ಲಕ್ಷಾಂತರ ಜನ ರೈತರ ಬದುಕಿಗೆ ಬೆನ್ನೆಲುಬು ಆಗಿರುವ ಅಡಿಕೆ ಬಳಕೆಯಿಂದ ಆರೋಗ್ಯಕ್ಕೆ ಹಾನಿಕರವಿಲ್ಲ, ಬದಲಿಗೆ ಅನೇಕ ಬಗೆಯಲ್ಲಿ ಲಾಭಕರ ವಿದೆ ಎಂಬ ಬಗ್ಗೆ, ಸಂಶೋಧನೆಗಳು ನಡೆಯುತ್ತಿವೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ, ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಹಾಗೂ ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಆರಗ ಜ್ಞಾನೇಂದ್ರ ಅವರು, ಇತ್ತೀಚಿಗೆ ಲೋಕಸಭಾ ಸದಸ್ಯರೊಬ್ಬರು ಅಡಿಕೆ ಹಾನಿಕಾರಕ ಹಾಗೂ ಅದನ್ನ ಬ್ಯಾನ್ ಮಾಡಬೇಕು ಎಂದು ನೀಡಿದ್ದ ಹೇಳಿಕೆ ಯಿಂದ, ರೈತರು ಆತಂಕಕ್ಕೆ ಒಳಗಾಗಿದ್ದರು. ಈ ಕಾರಣದಿಂದಾಗಿ, ಅಡಿಕೆ ದೇಹಕ್ಕೆ ಹಾನಿಕಾರಕ ಅಲ್ಲಾ, ಹಾಗೂ ಈ ರೀತಿ ಹೇಳಿಕೆಯಿಂದಾಗಿ ಅಡಿಕೆ ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಕರ್ನಾಟಕ ರಾಜ್ಯದ ಅಡಿಕೆ ಟಾಸ್ಕ್ ಫೋರ್ಸ್ (Karnataka State Areca Task Force) ನಿಯೋಗದ ವತಿಯಿಂದ ದೆಹಲಿಗೆ ತೆರಳಿ ಸಚಿವರನ್ನು ಭೇಟಿ ಮಾಡಲಾಗಿತ್ತು, ಎಂದರು.
ಈ ಸಂಬಂಧ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ಥೋಮರ್ ಹಾಗೂ ರಾಜ್ಯ ಸಚಿವರನ್ನ ಭೇಟಿ ಮಾಡಲಾಗಿದ್ದು, ಅಡಿಕೆ ಬಗ್ಗೆ ಕೋರ್ಟ್ ನಲ್ಲಿ ತೀರ್ಮಾನ ಆಗದೆ ಯಾವುದೇ ಹೇಳಿಕೆಗಳನ್ನ ನೀಡಬಾರದು, ಅದು ಅಡಿಕೆ ಬೆಳೆಗಾರರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಮನವರಿಕೆ ಮಾಡಿದ್ದೇವೆ ಎಂದರು.
ಇನ್ನು, ಅಡಿಕೆ ಮನುಷ್ಯನ ದೇಹಕ್ಕೆ ಹಾನಿಕರಕ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್ ಗೆ ಒಂದು ಅಫಿಡವಿಟ್ ನೀಡಿದ್ದು, ಈ ಅಫಿಡವಿಟ್ ಅನ್ನು ತೆಗೆಯುವ ಸಲುವಾಗಿ ನಾವು ಪ್ರಯತ್ನ ಮಾಡ್ತಿದ್ದೇವೆ ಹಾಗೂ ಅಡಿಕೆ ಹಾನಿಕರಕ ಅಲ್ಲಾ ಎಂಬ ಬಗ್ಗೆ ನಮ್ಮ ರಾಜ್ಯದಲ್ಲಿ ಸಂಶೋಧನೆಯನ್ನ ಸಹ ಮಾಡಲಾಗುತ್ತಿದೆ, ಎಂದೂ ಸಚಿವರು ಮಾಹಿತಿ ನೀಡಿದರು.
ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ (ramaiah institute of medical sciences) ನಮ್ಮ ಟಾಸ್ಕ್ ಫೋರ್ಸ್ ಕಡೆಯಿಂದ ಸಂಶೋಧನೆ ನಡೆಯುತ್ತಲಿದೆ, ಹಾಗೂ ಕೇಂದ್ರದಿಂದಲೂ ಸಹ ಈ ಬಗ್ಗೆ ಅಧ್ಯಯನ ನಡೆಸಲು ಒಂದು ಸಮಿತಿಯನ್ನ ರಚನೆ ಮಾಡಲಾಗುತ್ತಿದೆ.
ಅಡಿಕೆ ಸೇವನೆ, ಆರೋಗ್ಯಕ್ಕೆ ಹಾನಿಕಾರಕ ಅಲ್ಲಾ ಎಂಬುದರ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಇದರಿಂದ ಬರುವ ನಿರೀಕ್ಷೆಯಿದೆ ಹಾಗೂ ರೈತ ಸಮುದಾಯಕ್ಕೆ ಇದರಿಂದ ಬಹಳ ದೊಡ್ಡ ಯಶಸ್ಸು ದೊರೆಯಲಿದೆ ಎಂದರು.
ನಾವು ನೀಡಿರುವ ಈ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕ ವಾಗಿ ಸ್ಪಂದಿಸಿದ್ದು, ನಮಗೆ ಅತ್ಯಂತ ಸಂತೋಷ ವಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.