ಶಿವಮೊಗ್ಗ: ಯುವ ಸಮುದಾಯ ಉತ್ತಮ ಸಂವಹನ ಕೌಶಲ್ಯ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ನಗರದ ಕಂಟ್ರಿ ಕ್ಲಬ್ ಸಭಾಂಗಣದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆಯಿAದ ಆಯೋಜಿಸಿದ್ದ ಎರಡು ದಿನಗಳ ಉತ್ತಮ ಸಂವಹನ ಕೌಶಲ್ಯ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.

ಜೆಸಿಐ ಸಂಸ್ಥೆಯು ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, ಜೆಸಿಐ ತರಬೇತಿಗೆ ಒತ್ತುಕೊಟ್ಟು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಇದರಿಂದ ಒಳ್ಳೆಯ ಅವಕಾಶ ಸಿಗುತ್ತದೆ. ನಾನು ಕೂಡ ಜೆಸಿಐ ಸದಸ್ಯ, ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದು, ಜೆಸಿಐನಿಂದ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.
ಉತ್ತಮ ಸಂವಹನ ಕೌಶಲ್ಯ ಶಿಬಿರದಲ್ಲಿ ಭಾಗಿಯಾಗಿರುವ ಎಲ್ಲ ಶಿಬಿರಾರ್ಥಿಗಳು ತರಬೇತಿಯಲ್ಲಿ ಮಾರ್ಗದರ್ಶನ ನೀಡಿದಂತೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ನಿಮ್ಮ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಒಳ್ಳೆಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ಕಾರ್ಯಗಾರದಲ್ಲಿ ಜೆಸಿಐ ಸದಸ್ಯರು ಹಾಗೂ ಇತರೆ ಸದಸ್ಯರು ಭಾಗವಹಿಸಿದ್ದು, ಕಾರ್ಯಾಗಾರದಲ್ಲಿ ನಾಯಕತ್ವದ ಗುಣಗಳು, ವ್ಯಕ್ತಿಗತವಾದ ವಿಷಯಗಳು, ಸಂಘ ಸಂಸ್ಥೆಗಳ ನಿಯಮಗಳ ಪಾಲನೆಗಳು, ವೈಯಕ್ತಿಕವಾಗಿ ಕಾರ್ಯಕ್ರಮಗಳಲ್ಲಿ ಮಾತನಾಡುವ ಶೈಲಿ ಹೇಗಿರಬೇಕು, ಕಾರ್ಯಗಾರದಲ್ಲಿ ನಿಯಮಗಳ ಪಾಲನೆ ಹೇಗೆ ಮಾಡಬೇಕು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಕಾರ್ಯಗಾರದಲ್ಲಿ ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜೆಸಿಐ ವತಿಯಿಂದ ವಿದ್ಯಾರ್ಥಿಗಳಿಗೆ, ಇತರೆ ಕ್ಷೇತ್ರದ ಕಾರ್ಮಿಕರಿಗೆ ಅನುಕೂಲ ಆಗುಗುವಂತಹ ಕಾರ್ಯಗಾರಗಳನ್ನು ಆಯೋಜಿಸಲಾಗುವುದು. ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿ.ವಿಜಯ್‌ಕುಮಾರ್ ಮಾತನಾಡಿ, ಜೆಸಿಐ ಸಂಸ್ಥೆಯ ಭಾಗ ಆಗುವುದರಿಂದ ವಾಕ್ ಚಾತುರ್ಯತೆ ಹಾಗೂ ವ್ಯಕ್ತಿಗತವಾಗಿ ಬೆಳವಣಿಗೆ ಬಗ್ಗೆ ಅನೇಕ ಕಾರ್ಯಗಾರಗಳಲ್ಲಿ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಯಾದ ಜೆಸಿಐ ಕಾರ್ಯಗಾರಗಳನ್ನು ಮಾಡುವ ಜತೆಯಲ್ಲಿ ಸಮಾಜಕ್ಕೆ ಅನುಕೂಲವಾಗುವಂತ ಅನೇಕ ಯೋಜನೆಗಳು ಮಾಡುತ್ತ ಬಂದಿರುವುದು ಶ್ಲಾಘನೀಯವಾಗಿದೆ ಎಂದರು.
ಕಾರ್ಯಗಾರದಲ್ಲಿ ಹೆಸರಾಂತ ವೈದ್ಯರು ಹಾಗೂ ಉದ್ಯಮಿಗಳು, ಜೆಸಿಐ ಸದಸ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ತರಬೇತುದಾರರಾಗಿ ಮೈಸೂರಿನ ಅಂತರಾಷ್ಟ್ರೀಯ ತರಬೇತುದಾರ ಕುನಾಲ್ ಮಾಣಿಕ್ ಚಂದ್ ಹಾಗೂ ಪ್ರಜ್ವಲ್ ಭಾಗವಹಿಸಿದ್ದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ಕಾರ್ಯದರ್ಶಿ ಸಂತೋಷ್ ಕುಮಾರ್, ಪಿಆರ್ ಮಾರ್ಕೆಟಿಂಗ್ ಭಾರತಿ, ಜೋನಲ್ ಡೈರೆಕ್ಟರ್ ಅನುಷ್ ಗೌಡ, ಸಪ್ನಾ ಬದ್ರಿನಾಥ್, ಡಾ. ಲಲಿತ, ಹಿರಿಯ ಸದಸ್ಯರಾದ ಶೇಷಗಿರಿ, ಕಿಶೋರ್ ಕುಮಾರ್, ಶಿಬಿರಾರ್ಥಿಗಳು ಹಾಗೂ ಇನ್ನೂ ಅನೇಕ ಸದಸ್ಯರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…