ಶಿವಮೊಗ್ಗ: ಕನ್ನಡ ಭಾಷೆ ಮಾತನಾಡಲು ಯಾವುದೇ ನಾಚಿಕೆ, ಅಂಜಿಕೆ, ಕೀಳರಿಮೆಯೂ ಬೇಡ. ಕನ್ನಡ ಭಾಷೆಯ ಮೂಲಕವೇ ನಾವು ಜಗತ್ತನ್ನು ನೋಡಬೇಕಾಗಿದೆ. ಕನ್ನಡಿಗರಿಗೆ ಕನ್ನಡ ಬಿಟ್ಟು ಬೇರೆ ಜೀವವೇ ಇಲ್ಲ ಎಂದು ಸಾಹಿತಿ, ಸಾಂಸ್ಕೃತಿಕ ಚಿಂತಕ ಪ್ರೊ. ಕೃಷ್ಣೇಗೌಡ ಹೇಳಿದರು.
ಅವರು ಇಂದು ಗೋಪಿಶೆಟ್ಟಿ ಕೊಪ್ಪದ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕಸಾಪದ ವತಿಯಿಂದ ಆಯೋಜಿಸಿದ್ದ 16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಇಂಗ್ಲಿಷ್ ಭಾಷೆಯ ಮೋಹ ನಮ್ಮನ್ನು ಆವರಿಸಿಕೊಂಡಿದೆ. ಅಲ್ಲದೇ, ಅಮಲನ್ನೂ ಏರಿಸಿದೆ. ಅದು ಶ್ರೇಷ್ಠ ಎಂಬ ಭಾವನೆ ನಮ್ಮೊಳಗೆ ಬಂದುಬಿಟ್ಟಿದೆ. ಆದರೆ, ಕನ್ನಡ ಭಾಷೆ ಧನ, ಧಾನ್ಯ ಅಲ್ಲದೇ ಮಾನ್ಯವನ್ನು ಕೂಡ ಮಾಡುತ್ತದೆ. ಇಂಗ್ಲಿಷ್ ಭಾಷೆಯನ್ನು ನಮ್ಮ ಕಿವಿ ಕೇಳಿಸಿಕೊಳ್ಳುತ್ತದೆ ಅಷ್ಟೇ. ಆದರೆ, ನಮ್ಮ ಹೃದಯ ಕನ್ನಡಕ್ಕೆ ಅದನ್ನು ಸ್ವಾಗತಿಸುತ್ತದೆ.
ಜಗತ್ತಿನ ಪ್ರಮುಖ 30 ಭಾಷೆಗಳಲ್ಲಿ ಕನ್ನಡವೂ ಒಂದು ಎಂಬುದು ನಮ್ಮ ಹೆಮ್ಮೆಯಾಗಿದೆ ಎಂದು ಹೇಳಿದರು.ಮನಸ್ಸನ್ನು ಒಡೆಯುವ ಭಾಷೆ ನಮಗೆ ಬೇಕಿಲ್ಲ. ಒಬ್ಬ ಕವಿ ಹೇಳಿದಂತೆ ಬೆಳಕು ಹಚ್ಚುವುದು ಅಷ್ಟು ಸುಲಭವಲ್ಲ. ಆದರೆ, ಬೆಂಕಿ ಹಚ್ಚುವುದು ತುಂಬಾ ಸುಲಭ. ಇಂತಹ ವಾತಾವರಣದ ನಡುವೆ ಇರುವ ನಮಗೆ ಕನ್ನಡ ಭಾಷೆಯ ಹೆಸರಲ್ಲಿ ನಡೆಯುತ್ತಿರುವ ಇಂತಹ ಕಾರ್ಯಕ್ರಮಗಳು ರೋಮಾಂಚನ ತರುತ್ತವೆ. ಕನ್ನಡ ಬಿಟ್ಟು ಬೇರೆ ಜೀವ ಇಲ್ಲ ಎಂಬುದನ್ನು ಸಾರಿ ಹೇಳುತ್ತವೆ ಎಂದರು.ಇಂಗ್ಲಿಷ್ ನಮ್ಮೆದುರು ಭೂತದಂತೆ ಕುಳಿತಿದೆ. ನಮ್ಮ ಭಾಷೆ ಮಾತನಾಡಲು ನಮಗೆ ಯಾವ ನಾಚಿಕೆ, ಅಂಜಿಕೆ ಬೇಕಾಗಿಲ್ಲ. ಇಂಗ್ಲಿಷ್ ಭಾಷೆಗೆ ತರ್ಕವೇ ಇಲ್ಲ. ಭಾವನೆಗಳೇ ಅರ್ಥವಾಗದ ಭಾಷೆಯನ್ನು ಬೆನ್ನತ್ತಿಕೊಂಡು ಹೋಗುವುದರಲ್ಲಿ ಅರ್ಥವೂ ಇಲ್ಲ.
ಕನ್ನಡ ಭಾವನೆಗಳ ಭಾಷೆ. ಭಾವಕೋಶದ ಭಾಷೆ. ಇದಕ್ಕೆ ತನ್ನದೇ ಆದ ಪರಂಪರೆ ಇದೆ. ಇದು ಕೇವಲ ಒಪ್ಪಿಸಿಕೊಳ್ಳುವ ಭಾಷೆಯಲ್ಲ, ಒಲಿಸಿಕೊಳ್ಳುವ ಭಾಷೆ. ಇಂತಹ ಭಾಷೆಯನ್ನು ನಾವು ಉಳಿಸಬೇಕಾಗಿದೆ. ಮೈಸೂರು ಸಾಂಸ್ಕೃತಿಕ ರಾಜಧಾನಿಯಾದರೆ ಶಿವಮೊಗ್ಗ ಸಾಹಿತ್ಯ ರಾಜಧಾನಿ ಎಂದರು.ಆಶಯ ಭಾಷಣ ಮಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ಇಂದು ಕನ್ನಡ ಭಾಷೆಗೆ ಸಂಬಂಧಿಸಿದಂತೆ ವಿಶ್ವಾಸ ಇಲ್ಲದ ವಾತಾವರಣ ಮೂಡುತ್ತಿದೆ. ಕನ್ನಡ ಭಾಷೆ ಉಳಿಯುತ್ತದೆಯೇ ಎಂಬ ಪ್ರಶ್ನೆಯೇ ನಮ್ಮನ್ನು ಬಹುವಾಗಿ ಕಾಡುತ್ತಿದೆ. ಮನಸುಗಳನ್ನು ಬೆಸೆಯುವ ಭಾಷೆ ನಮಗೆ ಬೇಕಾಗಿದೆ. ಆದರೆ, ನಮ್ಮ ಜನಪ್ರತಿನಿಧಿಗಳು ಸೇರಿದಂತೆ ಅನೇಕರು ಮನಸು ಕಟ್ಟುವ ಮಾತನಾಡುತ್ತಿದ್ದಾರೆಯೇ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ. ಕನ್ನಡಕ್ಕೆ ಕನ್ನಡಿಗರೇ ಹಿತಶತ್ರುಗಳಾಗಬಾರದು ಎಂದರು.
ಶಿಕ್ಷಣ ವ್ಯಾಪಾರೀಕರಣದ ಈ ಹೊತ್ತಲ್ಲಿ ಇಂಗ್ಲಿಷ್ ಮೋಹ ನಮ್ಮನ್ನು ಕಾಡುತ್ತಿದೆ. ಅದು ದೂರವಾಗಬೇಕು. ಕನ್ನಡದ ಮೂಲಕವೇ ಎಲ್ಲವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವಿಶ್ವಾಸ ಮೂಡಿಸಬೇಕು. ಸವಾಲುಗಳ ಮಧ್ಯೆ ಇರುವ ನಮಗೆ ಕನ್ನಡ ಭಾಷೆಯನ್ನು ಕೂಡ ಉಳಿಸುವುದು ಅಷ್ಟೇ ಕಷ್ಟವಾಗಿದೆ. ಆದರೆ, ಕನ್ನಡ ಭಾಷೆ ಎಂದೂ ಕರಗುವುದಿಲ್ಲ ಎಂದರು.ನಿಕಟಪೂರ್ವ ಕಸಾಪ ಸಮ್ಮೇಳಾನಾಧ್ಯಕ್ಷೆ ಡಾ. ವಿಜಯಾದೇವಿ ಮಾತನಾಡಿ, ಕನ್ನಡ ಕಟ್ಟುವ ಕೆಲಸವನ್ನು ನಾವು ಮಾಡಬೇಕಾಗಿದೆ. ಕನ್ನಡಕ್ಕೆ ತನ್ನದೇ ಆದ ಸಂವಿಧಾನ, ಭವ್ಯತೆ, ಅಭಿಮಾನ ಇದೆ. ಭಾಷೆಯ ಬಗ್ಗೆ ನಿರಾಕರಣೆ ಬೇಡ ಎಂದರು.ಕಸಾಪ 5 ವರ್ಷದ ಅವಧಿಯಲ್ಲಿ ಒಂದು ವರ್ಷಕ್ಕಾದರೂ ಮಹಿಳೆಯರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕು. ರಾಜ್ಯ ಸರ್ಕಾರ 15 ಸಾವಿರ ಶಿಕ್ಷಕರ ಹುದ್ದೆಗೆ ನೇಮಕಾತಿ ಕೈಗೊಂಡಿದ್ದು, ಇಲ್ಲಿ ಕನ್ನಡ ಭಾಷೆಯ ಹುದ್ದೆಗಳೇ ಇಲ್ಲ ಎಂಬುದು ವಿಷಾದನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ. ಕೆಳದಿ ಗುಂಡಾ ಜೋಯ್ಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ಉಮೇಶ್, ಕಸಾಪ ತಾಲೂಕು ಅಧ್ಯಕ್ಷರಾದ ಮಹಾದೇವಿ, ಹೆಚ್.ಎಸ್. ರಘು, ಟಿ.ಕೆ. ರಮೇಶ್ ಶೆಟ್ಟಿ, ಪ್ರಮುಖರಾದ ಮಹಾಬಲೇಶ ಹೆಗ್ಡೆ, ರಮೇಶ್ ಬಾಬು, ರಾಮಲಿಂಗಪ್ಪ ಮೊದಲಾದವರಿದ್ದರು.ಎಸ್. ಶಿವಮೂರ್ತಿ ಸ್ವಾಗತಿಸಿದರು.