ಶಂಕರಘಟ್ಟ, ಮಾ. 19: ಕೋವಿಡ್-19 ನಂತರದ ಕಾಲಘಟ್ಟದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕಾರ್ಪೊರೆಟ್ ಸಂಸ್ಥೆಗಳು ಮತ್ತೆ ಯಶಸ್ಸಿನ ಹಳಿಗೆ ಮರಳಬೇಕಾದರೆ, ಹೊಸ ಆಲೋಚನೆಗಳನ್ನು, ಹೊಸ ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲವಾದರೆ ಗ್ರಾಹಕರನ್ನು ಸೆಳೆಯುವಲ್ಲಿ ಮತ್ತು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗುವ ಆತಂಕವಿದೆ ಎಂದು ಭಾರತೀಯ ಸಮಾಜ ವಿಜ್ಞಾನಗಳ ಸಂಶೋಧನಾ ಮಂಡಳಿ (ICSSR) ಯ ಹಿರಿಯ ಸಂಶೋಧನಾ ತಜ್ಞ ಡಾ. ಜಿ. ಕೊಟ್ರೇಶ್ವರ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗ ‘ಉದ್ಯಮ ಕ್ಷೇತ್ರದ ಹೊಸ ಪ್ರವೃತ್ತಿಗಳು’ ಕುರಿತು ಶನಿವಾರ ಬಸವ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರಸ್ತುತ ವಿವಿಧ ನೈಸರ್ಗಿಕ ಮತ್ತು ಮಾನವ ನಿರ್ಮಿತ ಕಾರಣಗಳಿಂದ ಸೃಷ್ಟಿಯಾಗಿರುವ ಕ್ಲಿಷ್ಠಕರ ವಾತಾವರಣದಲ್ಲಿ ಉದ್ಯಮ ಸಂಸ್ಥೆಗಳು ಉಳಿಯುವುದೇ ಕಷ್ಟಕರವಾಗಿದೆ. ಇದು ಒಂದೆಡೆ ಸವಾಲೆನಿಸಿದರೆ ಮತ್ತೊಂದು ರೀತಿಯಲ್ಲಿ ಅವಕಾಶಗಳ ಹೊಸ ಬಾಗಿಲು ತೆರೆದಿದೆ. ಈ-ಕಾಮರ್ಸ್, ಆನ್‍ಲೈನ್ ವಹಿವಾಟು, ಸ್ಟಾರ್ಟ್ ಅಪ್ ಆಧಾರಿತ ನವೋದ್ಯಮಗಳು ಅತ್ಯಂತ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವುದೇ ನಮ್ಮ ಕಣ್ಣ ಮುಂದಿರುವ ಜೀವಂತ ನಿದರ್ಶನಗಳು.
ಇಂತಹ ಸವಾಲಿನ ಔದ್ಯೋಗಿಕ ಮಾರುಕಟ್ಟೆಗೆ ವೃತ್ತಿಪರರನ್ನು ಸೃಷ್ಟಿಸುತ್ತಿರುವ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣ ಕ ಸಂಸ್ಥೆಗಳು ಬದಲಾದ ಸನ್ನಿವೇಶಗಳಿಗೆ ತಕ್ಕ ಹಾಗೆ ಪಠ್ಯಕ್ರಮ, ಪ್ರಾಯೋಗಿಕ ಚಟುವಟಿಕೆಗಳು ಮತ್ತು ಉದ್ಯಮ ಸಂಸ್ಥೆಗಳ ಜೊತೆ ವಿನಿಮಯಗಳಂತಹ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಅಣ ಗೊಳಿಸುವತ್ತ ಗಮನಹರಿಸಬೇಕಿದೆ ಎಂದು ಸಲಹೆ ನೀಡಿದರು.
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಭಾರತದ ಆರ್ಥಿಕತೆಯಲ್ಲಿ ಒಂದು ವೈರುಧ್ಯಮಯವಾದ ವಾತಾವರಣವಿದೆ. ಒಂದೆಡೆ ಜಗತ್ತಿನ ಅತ್ಯಂತ ಶ್ರೀಮಂತರಿದ್ದರೆ, ಇನ್ನೊಂದೆಡೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಬಡವರಿದ್ದಾರೆ. ಬಡವ ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡುವತ್ತ ಉದ್ಯಮ ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕಿದೆ. ಕೈಗಾರಿಕೆಗಳು ಮತ್ತು ಕಾರ್ಪೊರೆಟ್ ಸಂಸ್ಥೆಗಳಿಗೆ ಶಾಂತಿಯುತ ವಾತಾವರಣ ಅತ್ಯಂತ ಮುಖ್ಯ. ಯುದ್ಧ, ಅಸ್ಥಿರತೆ, ಸಂಘರ್ಷಗಳು ಉದ್ಯಮ ಕ್ಷೇತ್ರಕ್ಕೆ ಬಲವಾದ ಪೆಟ್ಟು ನೀಡುತ್ತದೆ. ಹೀಗಾಗಿ ರಾಜಕೀಯ ಸ್ಥಿರತೆ ಮತ್ತು ದೃಢ ಸರ್ಕಾರ ಉದ್ಯಮ ಕ್ಷೇತ್ರಕ್ಕೆ ಅತ್ಯವಶ್ಯಕ ಎಂದರು.
ವಾಣಿಜ್ಯ ಶಾಸ್ತ್ರ ನಿಕಾಯದ ಡೀನ್ ಮತ್ತು ವಿಭಾಗದ ಮುಖ್ಯಸ್ಥ ಪ್ರೊ. ಎಸ್. ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಹಿರೇಮಣಿ ನಾಯಕ್, ಪ್ರೊ. ಎ. ಇಳಂಗೋವನ್, ಡಾ. ಕೆ. ಆರ್. ಮಂಜುನಾಥ್, ಡಾ. ಬಿನೋಯ್, ವಿವಿಧ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.