಎಸ್.ಕೆ. ಮರಿಯಪ್ಪ, ಉಮಾಪತಿ, ಮಂಜುನಾಥ್, ಚಂದ್ರಶೇಖರ್, ಸುನಿಲ್, ಪ್ರಭಾಕರ್, ರಾಮು, ರಘುವೀರ್ ಸಿಂಗ್, ಬಾಬು ಮೊದಲಾದವರಿದ್ದರು.ಇದರಿಂದ ಜಾತ್ರೆಗೆ ವಿದ್ಯುಕ್ತ ಚಾಲನೆ ಇಂದಿನಿಂದ ದೊರೆತಂತಾಗಿದೆ. ಮುದವೆಯ ವೇಳೆ ಹೇಗೆ ಮದುಮಗಳನ್ನು ಅಲಂಕರಿಸಿ ಹಸೆಮಣೆಗೇರಿಸಲಾಗುವುದೋ ಅದೇ ರೀತಿ ಗಾಂಧಿ ಬಜಾರ್ ನಲ್ಲಿ ತವರುಮನೆ ಆತಿಥ್ಯ ನೀಡುವುದರೊಂದಿಗೆ ಜಾತ್ರೆಗೆ ಕಳೆ ಬರಲಿದೆ.
ಫೆಬ್ರವರಿಯಲ್ಲೇ ಜಾತ್ರೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊರೋನಾ ಹೆಚ್ಚಾಗಿದ್ದ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು. ಮಾ. 22 ರಂದು ಬೆಳಗ್ಗೆ 7 ಗಂಟೆಗೆ ಗಾಂಧಿ ಬಜಾರ್ ನಲ್ಲಿ ಅಮ್ಮನವರ ಪೂಜೆ ಆರಂಭವಾಗಲಿದೆ. ಅಂದು ರಾತ್ರಿ ಗಾಂಧಿ ಬಜಾರ್ ನಿಂದ ಉತ್ಸವದೊಂದಿಗೆ ಮಾರಿಕಾಂಬ ಗದ್ದುಗೆ ಪ್ರವೇಶಿಸಲಾಗುವುದು. ಮಾ. 23 ರಿಂದ 26 ರ ವರೆಗೆ ಪ್ರತಿದಿನ ಬೆಳಗ್ಗೆ 7 ರಿಂದ ಹರಕೆ, ಪೂಜೆ, ಪ್ರಸಾದ ವಿನಿಯೋಗ ನಡೆಯಲಿದ್ದು, 25 ರ ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ, 26 ರಂದು ರಾತ್ರಿ ಅಮ್ಮನವರ ರಾಜಬೀದಿ ಉತ್ಸವದೊಂದಿಗೆ ವನಪ್ರವೇಶ ನಡೆದು ಜಾತ್ರೆ ಮುಕ್ತಾಯವಾಗಲಿದೆ.