ಹೊಳೆಹೊನ್ನೂರಿನಲ್ಲಿರುವ 30ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ.ನಾರಾಯಣ ಗೌಡ ಅವರು ತಿಳಿಸಿದರು.
ಅವರು ಭಾನುವಾರ ಹೊಳೆಹೊನ್ನೂರಿನಲ್ಲಿ 30 ಹಾಸಿಗೆ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಹಾಗೂ ಸಿಬ್ಬಂದಿಗಳ ವಸತಿಗೃಹಗಳನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಜಿಲ್ಲೆಯಲ್ಲಿ ಆರೋಗ್ಯ ಮೂಲಸೌಕರ್ಯಗಳನ್ನು ಉನ್ನತೀಕರಿಸಲಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಉಂಟಾಗಿವೆ. ಪ್ರಸ್ತುತ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 30 ಹಾಸಿಗೆಗಳ ಸೌಲಭ್ಯವಿದ್ದು, ಇನ್ನು 30ಲಕ್ಷ ರೂ. ವೆಚ್ಚ ಮಾಡಿ 50ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೆಚ್ಚಿನ ಸಾವು ನೋವು ಸಂಭವಿಸದAತೆ ನೋಡಿಕೊಳ್ಳಲು ನಮಗೆ ಸಾಧ್ಯವಾಗಿದೆ. ಇದೇ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಿದೆ. ಜಿಲ್ಲೆಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಸ್ತುತ ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮ ಸೌಲಭ್ಯಗಳು ಲಭ್ಯವಿದೆ ಎಂದು ಹೇಳಿದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಕ್ಷೇತ್ರದಲ್ಲಿ ಅಮೂಲಾಗ್ರ ಸುಧಾರಣೆ ಮಾಡಿದೆ. ಕೋವಿಡ್ ಲಸಿಕೆಯನ್ನು ಸಕಾಲದಲ್ಲಿ ಎಲ್ಲರಿಗೂ ತಲುಪಿಸಿದ್ದು ಮಾತ್ರವಲ್ಲದೆ ಬೇರೆ ಹಲವು ದೇಶಗಳಿಗೆ ಒದಗಿಸಿರುವುದನ್ನು ಗಮನಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ ನಾಯ್ಕ್ ಮಾತನಾಡಿ, ಹೊಳೆಹೊನ್ನೂರು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿದ ಬಳಿಕ ಇಲ್ಲಿನ ಮೂಲಸೌಕರ್ಯಗಳನ್ನು ಸಹ ಮೇಲ್ದರ್ಜೆಗೇರಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಸಮುದಾಯ ಆರೋಗ್ಯ ಕೇಂದ್ರದ ಮೂಲಕ ಸುತ್ತಲಿನ ಹಳ್ಳಿಗಳ ಜನರಿಗೆ ಆರೋಗ್ಯ ಸೇವೆ ಒದಗಿಸಲು ಸಾಧ್ಯವಾಗಲಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‌ಸಿಎಚ್ ಅಧಿಕಾರಿ ಡಾ.ನಾಗರಾಜ ನಾಯಕ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಲಾಯಿತು.