ಶಂಕರಘಟ್ಟ.19: ಇತ್ತೀಚೆಗೆ ಮಹಿಳೆಯರು ಶಿಕ್ಷಣ, ಕ್ರೀಡೆ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ, ಉದ್ಯಮ, ಮುಂತಾದ ಹಲವು ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ಮಾಡುತ್ತಿರುವುದು ಸಮಾಜದ ಎಲ್ಲ ಮಹಿಳೆಯರಿಗೆ ಪ್ರೇರಣೆಯಾಗಲಿ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಜಿ. ಅನುರಾಧ ಆಶಿಸಿದರು.

ಕುವೆಂಪು ವಿವಿಯ ಮಹಿಳಾ ಬೋಧಕೇತರ ಸಿಬ್ಬಂದಿ ಶನಿವಾರ ಪ್ರೊ.‌ ಪಿ. ವೆಂಕಟರಾಮಯ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಿ ಹೆಣ್ಣಿಗೆ ಗೌರವವಿರುತ್ತದೆಯೋ ಅಲ್ಲಿ ಅಭಿವೃದ್ಧಿ ಸಾಧ್ಯ. ಒಟ್ಟಾರೆ ಅಭಿವೃದ್ಧಿಯನ್ನು ಮಹಿಳಾಪರ ದೃಷ್ಟಿಕೋನದಿಂದ ನೋಡುವ ಅಗತ್ಯವಿದೆ. ಅದರಲ್ಲಿಯೂ ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಆಡಳಿತ ಮತ್ತಿತರ ಸೇವಾ ಕ್ಷೇತ್ರಗಳಲ್ಲಿ ಮಹಿಳೆಯರ ಹೊಣೆಗಾರಿಕೆ ಹಿಂದೆಂದಿಗಿಂತಲೂ ಅಧಿಕವಾಗಿದೆ ಎಂದರು.

ಮಹಿಳಾ ವೈದ್ಯಾಧಿಕಾರಿ ಡಾ. ಶ್ರೀರಕ್ಷಾ ಮಾತನಾಡಿ, ಮಹಿಳೆಯರಿಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಸದೃಢವಾಗಿರಬೇಕು. ಉತ್ತಮ ಆರೋಗ್ಯದಿಂದ ವೃತ್ತಿರಂಗದಲ್ಲಿ ಸಾಧನೆ ಮಾಡಬಹುದು. ಹೀಗಾಗಿ, ವ್ಯಾಯಾಮ, ಯೋಗ ಮತ್ತು ಧ್ಯಾನಗಳನ್ನು ಮಹಿಳೆಯರು ದೈನಂದಿನ‌ ದಿನಚರಿಯಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಸಹಾಯಕ ಕುಲಸಚಿವೆ ಶಿವಮ್ಮ, ಅಧೀಕ್ಷಕಿ ತಹಸೀನ್ ಜಹಾನ್, ಮರಿಯಾಂಬಿ ಟಿ. ಪಿ, ಹಿರಿಯ ಸಹಾಯಕಿ ಎಚ್. ಎಸ್ ರೇಖಾ, ಎನ್. ಸುಶೀಲಾ, ಮಂಜುಳಾ ಸೇರಿದಂತೆ ವಿಶ್ವವಿದ್ಯಾಲಯದ ಎಲ್ಲಾ ಮಹಿಳಾ ನೌಕರರು ಉಪಸ್ಥಿತರಿದ್ದರು.