ಶಿವಮೊಗ್ಗ: ತುಂತುರು ಮಳೆಯ ಸಿಂಚನದೊಂದಿಗೆ ನಗರದ ಪುರಾಣ ಪ್ರಸಿದ್ಧ ಕೋಟೆ ಮಾರಿಕಾಂಬ ದೇವಿಗೆ ಪ್ರಥಮ ಪೂಜೆ ಸಲ್ಲಿಸುವ ಮೂಲಕ ಐದು ದಿನಗಳ ಕಾಲ ನಡೆಯುವ ಜಾತ್ರೆ ವಿಜೃಂಭಣೆಯಿಂದಲೇ ಆರಂಭಗೊಂಡಿದೆ.

ಜಾತ್ರೆಯ ಮೊದಲ ದಿನವಾದ ಇಂದು ಮುಂಜಾನೆಯೇ ಮಾರಿಕಾಂಬೆಗೆ ಬ್ರಾಹ್ಮಣ, ನಾಡಿಗರ ಮನೆಯಲ್ಲಿ ಪೂಜೆ ನೆರವೇರಿತು. ನಂತರ ಮಂಗಳವಾದ್ಯದೊಂದಿಗೆ ತವರು ಮನೆಯಾದ ಗಾಂಧಿ ಬಜಾರ್ ಗೆ ಕರೆತರಲಾಯಿತು. ಮಳೆಯ ಸಿಂಚನದ ನಡುವೆಯೂ ಸಾವಿರಾರು ಜನರು ಕಿಲೋ ಮೀಟರ್ ಗೂ ಹೆಚ್ಚು ಉದ್ದದ ಸರತಿ ಸಾಲಿನಲ್ಲಿ ನಿಂತು ಶಕ್ತಿ ದೇವತೆಯಾದ ಮಾರಿಕಾಂಬ ದರ್ಶನ ಪಡೆದರು. ಸಾರ್ವಜನಿಕರು ಭಕ್ತಿಯಿಂದ ಮಿಂದೆದ್ದರು. ದೇವಿಯ ದರ್ಶನ ಪಡೆಯಲು ಭಕ್ತರು ಇಂದು ಮುಂಜಾನೆ ಎರಡು ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂದಿತು. ದೇವಿಗೆ ಸೀರೆ, ಅರಿಶಿಣ, ಕುಂಕುಮ, ಬಳೆ, ಕಣ ಮುಂತಾದ ಹರಕೆಯನ್ನು ತೀರಿಸುವುದು ಕಂಡು ಬಂದಿತು.  ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಈ ಅಲಂಕಾರ ನೋಡಲು ನಿಜಕ್ಕೂ ಎರಡು ಕಣ್ಣುಗಳು ಸಾಲದು. ಭಕ್ತಿ ಮತ್ತು ಶಕ್ತಿ ಇವೆರಡು ಮಿಲನಗೊಂಡು ಉತ್ಸಾಹ, ಸಂಭ್ರಮ ಗಾಂಧಿ ಬಜಾರ್ ನಲ್ಲಿ ಮನೆ ಮಾಡಿತ್ತು.ಬ್ರಾಹ್ಮಣ ನಾಡಿಗರ ಕುಟುಂಬದವರಿಂದ ಪೂಜೆ ನಂತರ ಗಾಂಧಿ ಬಜಾರ್ ನಲ್ಲಿ ವಿಶ್ವಕರ್ಮ ಜನಾಂಗದವರು ಪೂಜೆ ನೆರವೇರಿಸಿದರು. ಭಕ್ತರು ದೇವಿಯ ದರ್ಶನ ಪಡೆಯಲು ಅನುಕೂಲವಾಗುವಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪೊಲೀಸರು ಸ್ವಯಂಸೇವಾಕರ್ತರು, ದೇವಸ್ಥಾನ ಸಮಿತಿಯವರು ಆಗಾಗ ಮೈಕ್ ಗಳ ಮೂಲಕ ಸಂದೇಶಗಳನ್ನು ನೀಡುತ್ತಿದ್ದರು. ಚಿಕ್ಕಮಕ್ಕಳನ್ನು ದೇವಿಯ ಮಡಿಲಿಗೆ ಕೊಟ್ಟು ವಾಪಸ್ ಪಡೆದುಕೊಳ್ಳುತ್ತಿದ್ದ ದೃಶ್ಯ ವಾತ್ಸಲ್ಯಮಯವಾಗಿತ್ತು.

ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ನೀರು, ಮಜ್ಜಿಗೆ, ಪಲಾವ್ ಮುಂತಾದ ಉಪಹಾರ ಮತ್ತು ಪಾನೀಯಗಳನ್ನು ವಿವಿಧ ಸಂಘಟನೆಗಳಿಂದ ವಿತರಿಸಲಾಯಿತು. ಬಿಸಿಲ ಝಳ ಇರಲಿಲ್ಲ. ಹಾಗಾಗಿ ವಾತಾವರಣ ಕೂಡ ತಂಪಾಗಿದ್ದು, ಸರತಿ ಸಾಲಲ್ಲಿ ನಿಂತವರಿಗೆ ಹೆಚ್ಚು ಆಯಾಸ ಆಗಲಿಲ್ಲ. ಮನೆಗಳಲ್ಲೂ ಕೂಡ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೇವಿನ ಸೊಪ್ಪು ತಂದು ದೇವಿ ಹೆಸರಲ್ಲಿ ಕಳಶವಿಟ್ಟು ಪೂಜೆ ಮಾಡಿದರು. ಇಂದು ಸಿಹಿ ಅಡಿಗೆಯಾಗಿದ್ದು, ಸಾಮಾನ್ಯವಾಗಿ ಎಲ್ಲರೂ ಹೋಳಿಗೆ, ಪಾಯಸದ ತಯಾರಿಯಲ್ಲಿದ್ದರು. ಬೇರೆ ಊರುಗಳಿಂದ ಬಂಧು ಬಾಂಧವರು ಬರುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಬಸ್ ನಿಲ್ದಾಣಗಳ ಜನ ಜಂಗುಳಿ ಹೆಚ್ಚಿತ್ತು. ಸ್ವಂತ ವಾಹನಗಳಲ್ಲಿಯೂ ಜನ ಆಗಮಿಸಿದ್ದಾರೆ.

ಜಾತ್ರೆ ಹಿನ್ನಲೆಯಲ್ಲಿ ಸುರಕ್ಷತೆ ದೃಷ್ಠಿಯಿಂದ ಗಾಂಧಿ ಬಜಾರ್ ಹಾಗೂ ಕೋಟೆ ಮಾರಿಕಾಂಬ ದೇವಾಲಯ ಸೇರುವ ಸಮಪರ್ಕ ರಸ್ತೆಗಳಲ್ಲಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು.ಇಂದು ಮಧ್ಯರಾತ್ರಿವರೆಗೂ ದೇವಿ ಗಾಂಧಿ ಬಜಾರ್ ತವರುಮನೆಯಲ್ಲಿಯೇ ಇದ್ದು, ನಂತರ ಗದ್ದುಗೆಗೆ ನಾಳೆ ಮುಂಜಾನೆ ಆಗಮಿಸಲಿದೆ. ಉಪ್ಪಾರ, ಕುರುಬ, ಗಂಗಾಮತಸ್ಥ ಮುಂತಾದ ಸಮಾಜದವರು ದೇವಿಯನ್ನು ಎದುರುಗೊಂಡು ಪೂಜೆ ಸಲ್ಲಿಸುತ್ತಾರೆ. ಗದ್ದುಗೆ ಬಳಿ ದೇವಿ ಬಂದಾಗ ವಿದ್ಯಾನಗರದ ಕರ್ಲಹಟ್ಟಿಯ ಹರಿಜನರು ಪೂಜೆ ಸಲ್ಲಿಸುತ್ತಾರೆ. ಗದ್ದುಗೆಯಲ್ಲಿ ದೇವಿ ಕೂರಿಸುತ್ತಿದ್ದಂತೆಯೇ ಕುರುಬ ಸಮಾಜದ ಚೌಡಿಕೆ ಮನೆತನದವರು ನೈವೇದ್ಯ ಅರ್ಪಿಸುತ್ತಾರೆ.

ಆ ನಂತರ ಸರದಿಯಂತೆ ವಾಲ್ಮೀಕಿ ಜನಾಂಗದವರು, ಉಪ್ಪಾರರು, ಮಡಿವಾಳರು ನಾಲ್ಕುದಿನಗಳ ಕಾಲ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಾರೆ. ಅಲ್ಲದೇ ಹರಕೆ ಹೊತ್ತ ಭಕ್ತಾದಿಗಳು ಬೇವಿನ ಉಡುಗೆ ಉಟ್ಟು ಹರಕೆ ತೀರಿಸುತ್ತಾರೆ. ಶನಿವಾರ ರಾತ್ರಿ 8 ಗಂಟೆಗೆ ಅಮ್ಮನವರ ರಾಜಬೀದಿ ಉತ್ಸವದೊಂದಿಗೆ ದೇವಿಯನ್ನು ವನಕ್ಕೆ ವಿಸರ್ಜಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳುತ್ತದೆ.

ವರದಿ ಮಂಜುನಾಥ್ ಶೆಟ್ಟಿ…