ಶಿವಮೊಗ್ಗ: ಬೇಡ ಜಂಗಮ ಸಮಾಜಕ್ಕೆ ರಾಜ್ಯ ಸರ್ಕಾರದ ಸದನ ಸಮಿತಿಯಿಂದ ಅವಮಾನವಾಗಿದೆ ಎಂದು ಆರೋಪಿಸಿ ಜಿಲ್ಲಾ ಬೇಡ ಜಂಗಮ ಸಮಾಜದ ಪ್ರಮುಖರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರದ ಸದನ ಸಮಿತಿ ಸಭೆಯಲ್ಲಿ ಬೇಡ ಜಂಗಮ ಒಕ್ಕೂಟದ ರಾಜ್ಯಾಧ್ಯಕ್ಷರಾದ ಬಿ.ಡಿ. ಹಿರೇಮಠ್ ಅವರು ಬೇಡ ಜಂಗಮ ಸಮಾಜಕ್ಕೆ ಕೇಂದ್ರ ಸರ್ಕಾರದ ಅಧಿನಿಯಮ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿದ್ದು, ಕಾನೂನು ಬದ್ಧವಾಗಿ ಜಾತಿ ಪ್ರಮಾಣ ಪತ್ರ ಮತ್ತು ನಿಗಮ ಸ್ಥಾಪನೆಗೆ ಮನವಿ ಸಲ್ಲಿಸಿದ್ದು, ಈ ವಿಷಯ ಕುರಿತು ಮಾತನಾಡುತ್ತಿರುವಾಗ ಸದನ ಸಮಿತಿಯ ಪದಾಧಿಕಾರಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ಸಭೆಯಲ್ಲಿ ನಡೆದ ಈ ವಿಚಾರ ಇಡೀ ಬೇಡ ಜಂಗಮ ಸಮಾಜಕ್ಕೆ ಅವಮಾನ ಮಾಡಿದಂತಾಗಿದೆ. ರಾಜ್ಯಾಧ್ಯಕ್ಷರನ್ನು ಅವಮಾನ ಮಾಡಿದ ಸದನ ಸಮಿತಿಯ ಸದಸ್ಯರನ್ನು ವಜಾ ಮಾಡಬೇಕು. ಸಮಾಜಕ್ಕೆ ಸಿಗಬೇಕಾದ ಕಾನೂನುಬದ್ಧ ಪ್ರಮಾಣ ಪತ್ರವನ್ನು ಸರ್ಕಾರ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಪ್ರಮುಖರಾದ ಎಸ್. ಬಸಯ್ಯ, ವೀರಸಂಗಯ್ಯ, ಕೆ.ಆರ್. ಸೋಮನಾಥ್, ಗಿರಿಜಮ್ಮ, ಸುನಂದಾ ಹಿರೇಮಠ, ಸುಜಾತಾ, ಸರೋಜ, ಜ್ಯೋತಿ, ಉಮಾದೇವಿ, ತೇಜಸ್ವಿನಿ, ಮಲ್ಲಿಕಾರ್ಜುನಯ್ಯ, ಷಣ್ಮುಖಯ್ಯ ಇದ್ದರು.