ಫ್ರೀಡಂ ಪಾರ್ಕ್ ನಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಹೆಚ್ಚಿಸಲು ಮನವಿ ಶಿವಮೊಗ್ಗ: ಫ್ರೀಡಂ ಪಾರ್ಕ್ ನಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಹೆಚ್ಚಿಸಲು ಶಿವಮೊಗ್ಗ ನಗರದ ಡಿವೈಎಸ್ಪಿ ಅವರಿಗೆ ರಾಜ್ಯ ನಾಗರೀಕರ ರಕ್ಷಣಾ ಸಮಿತಿ ವತಿಯಿಂದ ಮನವಿ ಮಾಡಲಾಯಿತು.
ನಗರದ ಹೃದಯ ಭಾಗದಲ್ಲಿರುವ ಫ್ರೀಡಂ ಪಾರ್ಕ್ ನಲ್ಲಿ ಸಾರ್ವಜನಿಕರು ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಬರುವರು ಅದರಲ್ಲೂ ಸಾಕಷ್ಟು ಮಹಿಳೆಯರು ಸಹ ವಾಕಿಂಗ್ ಮಾಡಲು ಪ್ರತಿನಿತ್ಯ ಬರುವುದು ಸಹಜವಾಗಿದೆ.ಆದರೆ, ಫ್ರೀಡಂ ಪಾರ್ಕ್ ಇರುವ ಸ್ಥಳವು 3 ಭಾಗಗಳಾಗಿ ವಿಭಜನೆ ಆಗಿದ್ದು, 1ಭಾಗವು ಮಹಾನಗರ ಪಾಲಿಕೆಗೆ ಸಂಬಂಧಪಟ್ಟಿದು ಮತ್ತೊಂದು ಭಾಗವು ಕರ್ನಾಟಕ ರಾಜ್ಯ ಕೈಗಾರಿಕಾ ರಕ್ಷಣಾ ಪಡೆಗೆ ಸಂಬಂಧಪಟ್ಟಿದ್ದು, ಮತ್ತೊಂದು ಭಾಗದಲ್ಲಿ ಪೊಲೀಸ್ ಇಲಾಖೆಯ ವಸತಿಗೃಹಗಳು ಇದೆ.
ಆದರೆ, ಹಳೆಜೈಲಿನ ಹಿಂಭಾಗದ ಸ್ಥಳವಾದ ತೆಂಗಿನ ತೋಟವನ್ನು ಸದ್ಯಕ್ಕೆ ಯಾರೂ ಗಮನಿಸುವವರು ಇಲ್ಲವಾಗಿದೆ.ಈ ಭಾಗವು ಗಾಂಜಾ ವ್ಯಸನಿಗಳಿಗೆ, ಮದ್ಯವ್ಯಸನಿಗಳಿಗೆ ಮತ್ತು ಅಕ್ರಮ ಚಟುವಟಿಕೆಗಳನ್ನು ನಡೆಸುವವರ ತಾಣವಾಗಿದ್ದು, ಇದರಿಂದ ಅಲ್ಲಿ ಪ್ರತಿನಿತ್ಯ ವಾಕಿಂಗ್ ಬರುವ ಮಹಿಳೆಯರು ಆತಂಕದಲ್ಲಿ ವಾಕ್ ಮಾಡುವ ಸ್ಥಿತಿ ಬಂದಿದೆ ಮತ್ತು ಸಂಜೆ 7 ರ ನಂತರ ಕತ್ತಲಾದ ಮೇಲೆ ಅಲ್ಲಿ ಒಬ್ಬರೇ ಓಡಾಡುವುದೆ ಕಷ್ಟವಾಗಿದೆ. ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಹಾಗಾಗಿ ಪ್ರತಿನಿತ್ಯ ಸಂಜೆಯ ವೇಳೆ ಪೊಲೀಸ್ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ನಾಗರೀಕರ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಕೆ. ಶೇಖರ್, ಪ್ರಧಾನ ಕಾರ್ಯದರ್ಶಿ ಆರ್. ರಾಘವೇಂದ್ರ, ಉಪಾಧ್ಯಕ್ಷ ರಮೇಶ್, ಸಂಸ್ಥಾಪಕ ಶಿವಮೊಗ್ಗ ವಿನೋದ್, ಚಂದನ್, ಲಕ್ಷ್ಮೀಕಾಂತ, ವೆಂಕಟೇಶ್, ಸಾಗರ್, ಪ್ರಕಾಶ್, ನವೀನ್ ಉಪಸ್ಥಿತರಿದ್ದರು.