ಶಂಕರಘಟ್ಟ, ಮಾ. 16: ತತ್ವಪದ ಕಲಾಪ್ರಕಾರವು ವೃತ್ತಿಪರ ಕಲೆಗಾರರಿಂದ ಕೂಡಿದ ಸಾಹಿತ್ಯವಲ್ಲ. ಅದು ಸಾಮಾನ್ಯರು, ಕೃಷಿಕರು, ದುಡಿಯುವ ವರ್ಗಗಳ ಕಲೆ ಎಂದು ಹಂಪಿಯ ಕನ್ನಡ ವಿವಿಯ ಪ್ರಾಧ್ಯಾಪಕ ಡಾ. ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ವಿವಿಯ ಕನ್ನಡ ಭಾರತಿ ವಿಭಾಗದ ವತಿಯಿಂದ ಬಸವ ಸಭಾಭವನದಲ್ಲಿ ವಿಶೇಷ ಉಪನ್ಯಾಸ ಮಾಲೆಯನ್ನು ಆಯೋಜಿಸಿದ್ದು, ಬುಧವಾರ ಬೆಳಿಗ್ಗೆ ಅವರು ‘ಅನುಭಾವ ಪರಂಪರೆ ಮತ್ತು ತತ್ವಪದಕಾರರು’ ವಿಷಯದ ಮೇಲೆ ಉಪನ್ಯಾಸ ನೀಡಿದರು.

ಅನುಭಾವ ಪರಂಪರೆಯಲ್ಲಿ ಅರಳಿದ ಮುಖ್ಯ ಸಾಹಿತ್ಯ ಪ್ರಕಾರಗಳಲ್ಲಿ ತತ್ವಪದವು ಬಹಳ ಪ್ರಮುಖವಾದುದು. ಇಲ್ಲಿ ಠಾಕುಟೀಕಾದ ಕಲಾವಿದರಿರುವುದಿಲ್ಲ. ಹೊಲಗದ್ದೆಗಳಲ್ಲಿ ಕೂಲಿ ಮಾಡುತ್ತ ಬದುಕಿದವರು ಜೊತೆಗೆ ತತ್ವಪದ ಕಲೆಯನ್ನು ಪ್ರೀತಿಸಿ ಬೆಳೆಸಿದವರು. ಕರ್ನಾಟಕದಲ್ಲಿ ವಿಶೇಷವಾಗಿ ಮಹಿಳೆಯರು, ಮುಸ್ಲಿಂಮರು, ದಲಿತರು ಈ ಕಲಾಪ್ರಕಾರವನ್ನು ಮುನ್ನಡೆಸುತ್ತಿದ್ದಾರೆ ಎಂದರು.

ತತ್ವಪದ ಕಲೆ ಮತ್ತು ಕಲಾಕಾರರಲ್ಲಿ ಮಾನವೀಯ ಮೌಲ್ಯಗಳು, ಕೋಮುಸೌಹಾರ್ದ ಗುಣಗಳು ಯತೇಚ್ಛವಾಗಿರುವ ಕಾರಣ ಜೊತೆಗೆ ಹಾಡುತ್ತಾರೆ, ಜೊತೆಗೆ ಉಣ್ಣುತ್ತಾರೆ. ಕಲೆ, ಸಾಹಿತ್ಯವನ್ನು ಬಳಸಿ ಅಧಿಕಾರದ ಸ್ಥಾನಗಳನ್ನು ಹಿಡಿಯಬಯಸುವವರಲ್ಲ. ನಿರ್ದಿಷ್ಟ ವಸ್ತ್ರಸಂಹಿತೆಯು ಇಲ್ಲದ ಸಾಮಾನ್ಯರಲ್ಲಿ ಸಾಮಾನ್ಯರ, ಬಡವರ, ದಮನಿತರ ಕಲೆಯೇ ತತ್ವಪದ. ಅವುಗಳಲ್ಲಿ ಕೃಷಿ, ಹೈನುಗಾರಿಕೆ, ದೇವಿ ಪೂಜೆ, ಚರ್ಮೋದ್ಯಮಗಳ ಕುರಿತ ವೃತ್ತಾಕಾರದ ಸುಸ್ಥಿರ ಬದುಕಿನ ವಿಧಾನಗಳ ಕುರಿತು ಸೌಮ್ಯ ಉಪದೇಶಗಳಿವೆ. ಆಧುನಿಕ ದಿನದ ಕೃಷಿ ಕಾನೂನುಗಳು, ಗೋಹತ್ಯೆ ನಿಷೇಧಗಳಂತಹ ನೀತಿಗಳು ಈ ಬದುಕಿನ ವಿಧಾನಕ್ಕೆ ಪೆಟ್ಟು ನೀಡುತ್ತಿವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಕನ್ನಡ ಭಾರತಿಯ ನಿರ್ದೇಶಕ ಡಾ. ಪ್ರಶಾಂತ್ ನಾಯಕ್, ಪ್ರೊ. ಶಿವಾನಂದ ಕೆಳಗಿನಮನಿ, ಉಪನ್ಯಾಸ ಮಾಲೆಯ ಸಂಚಾಲಕ ಡಾ. ನೆಲ್ಲಿಕಟ್ಟೆ ಸಿದ್ಧೇಶ್ ಸೇರಿದಂತೆ ವಿವಿಧ ಗಣ್ಯರು ಮಾತನಾಡಿದರು. ಉಪನ್ಯಾಸ ಮಾಲೆಯಲ್ಲಿ ಕನ್ನಡ ವಿವಿಯ ಡಾ. ಎ. ಎಸ್. ಪ್ರಭಾಕರ್, ಡಾ. ಕೆ. ಸಿ. ಶಿವಾರೆಡ್ಡಿ, ಡಾ. ಬಸವರಾಜ್ ಕಲ್ಗುಡಿ ಅವರು ವಿಚಾರಗಳನ್ನು ಮಂಡಿಸಲಿದ್ದಾರೆ.