ಶಿವಮೊಗ್ಗ: ಪಿಎಸ್ಐ ಹುದ್ದೆಗಳ ನೇಮಕದ ಅಕ್ರಮದಲ್ಲಿ ಭಾಗಿಯಾಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಎನ್.ಎಸ್.ಯು.ಐ. ಕಾರ್ಯಕರ್ತರು ನಗರದ ಮಹಾವೀರ ವೃತ್ತದಲ್ಲಿ ಪಿಎಸ್ಐ ಸಮವಸ್ತ್ರ ಧರಿಸಿ, ನಕಲಿ ನೋಟುಗಳ ಹಾರ ಹಾಕಿಕೊಂಡು, ಸಚಿವ ಅಶ್ವತ್ಥನಾರಾಯಣರ ಮುಖವಾಡ ಧರಿಸಿ ಲಂಚ ಪಡೆಯುವ ಅಣಕು ಪ್ರದರ್ಶನ ನಡೆಸುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ನಡೆಸಿದ 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು ಬೆಳಕಿಗೆ ಬಂದಿದೆ. ಇದರಲ್ಲಿ ಉನ್ನತ ಶಿಕ್ಷಣ ಸಚಿವರ ಸಂಬಂಧಿ ಭಾಗಿಯಾಗಿರುವುದರಿಂದ ಕೂಡಲೇ ಸಚಿವರನ್ನು ಸಚಿವ ಸ್ಥಾನದಿದ ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಹಗರಣಗಳು ನಡೆಯುತ್ತಲೇ ಇವೆ. ಪಿಎಸ್ಐ ಹುದ್ದೆಗಳ ನೇಮಕಾತಿಯೂ ಇದರಲ್ಲಿ ಸೇರ್ಪಡೆಯಾಗಿದೆ. ನೇಮಕಾತಿಯಲ್ಲಿ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆದಿದ್ದು, ಸಚಿವರ ಹೆಸರು ಇದರಲ್ಲಿ ಸೇರಿದೆ. ಆದ್ದರಿಂದ ಅವರನ್ನು ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಒತ್ತಾಯಿಸಿದರು.
ಸಿಐಡಿಗೆ ಈ ಹಗರಣದ ತನಿಖೆ ವಹಿಸಿದ್ದು, ತನಿಖೆ ನಡೆಯುತ್ತಿರುವಾಗಲೇ ಅಕ್ರಮವೆಸಗಿದವರ ಮೇಲೆ ಕ್ರಮ ಕೈಗೊಳ್ಳುವ ಬದಲು ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸುವುದು ಎಷ್ಟರಮಟ್ಟಿಗೆ ಸರಿ? ಕೂಡಲೇ ಸರ್ಕಾರ ಮರು ಪರೀಕ್ಷೆ ನಡೆಸುವ ನಿರ್ಧಾರ ಕೈಬಿಡಬೇಕು. ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಜರುಗಿಸಿ ಪ್ರಾಮಾಣಿಕರನ್ನು ನೇಮಕ ಮಾಡಿಕೊಳ್ಳಬೇಕು. ಈ ಹಗರಣದಲ್ಲಿ ರಾಜಕಾರಣಿಗಳು ಭಾಗಿಯಾಗಿರುವುದರಿಂದ ಕೂಡಲೇ ಈ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಚರಣ್, ಹರ್ಷಿತ್, ಎಸ್.ಎನ್. ವಿಜಯಕುಮಾರ್, ರವಿ, ಸಂಜಯ್, ವಿಶಾಲ್, ಸುಹಾಸ್, ವೆಂಕಟೇಶ್, ಸಂದೀಪ್, ತೌಫಿಕ್, ಮಧುಸೂದನ್, ಕೆ. ಚೇತನ್, ಜಿ.ಡಿ. ಮಂಜುನಾಥ್, ಶಿವು, ಅಬ್ದುಲ್ ಸತ್ತಾರ್, ಚಂದ್ರೋಜಿರಾವ್, ಸಾಗರ್, ಮಂಜು ಮೊದಲಾದವರಿದ್ದರು.