ಶಿವಮೊಗ್ಗ: ಅವ್ಯವಸ್ಥೆಗಳ ಆಗರವಾಗಿದ್ದ ಹಳೆ ಜೈಲ್ ಆವರಣದಲ್ಲಿರುವ ಚಂದ್ರಶೇಖರ್ ಆಜಾದ್ ಫ್ರೀಡಂ ಪಾರ್ಕ್ ಗೆ ಇಂದು ಸಾರ್ವಜನಿಕರ ಮತ್ತು ಸ್ಥಳೀಯರ ದೂರಿನ ಮೇರೆಗೆ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಭೇಟಿ ನೀಡಿ ಕುಂದುಕೊರತೆಗಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪ್ರತಿನಿತ್ಯ ಅಲ್ಲಿ ವಾಯುವಿಹಾವರ ನಡೆಸುವ ಹಿರಿಯ ನಾಗರಿಕರು ಅಲ್ಲಿನ ಹಲವಾರು ಸಮಸ್ಯೆಗಳ ಬಗ್ಗೆ ಗಮನಸೆಳೆದರು. ಶಿವಮೊಗ್ಗದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಮತ್ತು ಸಭೆ ಸಮಾರಂಭಗಳಿಗೆ ಹಾಗೂ ಇನ್ನಿತರ ಚಟುವಟಿಕೆಗಳ ಅನುಕೂಲಕ್ಕೆ ತಕ್ಕಂತೆ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿ ಪೂರ್ಣಗೊಳಿಸಿ ಜನತೆಯ ಉಪಯೋಗಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಸಾರ್ವಜನಿಕರಾಗಿ ನಿರ್ಮಾಣವಾದ ವಾಕಿಂಗ್ ಪಾಥ್ ನಲ್ಲಿ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸುವುದು, ಫುಟ್ ಪಾತ್ ಅನ್ನು ವ್ಯಾಪಾರಕ್ಕೆ ಬಳಸಿಕೊಳ್ಳುವುದು, ರಾತ್ರಿ ಹೊತ್ತು ಮದ್ಯವ್ಯಸನಿಗಳ ಅಡ್ಡೆಯಾಗಿದ್ದು, ಕುಡಿದ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುವುದಲ್ಲದೇ, ತಿಂಡಿ ತಿನಿಸುಗಳ ಪೊಟ್ಟಣಗಳನ್ನು ಬಿಸಾಕುವುದು.

ವಿದ್ಯುತ್ ದೀಪಗಳನ್ನು ಹೊಡೆದು ಹಾಕುವುದು ಸೇರಿದಂತೆ ಎಲ್ಲಾ ರೀತಿಯ ಅಕ್ರಮ ಚಟುವಟಿಕೆಗಳ ತಾಣವಾಗಿದೆ ಎಂದು ಸ್ಥಳೀಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.ಗಬ್ಬೆದ್ದ ಶೌಚಾಲಯ, ಶುದ್ಧ ಕುಡಿಯುವ ನೀರಿನ ಕೊರತೆ, ನಿರ್ವಹಣೆ ಇಲ್ಲದೇ ಇರುವುದು, ಭದ್ರತಾ ಲೋಪ ಮತ್ತು ರಾತ್ರಿ ವಾಯು ವಿಹಾರಕ್ಕೆ ಬಂದರೆ ರೌಡಿಗಳ ಹಾವಳಿ, ಸೂಕ್ತ ರಕ್ಷಣೆ ಇಲ್ಲದಿರುವುದರ ಬಗ್ಗೆ ಮತ್ತು ಸ್ಥಳದಲ್ಲಿ ಅನೇಕ ತೆಂಗಿನ ಮರಗಳಿದ್ದು, ತೆಂಗಿನ ಕಾಯಿ ಕಳ್ಳರ ಬಗ್ಗೆಯೂ ಜಿಲ್ಲಾಧಿಕಾರಿಗಳ ಗಮನಸೆಳೆಯಲಾಯಿತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತಕ್ಷಣ ಶೌಚಾಲಯ ವ್ಯವಸ್ಥೆ ಮತ್ತು ಫ್ರೀಡಂ ಪಾರ್ಕ್ ಸುರಕ್ಷತೆ, ಮೂಲ ಸೌಲಭ್ಯ ಕಲ್ಪಿಸುವುದು, ಕುಂದು ಕರತೆ ನಿವಾರಿಸುವುದರ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಿದರು. ಹಾಗೂ ಸ್ಥಳದಲ್ಲಿರುವ ತೆಂಗಿನ ಮರಗಳಿಂದ ಬರುವ ಆದಾಯ ಬಳಸಿಕೊಂಡು ಫ್ರೀಡಂ ಪಾರ್ಕ್ ನಿರ್ವಹಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕಾ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ಹೃಷಿಕೇಶ್ ಪೈ, ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಮೊದಲಾದವರಿದ್ದರು. 

ವರದಿ ಮಂಜುನಾಥ್ ಶೆಟ್ಟಿ…