ಶಿವಮೊಗ್ಗ: ಬಿಜೆಪಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಚಾಚಿಕೊಂಡಿದೆ. ಇದರ ವಿರುದ್ಧ ಕಾಂಗ್ರೆಸ್ ನಿರಂತರ ಹೋರಾಟವನ್ನು ಮುಂದುವರೆಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್
ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಆರೋಗ್ಯ, ಶಿಕ್ಷಣ, ಪೊಲೀಸ್,ಪ್ರವಾಸೋದ್ಯಮ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಭ್ರಷ್ಟಾಚಾರ ತುಂಬಿದ್ದು,
ಶೇ.40ರಷ್ಟು ಕಮಿಷನ್ ಈಗ ರಾಜ್ಯದ ಮನೆ ಮಾತಾಗಿದೆ. ಹಣ ದೋಚುವುದೇ ಬಿಜೆಪಿಯ ಸಂಸ್ಕೃತಿಯಾಗಿದೆ ಎಂದು ಟೀಕಿಸಿದರು.
ಈಶ್ವರಪ್ಪ ಅವರ 40 ಪರ್ಸೆಂಟ್ ಕಮಿಷನ್, ಸಿ.ಎನ್. ಅಶ್ವತ್ಥನಾರಾಯಣ ಅವರ ಹಗರಣ, ಹಾಗೆಯೇ ಇತರ ಸಚಿವರುಗಳ ಇಲಾಖೆಗಳಲ್ಲಿನ ಭ್ರಷ್ಟಾಚಾರ ಇವೆಲ್ಲವನ್ನೂ ನಿವೃತ್ತ ನ್ಯಾಯಾಧೀಶರಿಂದಲೇ ತನಿಖೆ ನಡೆಸಬೇಕಾಗುತ್ತದೆ. ಅವರ ಪಕ್ಷದವರೇ ಮುಖ್ಯಮಂತ್ರಿ ಅಸಮರ್ಥ ಎಂದು ಹೇಳುತ್ತಿದ್ದಾರೆ. ಈ ಭ್ರಷ್ಟಾಚಾರದ ಜೊತೆಗೆ ಈಗ ನಾಲ್ಕನೇ ಅಲೆಯ ಕೊರೋನಾ
ಆಗಮಿಸುತ್ತದೆ ಎಂದು ಸರ್ಕಾರ ಜನರನ್ನು ದಿಕ್ಕುತಪ್ಪಿಸಲು ಹೊರಟಿದೆ. ಅಲ್ಲಯೂ ಕೂಡ ಹಣ
ದುರ್ಬಳಕೆಯಾಗುತ್ತಿದೆ. ತಮ್ಮೆಲ್ಲ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಬಿಜೆಪಿ ಬೇರೆ ಬೇರೆ ವಿಷಯಗಳತ್ತ ಜನರ ಗಮನ ಸೆಳೆಯಲು ಯತ್ನಿಸುತ್ತಿದೆ ಎಂದು ದೂರಿದರು.
ಸಹಕಾರ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ. ಅಡ್ಡದಾರಿ ಹಿಡಿದು ಚುನಾವಣೆಗಳ ನಡೆಸುತ್ತಾ ಸಹಕಾರ ಕ್ಷೇತ್ರದಲ್ಲೂ ರಾಜಕೀಯ ಹಸ್ತಕ್ಷೇಪ ಮಾಡುತ್ತಿದ್ದಾರೆ. ಶಿಮುಲ್ ಅಧ್ಯಕ್ಷರ ಚುನಾವಣೆ ಮತ್ತು ಶಿವಮೊಗ್ಗ ಟಿಎಪಿಸಿಎಂಸಿ ಸಾಮಾನ್ಯ ಹುದ್ದೆಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳು ಬಿಜೆಪಿ ಮುಖಂಡರ ಮಾತುಕೇಳಿ ನಿರ್ದೇಶಕರನ್ನೇ ಅನರ್ಹಗೊಳಿಸಿದರು. ಹಾಗೆಯೇ ಆರ್.ಎಂ. ಮಂಜುನಾಥಗೌಡರ ನಾಮಪತ್ರವನ್ನು ತಿರಸ್ಕರಿಸಿದರು.ಇದೆಲ್ಲವೂ ಅಧಿಕಾರ ಹಿಡಿಯುವ ಕುತಂತ್ರವಾಗಿತ್ತು ಎಂದು ದೂರಿದರು.
ಹೈಕೋರ್ಟ್ ಈಗ ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಕಪಾಳಮೋಕ್ಷ
ಮಾಡಿದೆ. ಅಧಿಕಾರಿಗಳಿಗೆ ದಂಡ ಹಾಕಿದೆ. ಇಲಾಖೆ ತನಿಖೆ ನಡೆಸಲು ಹೇಳಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು. ಈಗ ಡಿಸಿಸಿ ಬ್ಯಾಂಕ್ ಗೆ ನಾಗೇಶ್ ಡೋಂಗ್ರೆ ಅವರನ್ನ ವರ್ಗಾವಣ ಮಾಡಲಾಗಿದೆ. ಇದರ ಹಿಂದೆ ಬಹುದೊಡ್ಡ ಲಾಬಿ ಇದೆ. ಕಾರಣ, ಡಿಸಿಸಿ ಬ್ಯಾಂಕ್ ನಲ್ಲಿ ಸುಮಾರು 98 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಕೂಡ
ಭ್ರಷ್ಟಾಚಾರ ಸುಲಭವಾಗಲಿ ಎಂಬ ಕಾರಣಕ್ಕಾಗಿ ನಾಗೇಶ್ ಡೋಂಗ್ರೆ ಅವರನ್ನು ವರ್ಗಾವಣೆ
ಮಾಡಲಾಗಿದೆ ಎಂದು ಆರೋಪಿಸಿದರು.
ಶಿಮುಲ್ ಪ್ರಭಾರ ಅಧ್ಯಕ್ಷ ಬಸಪ್ಪ ಮತ್ತು ನಿರ್ದೇಶಕ ಶಿವಶಂಕರ್ ಮಾತನಾಡಿ, ನಮ್ಮಿಬ್ಬರ ಜೊತೆಗೆ ವಿದ್ಯಾಧರ ಎಂಬ ಮತ್ತೊಬ್ಬ ನಿರ್ದೇಶಕರನ್ನು ಚುನಾವಣೆಯ ಹಿನ್ನೆಲೆಯಲ್ಲಿ ಅನರ್ಹಗೊಳಿಸಲಾಯಿತು. ಕಾನೂನುಬಾಹಿರವಾಗಿ ಚುನಾವಣೆಯನ್ನು ಮುಂದಕ್ಕೆ ಹಾಕಿ
ಸರ್ಕಾರದಿಂದ ನಿರ್ದೇಶಕರನ್ನು ನಾಮನಿರ್ದೇಶನ ಮಾಡಿ ಅಡ್ಡದಾರಿ ಹಿಡಿದು ಚುನಾವಣೆ
ನಡೆಸಿ ಶ್ರೀಪಾದ್ ಹೆಗಡೆ ನಿಸ್ರಾಣಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಇದನ್ನು
ವಿರೋಧಿಸಿ ನಾವು ನ್ಯಾಯಾಲಯಕ್ಕೆ ಹೋಗಿದ್ದೆವು. ಈಗ ನಮಗೆ ಜಯ ಸಿಕ್ಕಿದೆ ಎಂದರು.
ಬಿಜೆಪಿಯ ಕೆಟ್ಟ ಸಂಸ್ಕೃತಿ ಸಹಕಾರ ಕ್ಷೇತ್ರದಲ್ಲೂ ವ್ಯಾಪಿಸಿರುವುದು ಅತ್ಯಂತ ಖಂಡನೀಯ. ಶ್ರೀಪಾದ ಹೆಗಡೆ ನಿಸ್ರಾಣಿ ಯವರು ತಮ್ಮ ಅಧಿಕಾರಾವಧಿಯಲ್ಲಿ ಶಿಮುಲ್ ನಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಅದು ಕೂಡ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಿ.ಎಸ್. ಚಂದ್ರಭೂಪಾಲ್, ಚಂದನ್, ರಾಮೇಗೌಡ,
ಚಂದ್ರಶೇಖರ್, ವಿಶ್ವನಾಥ್ ಕಾಶಿ, ಎನ್.ಡಿ. ಪ್ರವೀಣ್ ಇದ್ದರು.