ಶಿವಮೊಗ್ಗ: ಹರ್ಷನ ಸಾವು ಇಡೀ ಹಿಂದೂ ಸಮಾಜಕ್ಕೆ ನಷ್ಟವಾಗಿದೆ. ಆದರೆ, ಹಿಂದೂ ಧರ್ಮದ ಜಾಗೃತಿ ಬೀಜ ಬಿತ್ತುವುದರ ಮೂಲಕ ಹಿಂದೂ ಸಮಾಜದ ಎಲ್ಲರಲ್ಲೂ ಚೈತನ್ಯ ತುಂಬಿದ್ದಾನೆ ಎಂದು ಹಿರೇಹಡಗಲಿ ಹಾಲಸ್ವಾಮಿ ಸಂಸ್ಥಾನ ಅಭಿನವ ಹಾಲಶ್ರೀ ಸ್ವಾಮೀಜಿ ಹೇಳಿದರು.
ಅವರು ಇಂದು ನಗರದ ರವೀಂದ್ರನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಹರ್ಷ ಅವರ ಮಾಸಿಕ ಸಮಾರಾಧನೆ ಅಂಗವಾಗಿ ಹರ್ಷನ ಸದ್ಗತಿಗಾಗಿ ಅರ್ಚಕ ವೃಂದ ಹಮ್ಮಿಕೊಂಡಿದ್ದ ವಿಶೇಷ ಹೋಮದ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.ಹರ್ಷನ ಕೀರ್ತಿ ಇಡೀ ದೇಶದಲ್ಲೇ ಹಬ್ಬಿದೆ. ಸೇಡಂ ತಾಲೂಕಿನಲ್ಲಿ ಕಂಡು ಕೇಳರಿಯದಷ್ಟು ಜನ ಅವನ ಪರವಾಗಿ ಸೇರಿದ್ದರು. 800 ಕಿ.ಮೀ. ದೂರದಲ್ಲಿ ಈ ರೀತಿಯ ಹಿಂದುತ್ವ ಜಾಗೃತಿ ಉಂಟಾಗಿದೆ ಎಂದರೆ ಹರ್ಷ ತಾನೊಬ್ಬ ಚೈತನ್ಯ ಸ್ವರೂಪಿಯಾಗಿ ಬೀಜ ಬಿತ್ತಿ ಹೋಗಿದ್ದಾನೆ.
ಪುತ್ರ ಶೋಕ ನಿರಂತರ ಎಂಬ ಮಾತಿದೆ. ಇದು ಹರ್ಷನ ತಂದೆ ತಾಯಿಗೆ ಮಾತ್ರ ಅನ್ವಯಿಸದೇ ಹಿಂದೂ ಸಮಾಜಕ್ಕೆ ಅನ್ವಯಿಸುವಂತಿದೆ ಎಂದರು.ಸಿದ್ಧಲಿಂಗ ಸ್ವಾಮಿಗಳು ಕೋಮುದ್ವೇಷದ ಹೇಳಿಕೆ ನೀಡಿದ್ದಾರೆ ಎಂದು ಬಂಧಿಸಿದಾಗ ಸ್ವಾಮೀಜಿಗಳ ಪರವಾಗಿ ನಾವಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದ್ದ ಎಂದು ಸ್ವಾಮೀಜಿಗಳು ಹೇಳುತ್ತಿದ್ದರು. ಅಷ್ಟೇ ಅಲ್ಲದೇ, ಫೇಸ್ ಬುಕ್ ನಲ್ಲಿ ಹಲವು ಸ್ವಾಮೀಜಿಗಳಿಗೆ ಹರ್ಷ ನೀವು ಜಾತಿ ಜಾತಿ ಎಂದು ಜಾತಿಯ ಹಿಂದೆ ಹೋದರೆ ಹಿಂದೂ ಸಮಾಜ ಬಲಪಡಿಸುವವರು ಯಾರು ಎಂದು ಪ್ರಶ್ನಿಸಿದ್ದ. ಈ ರೀತಿ ಹಿಂದೂ ಸಮಾಜದ ಧ್ವನಿಯಾಗಿ ಹೋರಾಟಗಾರನಾಗಿ ಹರ್ಷ ಎಲ್ಲರ ಗಮನಸೆಳೆದಿದ್ದ.
ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಕಾಶಿಯಲ್ಲಿ ಸಮಾರಂಭವೊಂದರಲ್ಲಿ ವಿಭಾ ಎನ್ನುವ ಹುಡುಗಿ ತನ್ನ ತೋಳಿಗೆ ಹಿಂದೂ ಹರ್ಷ ಎಂದು ಹಚ್ಚೆ ಹಾಕಿಸಿಕೊಂಡಿದ್ದಳು. ಈ ಬಗ್ಗೆ ಪ್ರಶ್ನಿಸಿದಾಗ ಹರ್ಷನನ್ನು ಹಿಂದೂ ಸಮಾಜ ಮರೆಯಬಾರದು ಎಂದು ಈ ರೀತಿ ಹಚ್ಚೆ ಹಾಕಿಸಿಕೊಂಡಿದ್ದಾಗಿ ತಿಳಿಸಿದ್ದಳು. ಇಷ್ಟರಮಟ್ಟಿಗೆ ಹರ್ಷ ಜನರಲ್ಲಿ ಜಾಗೃತಿ ಮೂಡಿಸಿದ್ದಾನೆ. ಹರ್ಷನ ತಾಯಿ ಶ್ರೇಷ್ಟ ಮಗನನ್ನು ಸಮಾಜಕ್ಕೆ ಕೊಟ್ಟಿದ್ದಾರೆ ಎಂದರು.ಈ ಸಂದರ್ಭದಲ್ಲಿ ಹರ್ಷ ಅವರ ಪೋಷಕರು, ಸೋದರಿ, ಮತ್ತು ಅ.ಪ ರಾಮಭಟ್, ವಿನಯ್, ಅಭಿಷೇಕ್ ಮೊದಲಾದವರಿದ್ದರು.