ಶಿವಮೊಗ್ಗ: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಶಿವಮೊಗ್ಗದ ವತಿಯಿಂದ
‘ಜನರನ್ನು ಉಳಿಸಿ ದೇಶವನ್ನು ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಇಂದು ಶಿವಮೊಗ್ಗದಲ್ಲಿ
ಬೃಹತ್ ಮೆರವಣಿಗೆ ನಡೆಸಲಾಯಿತು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ
ನಡೆಸಿದರು.

ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಖಾಸಗೀಕರಣ ಬೇಡ, ಎಲ್ಲಾ ಶ್ರಮಿಕರಿಗೆ
ಸಾಮಾಜಿಕ ಭದ್ರತೆ ಒದಗಿಸಬೇಕು, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಹಳೆ
ರೀತಿಯ ಪಿಂಚಣಿ ಯೋಜನೆ ಜಾರಿಯಾಗಬೇಕು ಎಂಬುದು ಸೇರಿದಂತೆ ಸುಮಾರು 12 ಕ್ಕೂ ಹೆಚ್ಚು
ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.

ಜನರ ಹಕ್ಕುಗಳು ಮತ್ತು ಜೀವನೋಪಾಯಗಳನ್ನು ಉಳಿಸಲು ಹಾಗೂ ವಿದೇಶಿ ಕಾರ್ಪೋರೇಟ್
ಸಂಸ್ಥೆಗಳ ಓಡಿಸಲು ದೇಶದ ಅರ್ಥವ್ಯವಸ್ಥೆಯನ್ನು ಗಟ್ಟಿಗೊಳಿಸಲು ಈ ಪ್ರತಿಭಟನೆ
ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ, ರೈತವಿರೋಧಿ, ಜನವಿರೋಧಿ
ನೀತಿಗಳನ್ನು ಅನುಸರಿಸುತ್ತಾ ಕಾರ್ಪೋರೇಟ್ ಪರವಾಗಿದೆ. ಈ ದೇಶವನ್ನು ವಿನಾಶದಿಂದ
ತಪ್ಪಿಸಬೇಕಾಗಿದೆ. ಏರುತ್ತಿರುವ ಬೆಲೆ ಇಳಿಯಬೇಕು. ಗುತ್ತಿಗೆ ಕಾರ್ಮಿಕರನ್ನು
ಖಾಯಂಗೊಳಿಸಬೇಕು. ರಕ್ಷಣೆ ಮತ್ತು ವಿಮಾ ಸೌಲಭ್ಯ ಸಿಗಬೇಕು ಎಂದು ಆಗ್ರಹಿಸಿದರು.

ಅಕ್ಷರ ದಾಸೋಹ ನೌಕರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಕೇಂದ್ರ ಸರ್ಕಾರ ಕಡಿತ
ಮಾಡಿರುವ ಶೇ. 40ರ ಅನುದಾನ ನೀಡಬೇಕು. ಕನಿಷ್ಠ 24 ಸಾವಿರ ವೇತನ ನೀಡಬೇಕು.
ಅಂಗನವಾಡಿಗಳಲ್ಲಿ ಎಲ್.ಕೆ.ಜಿ. ಯು.ಕೆ.ಜಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು, ಎಐಸಿಸಿಟಿಯು, ಬಿ.ಎಸ್.ಎನ್.ಎಲ್. ಎಂಪ್ಲಾಯಿಸ್ ಯೂನಿಯನ್, ಗ್ರಾಮ
ಪಂಚಾಯಿತಿ ನೌಕರರ ಸಂಘ, ಅಕ್ಷರ ದಾಸೋಹ, ಅಂಗನವಾಡಿ ನೌಕರರ ಸಂಘ ಸೇರಿದಂತೆ ಸುಮಾರು 11 ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ಕಾರ್ಮಿಕ ನಾಯಕ ಡಿ.ಸಿ. ಮಾಯಣ್ಣ, ಅನಂತರಾಂ, ಹನುಮಮ್ಮ, ತುಳಸಿಪ್ರಭಾ, ಭಾಗ್ಯ, ಗೀತಾ,
ಜಯಮ್ಮ, ತಾರಾ, ಅಶ್ವಿನಿ, ಪುಷ್ಪಾ, ಸೂರ್ಯಕಲಾ, ನಾಣಯ್ಯ, ವೇಲು ಸೇರಿದಂತೆ
ಹಲವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…