ಶಿವಮೊಗ್ಗ: ನಗರದಲ್ಲಿ ಪ್ರತಿ ವರ್ಷ ಸಡಗರ-ಸಂಭ್ರಮದಿಂದ ಆಚರಿಸುತ್ತಿದ್ದ ಹೋಳಿಹಬ್ಬ ಈ
ವರ್ಷ ನೀರಸವಾಗಿದ್ದು, ಅಲ್ಲಲ್ಲಿ ಬಣ್ಣ ಎರಚುವ ಮೂಲಕ ಹಬ್ಬವನ್ನು ಆಚರಿಸಲಾಗಿದೆ.
ಇತ್ತೀಚೆಗೆ ನಗರದಲ್ಲಿ ನಡೆದ ಅಹಿತಕರ ಘಟನೆಗಳು, ಕೋವಿಡ್ ಹಿನ್ನೆಲೆ, ಯುವಕರಲ್ಲಿ
ನಿರಾಸಕ್ತಿ, ಎದುರಾಗಿರುವ ಶ್ರೀ ಮಾರಿಕಾಂಬ ಜಾತ್ರೆ ಮುಂತಾದ ಹಲವು ಕಾರಣಗಳಿಂದ ಹೋಳಿ
ಹಬ್ಬಕ್ಕೆ ತುಸು ಬ್ರೇಕ್ ಸಿಕ್ಕಂತಾಗಿತ್ತು. ಆದರೂ ಕೂಡ ನಗರದ ವಿವಿಧ ಬಡಾವಣೆಗಳಲ್ಲಿ
ಯುವಕ – ಯುವತಿಯರು ಪರಸ್ಪರ ಬಣ್ಣಗಳನ್ನು ಎರಚುವ, ಮೊಟ್ಟೆಯನ್ನು ತಲೆಗೆ ಹೊಡೆಯುವುದರ
ಮೂಲಕ, ನೃತ್ಯ ಮಾಡುತ್ತಾ ಹೋಳಿಯನ್ನು ಆಚರಿಸಿದ್ದು ಕಂಡುಬಂತು.
ವಿಶೇಷವಾಗಿ ಗಾಂಧಿ ಬಜಾರ್, ದುರ್ಗಿಗುಡಿ, ಕಾಲೇಜುಗಳ ಬಳಿ ಹೋಳಿ ಹಬ್ಬವನ್ನು
ಆಚರಿಸಲಾಗಿದೆ. ಈ ಬಾರಿ ಯುವಕರು ಬೈಕುಗಳಲ್ಲಿ ಸವಾರಿ ಮಾಡುವುದು, ಕೂಗುತ್ತಾ
ಸಾಗುವುದು, ವ್ಹೀಲಿಂಗ್ ಮಾಡುವುದು ಕಡಿಮೆಯಾಗಿದೆ. ಆದರೂ ಗಾಂಧಿ ಬಜಾರ್ ನ ತುಳಜಾ
ಭವಾನಿ ರಸ್ತೆಯಲ್ಲಿ ಯುವಕ ಯುವತಿಯರು ನೃತ್ಯ ಮಾಡುತ್ತಾ ಬಣ್ಣಗಳನ್ನು ಎರಚಿ ಅತ್ಯಂತ
ಸಂಭ್ರಮದಿಂದಲೇ ಹೋಳಿ ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿನ ಕೆಲವು ಅಂಗಡಿಳನ್ನು
ಸ್ವಲ್ಪ ಹೊತ್ತು ಬಂದ್ ಮಾಡಲಾಗಿತ್ತು. ಕೆಲವು ಕಡೆ ಕಾಮಣ್ಣನ ಮೂರ್ತಿ ದಹಿಸಲಾಯಿತು.
ಗಾಂಧಿ ಬಜಾರ್, ಕುಂಬಾರ ಬೀದಿ, ರವಿವರ್ಮ ಬೀದಿ ಮುಂತಾದ ಕಡೆಗಳಲ್ಲಿ ಮನ್ಮಥನನ್ನ
ಸ್ಥಾಪಿಸಲಾಗಿತ್ತು. ಮಡಿಕೆ ಒಡೆಯುವುದು, ಪುಟ್ಟ ಮಕ್ಕಳು ಪಿಚಕಾರಿ ಮೂಲಕ ಬಣ್ಣದ ನೀರು
ಎರಚಿ ಸಂಭ್ರಮಿಸಿದರು.
ಹೋಳಿ ಹಬ್ಬ ಭಾರತದ ಸಂಸ್ಕೃತಿಯ ಸಂಕೇತವಾಗಿದೆ. ಯುವಕ – ಯುವತಿಯರ ಮನಸ್ಸನ್ನು
ಪುಳಕಿತಗೊಳಿಸುವ ಸಾಮರಸ್ಯ ಸಾರುವ ಬಣ್ಣಗಳ ನಡುವೆ ಮಿಂದೇಳುವ ಹಬ್ಬ ಅತ್ಯಂತ ಸುಂದರವಾದ
ಹಬ್ಬವೂ ಆಗಿದೆ. ಈ ಹಬ್ಬಕ್ಕೆ ಭಾರತದಲ್ಲಿ ತುಂಬಾ ವಿಶೇಷವಿದ್ದು, ಮುಖ್ಯವಾಗಿ
ಪ್ರೀತಿ, ವಾತ್ಸಲ್ಯ, ಸಾಮರಸ್ಯ ಸಾರುವ ಬಡವರು, ಶ್ರೀಮಂತರು ಎಲ್ಲರೂ ಸೇರಿ ಆಚರಿಸುವ,
ಹಿರಿಯರನ್ನು ಒಂದುಗೂಡಿಸುವ ಈ ಹಬ್ಬ ನೋವನ್ನು ಮರೆಸಲು ಸಹ ಸಹಾಯಕವಾಗುತ್ತದೆ.
ನಗರದಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಪೊಲೀಸರು
ನಗರದೆಲ್ಲೆಡೆ ಕಟ್ಟೆಚ್ಚರ ವಹಿಸಿದ್ದರು. ಯಾವುದೇ ಅಹಿತಕರ ಘಟನೆ ಹೋಳಿ ಸಂದರ್ಭದಲ್ಲಿ
ವರದಿಯಾಗಲಿಲ್ಲ.