ಶಿವಮೊಗ್ಗ: ನಾನು ಆರೋಪಮುಕ್ತನಾಗಿ ಹೊರ ಬರುತ್ತೇನೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಇಂದು ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದಂತೆ, ಸಚಿವರಾಗಿಯೇ ಮುಂದುವರೆಯುವಂತೆ ಕಾರ್ಯಕರ್ತರು ಘೋಷಣೆ ಕೂಗಿ ಒತ್ತಾಯಪಡಿಸಿದ ಹಿನ್ನಲೆಯಲ್ಲಿ, ಕಾರ್ಯಕರ್ತರು ಕಣ್ಣೀರಿನ ಬೀಳ್ಕೊಡುಗೆ ನೀಡಬೇಡಿ. ಈ ಆಪಾದನೆಯಿಂದ ನಾನು ಮುಕ್ತನಾಗಿ ಬರಲು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ತನಿಖೆಗೆ ಅಡ್ಡಿಯಾಗುತ್ತದೆ ಎಂಬ ಭಾವನೆ ಇದೆ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ನೀವೆಲ್ಲರೂ ಅತ್ತು ನನ್ನನ್ನು ಕಳಿಸಬಾರದು ಎಂದರು. ಪ್ರಸ್ತುತ ನನಗೆ ಅಗ್ನಿ ಪರೀಕ್ಷೆ ಎದುರಾಗಿದ್ದು, ಇದನ್ನು ಎದುರಿಸಿ ಯಶಸ್ವಿಯಾಗಿ ಹೊರ ಬರುತ್ತೇನೆ.
ಜೀವನ ಇರುವವರೆಗೆ ಸಂಘಟನೆ ಮೂಲಕ ದೇಶದ ಕೆಲಸವನ್ನು ಹೆಚ್ಚು ಮಾಡುತ್ತೇನೆ. ದೇಶದ ಬಡಜನರು, ಹಿಂದುಳಿದವರು, ದಲಿತರ ಪರ ಕೆಲಸ ಮಾಡೋಣ, ರಾಜ್ಯದಲ್ಲಾಗುತ್ತಿರುವ ಹಿಂದೂಗಳ ಮೇಲಾಗುತ್ತಿರುವ ಸಂಘರ್ಷದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ನಾಯಕರಿಗೆ ಸರಿಯಾದ ಉತ್ತರ ಕೊಡೋಣ ಎಂದರು.ಅಳುತ್ತಾ ನನ್ನನ್ನು ಕಳಿಸಬೇಡಿ, ಯಾವುದೇ ಆಪಾದನೆ ಇಲ್ಲದೇ ಆರೋಪದಿಂದ ಮುಕ್ತರಾಗಿ ಹೊರ ಬನ್ನಿ ಎಂದು ತಾಯಂದಿರ ಆಶೀರ್ವಾದ ಮಾಡಿ ಕಳಿಸಿಕೊಡಿ. ರಾಜೀನಾಮೆ ನೀಡಿ ಬರುತ್ತೇನೆ. ಮತ್ತೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದರು.ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಹಿಸಿದಾಗ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ.
ಪಕ್ಷದ ನಾಯಕರು ಈಗ ಪರ್ವ ಕಾಲವಾಗಿದ್ದು, ಪಕ್ಷ ಸಂಘಟನೆ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಹೇಳಿದಾಗ ನಿಮಿಷವೂ ಯೋಚಿಸದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟನೆ ಮಾಡಿದೆ. ಈಗ ಆರೋಪ ಕೇಳಿ ಬಂದ ಕಾರಣ ರಾಜೀನಾಮೆ ಕೊಡುತ್ತಿದ್ದೇನೆ. ನಾಲ್ಕೈದು ದಿನಗಳಿಂದ ರಾಜ್ಯದ ಜನರು, ಹಿರಿಯರು, ಮಠಾಧೀಶರು, ಕಾರ್ಯಕರ್ತರು, ಮುಖಂಡರ ಪ್ರೀತಿಯನ್ನು ಕಂಡು ಆಶ್ಚರ್ಯವಾಗಿದೆ. ಅವರೆಲ್ಲರ ಪ್ರೀತಿಗೆ ಪಾತ್ರನಾಗಿದ್ದೇನೆ. ನೀವು ಸಂತೋಷದಿಂದ ನನ್ನನ್ನು ಕಳಿಸಿಕೊಡಿ. ರಾಜೀನಾಮೆ ನೀಡಿ ನಾನು ಮಾಡದಿರುವ ತಪ್ಪಿನಿಂದ ಆರೋಪ ಮುಕ್ತನಾಗಿ ಬರುತ್ತೇನೆ ಎಂದರು.